ಸಿನೆಮಾ ಚಿತ್ರೀಕರಣಕ್ಕೆ ಅನುಮತಿ ನೀಡಲು ಮುಖ್ಯಮಂತ್ರಿಗೆ ಮನವಿ

Update: 2020-05-29 17:58 GMT

ಬೆಂಗಳೂರು, ಮೇ 29: ಲಾಕ್‍ಡೌನ್ ನಡುವೆ ಸಿನೆಮಾ ಚಿತ್ರೀಕರಣಕ್ಕೆ ಅನುಮತಿ ನೀಡುವಂತೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್ ಮನವಿ ಮಾಡಿದ್ದಾರೆ.

ಶುಕ್ರವಾರ ನಗರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಭೇಟಿ ಮಾಡಿದ ಅವರು, ಲಾಕ್‍ಡೌನ್ 4ರಲ್ಲಿ ಕಿರುತೆರೆ ಚಿತ್ರೀಕರಣ ಸೇರಿದಂತೆ ವಿವಿಧ ಕೆಲಸ ಕಾರ್ಯಗಳಿಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಸಿನೆಮಾ ಚಿತ್ರೀಕರಣಕ್ಕೂ ಅನುಮತಿ ನೀಡುವಂತೆ ಮನವಿ ಪತ್ರ ಸಲ್ಲಿಸಿದರು.

ಕಳೆದ ಎರಡು ತಿಂಗಳಿನಿಂದ ಸಿನೆಮಾ ಚಿತ್ರೀಕರಣ ನಡೆಯದೇ ಇರುವುದರಿಂದ ಬಹಳಷ್ಟು ಮಂದಿ ತೊಂದರೆಗೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಮಿಕರು, ಕಲಾವಿದರು, ತಂತ್ರಜ್ಞರು ಹಾಗೂ ಚಿತ್ರೋದ್ಯಮದ ಹಿತದೃಷ್ಟಿಯಿಂದ ಚಿತ್ರೀಕರಣಕ್ಕೆ ಅವಕಾಶ ಕೊಡುವಂತೆ ಮನವಿ ಮಾಡಲಾಗಿದೆ. ಇದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪೂರಕವಾಗಿ ಸ್ಪಂದಿಸಿದ್ದಾರೆಂದು ಅವರು ಹೇಳಿದರು.

ಲಾಕ್‍ಡೌನ್ ಹಿನ್ನೆಲೆಯಲ್ಲಿ ಸರಕಾರ ನೀಡಿದ 2 ಕೋಟಿ ರೂ.ಮೌಲ್ಯದ ದಿನಸಿ ಕೂಪನ್‍ಗಳನ್ನು ಚಲನಚಿತ್ರ ಕಾರ್ಮಿಕರು, ಕಲಾವಿದರು, ತಂತ್ರಜ್ಞರು ಸೇರಿದಂತೆ ಚಿತ್ರೋದ್ಯಮದಲ್ಲಿ ತೊಡಗಿಸಿಕೊಂಡವರಿಗೆ ನೀಡಲಾಗಿದೆ. ಇದರಿಂದ ಹೆಚ್ಚು ಅನುಕೂಲವಾಗಿದೆ ಎಂದು ಅವರು ತಿಳಿಸಿದರು.

ಈ ವೇಳೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್, ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದ್, ನಿರ್ಮಾಪಕರಾದ ಕೆ.ಮಂಜು, ಎಂ.ಎನ್.ಸುರೇಶ್, ಎ.ಗಣೇಶ್, ವಾಣಿಜ್ಯ ಮಂಡಳಿಯ ಉಪಾಧ್ಯಕ್ಷ ಉಮೇಶ್ ಬಣಕಾರ್, ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್‍ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News