ರಾಜ್ಯ ಬಿಜೆಪಿಯಲ್ಲಿ ಯಾವುದೇ ಭಿನ್ನಮತವಿಲ್ಲ: ಡಾ.ಕೆ.ಸುಧಾಕರ್

Update: 2020-05-30 15:29 GMT

ಬೆಂಗಳೂರು, ಮೇ 30: ರಾಜ್ಯ ಬಿಜೆಪಿಯಲ್ಲಿ ಯಾವುದೆ ಭಿನ್ನಮತವಿಲ್ಲ. ಒಂದು ವೇಳೆ ಅಂತಹ ಏನೆ ಸಮಸ್ಯೆಗಳಿದ್ದರೂ ಶಿಸ್ತಿನ ಪಕ್ಷ ಬಿಜೆಪಿಗೆ ಪ್ರಬಲವಾದ ಹೈಕಮಾಂಡ್ ಇದೆ. ಇಂತಹ ವಿಚಾರಗಳನ್ನೆಲ್ಲ ವರಿಷ್ಠರು ನೋಡಿಕೊಳ್ಳುತ್ತಾರೆ. ಸದ್ಯಕ್ಕೆ ಕೊರೋನ ನಿಯಂತ್ರಣಕ್ಕೆ ನಮ್ಮ ಆದ್ಯತೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ ನಿವಾಸದಲ್ಲಿ ಶಾಸಕರು ಊಟಕ್ಕೆ ಸೇರೋದು ತಪ್ಪಾ? ಎಲ್ಲರೂ ಒಟ್ಟಿಗೆ ಊಟ ಮಾಡಿದ್ದಾರೆ ತಪ್ಪೇನಿದೆ? ಯತ್ನಾಳ್ ಸೇರಿದಂತೆ ಯಾರಾದರೂ ನಾಯಕರ ಬದಲಾವಣೆ ಬಗ್ಗೆ ಹೇಳಿದ್ದಾರಾ? ಎಲ್ಲಿಯೂ ಅದರ ಬಗ್ಗೆ ಅವರು ಮಾತನಾಡಿಲ್ಲ ಎಂದರು.

ಬಿಜೆಪಿ ಶಿಸ್ತಿನ ಪಕ್ಷ. ನಮಗೆ ಪ್ರಬಲ ಹೈಕಮಾಂಡ್ ಇದೆ. ಸದ್ಯಕ್ಕೆ ಕೊರೋನ ನಿಯಂತ್ರಿಸುವುದರ ಕಡೆ ಮಾತ್ರ ನಮ್ಮ ಗಮನವಿದೆ. ಇಂತಹ ವಿಚಾರಗಳನ್ನೆ ಪಕ್ಷದ ವರಿಷ್ಠರು ನೋಡಿಕೊಳ್ಳುತ್ತಾರೆ. ಈ ವಯಸ್ಸಿನಲ್ಲೂ ಮುಖ್ಯಮಂತ್ರಿ ಯಡಿಯೂರಪ್ಪ ದಣಿವರಿಯದೆ ಕೆಲಸ ಮಾಡುತ್ತಿದ್ದಾರೆ ಎಂದು ಸುಧಾಕರ್ ಹೇಳಿದರು.

ಕಾಂಗ್ರೆಸ್ ಪಕ್ಷದ ಇನ್ನೂ ಐವರು ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ರಮೇಶ್ ಜಾರಕಿಹೊಳಿ ಸತ್ಯವನ್ನು ಹೇಳಿದ್ದಾರೆ. ಬಹಳ ಜನ ಶಾಸಕರು ಬಿಜೆಪಿ ಕಡೆ ಬರಲು ಉತ್ಸುಕರಾಗಿದ್ದಾರೆ. ಹೈಕಮಾಂಡ್ ಈ ಬಗ್ಗೆ ಗಮನಹರಿಸಬೇಕು ಎಂದರು.

ಪಾದರಾಯನಪುರ ಕಾರ್ಪೋರೇಟರ್ ಇಮ್ರಾನ್ ಪಾಷಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿರುವ ಕುರಿತು ಪ್ರತಿಕ್ರಿಯಿಸಿದ ಸುಧಾಕರ್, ನಾನು ಪಾದರಾಯನಪುರಕ್ಕೆ ಭೇಟಿ ನೀಡಿ 22 ದಿನ ಆಗಿದೆ. ಈಗ ನಿಮ್ಮ ಮುಂದೆ ಗುಂಡು ಕಲ್ಲು ರೀತಿ ನಿಂತಿದ್ದೇನೆ. ನಾನೇಕೆ ಕ್ವಾರಂಟೈನ್ ಆಗಬೇಕು. ನಾನು ಕೆಲಸ ಮಾಡೋದು ನಿಮಗೆ ಇಷ್ಟವಿಲ್ಲವೆ ಎಂದು ಮಾಧ್ಯಮದವರಿಗೆ ಪ್ರಶ್ನಿಸಿದರು.

ನಾನು ಪ್ರತಿವಾರ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದೇನೆ. ಇಮ್ರಾನ್ ಪಾಷಗೆ ಸೋಂಕು ತಗುಲಿರುವುದರಿಂದ ನಾನು ಕ್ವಾರಂಟೈನ್ ಆಗಬೇಕಾದ ಅವಶ್ಯಕತೆಯಿಲ್ಲ ಎಂದು ಸುಧಾಕರ್ ಸ್ಪಷ್ಟನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News