ಜೂ.1ರಿಂದ ಬಿಎಂಟಿಸಿ ವೋಲ್ವೊ ಬಸ್‍ಗಳ ಸಂಚಾರ

Update: 2020-05-30 16:18 GMT

ಬೆಂಗಳೂರು, ಮೇ 30: ಬಿಎಂಟಿಸಿಯು ಜೂ.1ರಿಂದ ಹವಾನಿಯಂತ್ರಿತ ವೋಲ್ವೊ, ವಾಯುವಜ್ರ ಬಸ್‍ಗಳನ್ನು ಕಾರ್ಯಾಚರಣೆಗೊಳಿಸಲು ತೀರ್ಮಾನಿಸಿದೆ.

ನಗರದಲ್ಲಿ ವೋಲ್ವೊ ಬಸ್‍ಗಳ ಕಾರ್ಯಾಚರಣೆಗೆ ಅನುಮತಿ ಕೋರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಇದಕ್ಕೆ ಸರಕಾರ ಒಪ್ಪಿಗೆ ಕೊಟ್ಟಿದೆ. ಹೀಗಾಗಿ, ವೋಲ್ವೊ ಬಸ್‍ಗಳ ಕಾರ್ಯಾಚರಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಮೂರನೇ ಹಂತದ ಲಾಕ್‍ಡೌನ್ ನಿರ್ಬಂಧ ಸಡಿಲಗೊಂಡ ಹಿನ್ನೆಲೆಯಲ್ಲಿ ಬಿಎಂಟಿಸಿಯು ಮೇ 18ರಿಂದ ಸಾಮಾನ್ಯ ಬಸ್‍ಗಳನ್ನು ಓಡಿಸುತ್ತಿದೆ. ಸದ್ಯ 3,200 ಬಸ್‍ಗಳನ್ನು ನಿತ್ಯ ರಸ್ತೆಗಿಳಿಸುತ್ತಿದೆ. ಪ್ರಯಾಣಿಕರ ಬೇಡಿಕೆಯಂತೆ ಬಸ್‍ಗಳ ಕಾರ್ಯಾಚರಣೆ ಸಮಯ ವಿಸ್ತರಿಸಲಾಗಿದೆ. ಬೆಳಗ್ಗೆ 6ರಿಂದ ರಾತ್ರಿ 8ರವರೆಗೆ ಬಸ್‍ಗಳು ಸಂಚರಿಸುತ್ತಿವೆ.

ಹಂತ-ಹಂತವಾಗಿ ಲಾಕ್‍ಡೌನ್ ಸಡಿಲಗೊಳ್ಳುತ್ತಿರುವುದರಿಂದ ಖಾಸಗಿ ಮತ್ತು ಐಟಿ-ಬಿಟಿ ಕಂಪನಿಗಳು ಕಾರ್ಯಾರಂಭಗೊಂಡಿವೆ. ವಿಮಾನ ಸೇವೆಯೂ ಶುರುವಾಗಿದೆ. ಹಾಗಾಗಿ, ವೋಲ್ವೊ ಬಸ್‍ಗಳನ್ನು ಕಾರ್ಯಾಚರಣೆಗೊಳಿಸಲಾಗುತ್ತಿದೆ.

ಬಿಎಂಟಿಸಿಯಲ್ಲಿ 865 ವೋಲ್ವೊ ಬಸ್‍ಗಳಿದ್ದು, ವಿಮಾನ ನಿಲ್ದಾಣ ಮಾರ್ಗದಲ್ಲಿ ನಿತ್ಯ 130 ಬಸ್‍ಗಳು ಸಂಚರಿಸುತ್ತಿದ್ದವು. ಸದ್ಯ ವಿಮಾನಗಳ ಹಾರಾಟ ಆರಂಭವಾಗಿದ್ದು, ಅಲ್ಲಿಂದ ನಗರದ ನಾನಾ ಪ್ರದೇಶಗಳಿಗೆ ಮತ್ತು ವಿಮಾನ ನಿಲ್ದಾಣಕ್ಕೆ ತೆರಳುವವರಿಗೆ ಸಂಪರ್ಕ ಸೇವೆ ಕಲ್ಪಿಸಲು ವೋಲ್ವೊ ಬಸ್‍ಗಳನ್ನು ಓಡಿಸಲು ತೀರ್ಮಾನಿಸಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ವೈಟ್‍ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿಯಲ್ಲಿನ ಕಂಪನಿಗಳು ಶುರುವಾಗಿದ್ದು, ಉದ್ಯೋಗಿಗಳ ಪ್ರಯಾಣಕ್ಕೆ ವೋಲ್ವೊ ಬಸ್‍ಗಳನ್ನು ಆಚರಣೆ ಮಾಡಲಾಗುವುದು. ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ಮಾರ್ಗಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ವೋಲ್ವೊ ಬಸ್‍ಗಳನ್ನು ಕಾರ್ಯಾಚರಣೆಗೊಳಿಸಲಾಗುವುದು ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News