ತಮ್ಮ ವಿರುದ್ಧದ ದ್ವೇಷಕ್ಕೆ ಪ್ರೀತಿ, ಸೇವೆ ಮರಳಿಸಿ ಮನಗೆದ್ದ ಗುಜರಾತಿ ಮುಸ್ಲಿಮರು

Update: 2020-05-30 14:24 GMT

ಸಹೃದಯಿ ಮುಸ್ಲಿಂ ನಾಗರಿಕರು ಮತ್ತು ಅಲ್ಪಸಂಖ್ಯಾತ ಸಮುದಾಯದ ನಿಸ್ವಾರ್ಥ ಸಂಘಟನೆಗಳು ಕೊರೋನ ವೈರಸ್ ಸಾಂಕ್ರಾಮಿಕದ ಸಂದರ್ಭದಲ್ಲಿ ಸಲ್ಲಿಸಿದ ಪವಿತ್ರ ಸೇವೆ ಇದೀಗ ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯ ಗುಜರಾತ್ ನಲ್ಲಿ ಪ್ರತಿಯೊಬ್ಬರೂ ನಿಬ್ಬೆರಗಾಗುವಂತೆ ಮಾಡಿದೆ.

ಬಿಜೆಪಿ ಆಡಳಿತದ ರಾಜ್ಯದಲ್ಲಿ 60 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿರುವ ಮುಸ್ಲಿಮರನ್ನು ದ್ವೇಷಬಿತ್ತುವ ಒಂದು ವರ್ಗ ಭಿನ್ನವಾಗಿ ಕಂಡರೂ, ಆ ಸಮುದಾಯದ ಸೇವಾ ಮನೋಭಾವದ ವೈದ್ಯರು, ವ್ಯಾಪಾರಿಗಳು, ಉನ್ನತ ಅಧಿಕಾರಿಗಳು, ಸಮಾಜ ಸೇವಕರು ಮತ್ತು ವಿನಮ್ರ ರಿಕ್ಷಾ ಚಾಲಕರು ಕೂಡಾ ಇಲ್ಲಿ ಯೋಧರಾಗಿದ್ದಾರೆ. ರಾಜ್ಯದಲ್ಲಿ 15,575ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿದ್ದು, 960 ಮಂದಿ ಜೀವ ಕಳೆದುಕೊಂಡಿದ್ದಾರೆ. ಇದರ ನಡುವೆಯೂ ಕೊರೋನ ವಿರುದ್ಧದ ಹೋರಾಟದಲ್ಲಿ ಈ ಸೇವಾ ಯೋಧರು ಬೀದಿಗಿಳಿದು ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ.

ಆರಂಭದಲ್ಲಿ ಗುಜರಾತಿನ ಸಾಂಸ್ಕೃತಿಕ ರಾಜಧಾನಿ ವಡೋದರಾದ ಮುಸ್ಲಿಂ ಮೊಹಲ್ಲಾದ ಯುವಕರು ಈದ್ ಉಲ್ ಫಿತ್ರ್ ದಿನದಂದು ಕೊರೋನ ವೈರಸ್ ಸೋಂಕಿನ ವಿರುದ್ಧದ ಹೋರಾಟಕ್ಕೆ ಬೆಂಬಲ ಸೂಚಿಸಿ ರಕ್ತದಾನ ಮಾಡುವ ಮೂಲಕ ಸೇವಾಕಾರ್ಯಕ್ಕೆ ನಾಂದಿ ಹಾಡಿದರು. ಖ್ಯಾತ ಶಿಕ್ಷಣ ತಜ್ಞ ಝುಬೇರ್ ಗೋಪಲಾನಿಯವರಿಗೆ ಇದರ ಕೀರ್ತಿ ಸಲ್ಲುತ್ತದೆ.

ಸ್ಥಳೀಯ ಮೂರು ರಕ್ತನಿಧಿಗಳಲ್ಲಿ ರಕ್ತದ ಕೊರತೆ ಇರುವುದನ್ನು ಸ್ಥಳೀಯ ಆಡಳಿತ ಗಮನಕ್ಕೆ ತಂದಾಗ ಝುಬೇರ್  ತಮ್ಮ ಸಹೋದ್ಯೋಗಿ ಹಾಗೂ ಎಚ್ಐವಿ ತಜ್ಞ ಡಾ. ಮೊಹ್ಮದ್ ಹುಸೈನ್ ಅವರ ಜತೆ ಸೇರಿ ನಗರದ ವಿವಿಧೆಡೆಗಳಿಗೆ ತೆರಳಿ ಈ ಪರಿಸ್ಥಿತಿ ನಿಭಾಯಿಸಲು ನೆರವಾಗುವಂತೆ ಮನವಿ ಮಾಡಿದರು. ಪರಿಣಾಮವಾಗಿ ಹಲವಾರು ಸ್ವಯಂಸೇವಕರು ತಮ್ಮ ಹಬ್ಬದ ಸಂಭ್ರಮಾಚರಣೆಯನ್ನು ತ್ಯಾಗಮಾಡಿ, ತಾತ್ಕಾಲಿಕ ರಕ್ತದಾನ ಶಿಬಿರಗಳನ್ನು ಮುಸ್ಲಿಂ ಕಾಲನಿಗಳಲ್ಲಿ ಆಯೋಜಿಸಿದರು.

“ಜೀವರಕ್ಷಣೆಗಾಗಿ ರಕ್ತದಾನದ ಉಡುಗೊರೆ ನೀಡುವ ಮೂಲಕ ಈದ್ ಆಚರಿಸೋಣ” ಎಂಬ  ಘೋಷವಾಕದ್ಯದೊಂದಿಗೆ ಅಭಿಯಾನ ನಡೆಸಿದರು. ಸುಮಾರು 300 ಬಾಟಲಿ ರಕ್ತ ಕೆಲವೇ ಗಂಟೆಗಳಲ್ಲಿ ಸಂಗ್ರಹವಾಯಿತು” ಎಂದು ಜನಪ್ರಿಯ ಮುಖಂಡ ಹಾಗೂ ಉದ್ಯಮಿ ಝುಬೇರ್ ವಿವರಿಸಿದರು.

ಬರೋಡಾ ಮುಸ್ಲಿಂ ಡಾಕ್ಟರ್ಸ್ ಅಸೋಸಿಯೇಶನ್ ಜತೆ ಗುರುತಿಸಿಕೊಂಡಿರುವ ಇವರು ವಡೋದರದ ಇಬ್ರಾಹಿಂ ಬವಾನಿ ಐಟಿಐ ಆಸ್ಪತ್ರೆಯನ್ನು ಆದರ್ಶ ಕೋವಿಡ್ ಚಿಕಿತ್ಸಾ ಕೇಂದ್ರವಾಗಿ ಪರಿವರ್ತಿಸುವಲ್ಲಿ ಕೂಡಾ ಪ್ರಮುಖ ಪಾತ್ರ ವಹಿಸಿದರು. ಕೇಂದ್ರದಿಂದ ಆಗಮಿಸಿದ ತಜ್ಞರ ತಂಡದಿಂದ ಶ್ಲಾಘನೆಗೆ ಪಾತ್ರವಾದ ಈ ಕೇಂದ್ರದಲ್ಲಿ 10 ದಿನಗಳ ಒಳಗಾಗಿ 45 ಮಂದಿ ಕೋವಿಡ್ ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಒಂದೇ ಬಾರಿಗೆ ಬಿಡುಗಡೆಯಾಗಿದ್ದರು.

ಕೋವಿಡ್ ರೋಗಿಗಳನ್ನು ಖಾಲಿ, ವಿಶಾಲ ಶಿಕ್ಷಣ ಸಂಸ್ಥೆ ಆವರಣದಲ್ಲಿ ಇರಿಸಲು ವಡೋದರಾ ಮಹಾನಗರ ಪಾಲಿಕೆ ಮಾಡಿದ ಮನವಿಯನ್ನು ಬಹುತೇಕ ಶಿಕ್ಷಣ ಸಂಸ್ಥೆಗಳು ತಿರಸ್ಕರಿಸಿದರೆ, ತಂದಲ್ಝಾ ದಾರುಲ್ ಉಲೂಮ್  ಕಾರ್ಯನಿರ್ವಾಹಕ ಟ್ರಸ್ಟಿ ಮತ್ತು ಪ್ರಾಚಾರ್ಯ ಮುಫ್ತಿ ಅರೀಫ್ ಹಕೀಂ ಫಲಾಹಿಯವರು ಕ್ಷಣಮಾತ್ರವೂ ತಡ ಮಾಡದೆ , ಈ ಜ್ಞಾನಮಂದಿರವನ್ನು 198 ಹಾಸಿಗೆಗಳ ಕೋವಿಡ್ ಆರೈಕೆ ಕೇಂದ್ರವಾಗಿ ಪರಿವರ್ತಿಸಲು ಒಪ್ಪಿಗೆ ನೀಡಿದರು.

ಮೇ 29ರಂದು 45 ಮಂದಿ ಗಂಭೀರ ಲೆವೆಲ್-3 ರೋಗಿಗಳು ಚೇತರಿಸಿಕೊಂಡಿದ್ದು, ಇವರಲ್ಲಿ ಬಹುತೇಕ ಮಂದಿ ಹಿಂದೂಗಳು, ಅಸ್ವಸ್ಥ ವೈದ್ಯರು, ನರ್ಸ್ಗಳು ಇದ್ದಾರೆ. ಇವರಿಗೆ ನಿಯಮಿತವಾಗಿ ತಾಜಾ ಹಣ್ಣು, ಒಣಹಣ್ಣು, ಬಿಸ್ಕೆಟ್ ಮತ್ತಿತರ ಆಹಾರಗಳನ್ನು ನೀಡಲಾಗಿತ್ತು. ಅವರಿಗೆ ಅನುಕೂಲವಾಗುವಂತೆ ಫ್ರಿಡ್ಜ್ ಸೌಕರ್ಯವನ್ನೂ ಒದಗಿಸಲಾಗಿತ್ತು.

ಕೇಂದ್ರ ಗುಜರಾತ್ ನ  ದಹೋದ್ ನಗರದಲ್ಲಿ ಕೊರೋನಾ ಸಾಂಕ್ರಾಮಿಕದ ಭೀತಿಯಿಂದ ಬಹುತೇಕ ವೈದ್ಯರು ತಮ್ಮ ಕ್ಲಿನಿಕ್ ಗಳನ್ನು ಮುಚ್ಚಿದ್ದಾರೆ. ಆದರೆ ಡಾ. ಮೊಹ್ಮದ್ ದೊಹಾದ್ವಾಲಾ ಎಂಬ ಮಧುಮೇಹ ತಜ್ಞರು ಮಾತ್ರ ತಮ್ಮ ಸೇವೆಯನ್ನು ಮುಂದುವರಿಸಿದ್ದರು. ಅವರು ಹಾಗೂ ಅವರ 67 ವರ್ಷ ವಯಸ್ಸಿನ ತಂದೆ, ಹಿರಿಯ ವೈದ್ಯ ಡಾ. ಕೈಸರ್ ಒಂದು ದಿನವೂ ಸೇವೆ ಸ್ಥಗಿತಗೊಳಿಸಲಿಲ್ಲ. ಜತೆಗೆ ಸಿಬ್ಬಂದಿ ಹಾಗೂ ರೋಗಿಗಳ ಸುರಕ್ಷತೆಗೆ ಅಗತ್ಯ ಕಾರ್ಯತಂತ್ರವನ್ನು ರೂಪಿಸಿ ಸೇವೆ ಮುಂದುವರಿಸಿದರು.

ಜತೆಗೆ ತಮ್ಮ ಹೊರ ರೋಗಿಗಳಿಗಾಗಿ ಅತ್ಯಾಧುನಿಕ ಹಾಗೂ ಸುಸಜ್ಜಿತ ವೀಡಿಯೊ ಸಲಹಾ  ಸೌಲಭ್ಯವನ್ನೂ ವ್ಯವಸ್ಥೆ ಮಾಡಿದ್ದರು. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ತಮ್ಮ ಸಾಮಾಜಿಕ ಹೊಣೆಗಾರಿಕೆಯ ಪ್ರಜ್ಞೆಯಿಂದ ಹೃದಯವಂತ ದೊಹಾದ್ವಾಲಾ, ಸ್ಥಳೀಯ ಸರ್ಕಾರೇತರ ಸಂಸ್ಥೆಯೊಂದರ ನೆರವು ಪಡೆದು ವಲಸೆ ಕಾರ್ಮಿಕರಿಗೆ, ಬಿಡಿಗಾಸೂ ಇಲ್ಲದ ಕೂಲಿ ಕಾರ್ಮಿಕರಿಗೆ ಹಾಗೂ ನಗರದ ಕಡುಬಡ ಕುಟುಂಬಗಳಿಗೆ ವಿಶೇಷ ದಿನಬಳಕೆಯ ವಸ್ತುಗಳ ಕಿಟ್ ಗಳನ್ನು ವಿತರಿಸಿದರು.

ಮುಹಮ್ಮದ್ ಶರೀಫ್

ಅಹ್ಮದಾಬಾದ್ ನಲ್ಲಿ ಉದ್ಯಮಿ ಮುಹಮ್ಮದ್ ಶರೀಫ್ ಕುಕುವಾಲ ಅವರು ಕೊರೋನ ವೈರಸ್ ನಿಂದ ಮೃತಪಟ್ಟವರಿಗೆ ಗೌರವಾರ್ಹ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದರು. ಈಗ ಕೊರೋನ ಪೀಡಿತ ಮೃತರನ್ನು 10 ಅಡಿ ಆಳದ ಗೋರಿಯಲ್ಲಿ ಹೂಳಲಾಗುತ್ತದೆ. ಆ ಸಂದರ್ಭದಲ್ಲಿ  ದೇಹಗಳನ್ನು ಕೇವಲ ಎರಡು ಅಡಿ ಆಳವಷ್ಟೇ ತೆಗೆದುಕೊಂಡು ಹೋಗಿ ಮತ್ತೆ ಕೆಳಗೆ ಬಿಟ್ಟು ಬಿಡಲಾಗುತ್ತಿತ್ತು.  ಈ ವಿಷಯ ಗೊತ್ತಾದ  ತಕ್ಷಣ, ಕೋವಿಡ್ ಸಂತ್ರಸ್ತ ಮೃತರ ಅಂತ್ಯ ಸಂಸ್ಕಾರಕ್ಕಾಗಿ  ದೀರ್ಘ ಬಾಳಿಕೆ ಬರುವ ಆರು 15 ಅಡಿ ಉದ್ದದ ಪಟ್ಟಿ ಇರುವ ಸ್ಟ್ರೆಚರ್ ಗಳನ್ನು ವ್ಯವಸ್ಥೆ ಮಾಡಿ, ಮೃತರ ದೇಹವನ್ನು ಗೋರಿಯಲ್ಲಿ ಗೌರವಯುತವಾಗಿ ಆಳದಲ್ಲಿ ಹೂಳಲು ವ್ಯವಸ್ಥೆ ಕಲ್ಪಿಸಿಕೊಟ್ಟರು.

ನಗರದಲ್ಲಿ ಜನಪ್ರಿಯ ತಿಂಡಿ ತಿನಸು ಮಳಿಗೆ ಸರಣಿಯನ್ನು ನಡೆಸುತ್ತಿರುವ ಕುಕುವಾಲ ತಮ್ಮ ಸಂಪತ್ತನ್ನು ಇಂಥ 110 ಹೊಚ್ಚ ಹೊಸ ಸ್ಟ್ರೆಚರ್ ಗಳನ್ನು ಸಿದ್ಧಪಡಿಸಲು ವಿನಿಯೋಗಿಸಿದರು. ಇದರ ಮೂಲಕ 200 ಕೆ.ಜಿ. ವರೆಗಿನ ತೂಕದ ದೇಹಗಳನ್ನು ಕೂಡಾ ಒಯ್ಯಲು ಅನುಕೂಲ ಮಾಡಿಕೊಟ್ಟು, ಎಲ್ಲ ಸ್ಥಳೀಯ ಸ್ಮಶಾನಗಳಿಗೆ ದಾನ ಮಾಡಿದರು. “ಮೃತರ ಸಂಬಂಧಿಕರು ಬಹಳ ದುಃಖದಲ್ಲಿರುತ್ತಾರೆ. ಶೋಕದಿಂದ ಇರುವವರಿಗೆ ತಮ್ಮ ಪ್ರೀತಿಪಾತ್ರರನ್ನು ನಿಷ್ಕಾಳಜಿಯಿಂದ ಸಾಮಾನ್ಯಕ್ಕಿಂತ ಆಳವಾದ ಗೋರಿ ಗುಂಡಿಗಳಿಗೆ ತಳ್ಳಿದಾಗ ಬೇಸರ ಇಮ್ಮಡಿಯಾಗುತ್ತದೆ. ಇದರಿಂದ ಟೈಲರ್ ಜತೆ ಚರ್ಚಿಸಿ, ಈ ಸಂಕಷ್ಟದ ಸಂದರ್ಭಕ್ಕಾಗಿ ವಿನೂತನ ಸ್ಟ್ರೆಚರ್ ಗಳನ್ನು ಸಿದ್ಧಪಡಿಸಿದೆ” ಎಂದು ಕಕುವಾಲ ಹೇಳುತ್ತಾರೆ.

ಮಝರ್

ಅಹ್ಮದಾಬಾದ್ ನಲ್ಲಿ 44 ಡಿಗ್ರಿ ಸೆಲ್ಷಿಯಸ್ ಸುಡುಬಿಸಿಲು ಇದ್ದರೂ, ಇಬ್ಬರು ಆಟೊರಿಕ್ಷಾ ಚಾಲಕರಾದ ಮಝರ್ ರಂಗ್ವಾಲಾ ಮತ್ತು ಸ್ನೇಹಿತ ಮುಸ್ತಫಾ ಸ್ವಯಂಪ್ರೇರಿತರಾಗಿ ಸರ್ವಧರ್ಮೀಯ ಕೋವಿಡ್ ರೋಗಿಗಳನ್ನು ಮನೆಯಿಂದ ಆಸ್ಪತ್ರೆಗಳಿಗೆ ಒಯ್ಯುವ ಸೇವೆ ನೀಡಿದರು. ಜತೆಗೆ ದಾರಿ ಮಧ್ಯೆ ಅವರಿಗೆ ಸ್ಫೂರ್ತಿದಾಯಕ ಹಿತನುಡಿಗಳನ್ನೂ ಹೇಳುವ ಮೂಲಕ ಗಮನ ಸೆಳೆದರು.

ಈ ಇಬ್ಬರು ಜನವಿಕಾಸ ಎಂಬ ಸ್ವಯಂಸೇವಾ ಸಂಸ್ಥೆಗೆ ಹಲವು ಗಂಟೆಗಳ ಸೇವೆಯನ್ನು ನೀಡಿ, ಲಾಕ್ ಡೌನ್ ಅವಧಿಯಲ್ಲಿ ಪಡಿತರ ಕಿಟ್ ಗಳನ್ನು ಪ್ಯಾಕ್ ಮಾಡಲು, ಒಯ್ಯಲು ಹಾಗೂ ವಿತರಿಸಲು ನೆರವಾದರು. ಈ ವೇಳೆ ತಾವೇ ಕೋವಿಡ್ ಸೋಂಕಿಗೆ ಒಳಗಾದರೂ, 10 ದಿನಗಳಲ್ಲಿ ಗುಣಮುಖರಾಗಿ, ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೇ ಮಾನವೀಯ ಸೇವೆಯನ್ನು ಮುಂದುವರಿಸಿದರು. ಅವರ ತೋಳುಗಳಿಗೆ ಇನ್ನಷ್ಟು ಶಕ್ತಿ ಸಿಗಲಿ !

Writer - ಮಹೇಶ್ ತ್ರಿವೇದಿ, clarionindia.net

contributor

Editor - ಮಹೇಶ್ ತ್ರಿವೇದಿ, clarionindia.net

contributor

Similar News