ಮೌಲಾನ ಅಜಾದ್ ಭವನ ಕಟ್ಟಡ ಕಾಮಗಾರಿ ಪರಿಶೀಲಿಸಿದ ಸಚಿವ ಶ್ರೀಮಂತ ಪಾಟೀಲ್
Update: 2020-05-30 21:05 IST
ಬೆಂಗಳೂರು, ಮೇ 30: ಬೆಂಗಳೂರಿನ ವಸಂತನಗರದ ಮೀಲರ್ಸ್ ಟ್ಯಾಂಕ್ ಬಳಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೌಲಾನ ಅಜಾದ್ ಭವನದ ಕಟ್ಟಡವನ್ನು ನಿರ್ಮಿಸಲಾಗುತ್ತಿದ್ದು, ಶನಿವಾರ ಜವಳಿ, ಕೈಮೊಗ್ಗ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಶ್ರೀಮಂತ ಬಾಳಸಾಹೇಬ್ ಪಾಟೀಲ್ ಅವರು ಭೇಟಿ ನೀಡಿ ಕಾಮಗಾರಿಯ ಪರಿಶೀಲನೆ ನಡೆಸಿದರು.
ಸಚಿವರೊಂದಿಗೆ ಸರಕಾರದ ಕಾರ್ಯದರ್ಶಿ ಎ.ಬಿ.ಇಬ್ರಾಹಿಂ, ಕರ್ನಾಟಕ ಗೃಹ ಮಂಡಳಿಯ ನಿರ್ದೇಶಕ ಮೆಹಿಬೂಬಸಾಬ ಹಾಗೂ ಇನ್ನಿತರ ಅಧಿಕಾರಿಗಳು ಹಾಜರಿದ್ದು, ಕಟ್ಟಡ ಕಾಮಗಾರಿಯ ಬಗ್ಗೆ ಮಾಹಿತಿ ನೀಡಿದರು.
ಸದರಿ ಕಟ್ಟಡ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಿ ವರದಿ ನೀಡುವಂತೆ ಕರ್ನಾಟಕ ಗೃಹ ಮಂಡಳಿಯ ಅಧಿಕಾರಿಗಳಿಗೆ ಹಾಗೂ ಕಟ್ಟಡ ಕಾಮಗಾರಿಯ ಪ್ರಗತಿಯನ್ನು ಪ್ರತಿ 15 ದಿನಗಳಿಗೊಮ್ಮೆ ಸರಕಾರಕ್ಕೆ ಸಲ್ಲಿಸುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.