ಬಡವರಿಗೆ 1.20 ಲಕ್ಷ ನಿವೇಶನಗಳನ್ನು ಹಂಚಲು ಕ್ರಮ: ಸಚಿವ ಸೋಮಣ್ಣ

Update: 2020-05-30 16:49 GMT

ಬೆಂಗಳೂರು, ಮೇ 30: ಬಡವರಿಗೆ ಉಚಿತವಾಗಿ 1.20 ಲಕ್ಷ ನಿವೇಶನಗಳನ್ನು ಹಂಚಲು ನಿರ್ಧರಿಸಲಾಗಿದ್ದು, ಇನ್ನೊಂದು ತಿಂಗಳಲ್ಲಿ ಈ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.

ಶನಿವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಡವರಿಗೆ ಉಚಿತ ನಿವೇಶನ ನೀಡುವುದರ ಜೊತೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದರು.

ಪಟ್ಟಣ ಪ್ರದೇಶಗಳಲ್ಲಿ ವಸತಿ ಇಲಾಖೆ ವತಿಯಿಂದ 1.80 ಲಕ್ಷ ಮನೆಗಳನ್ನು ಕಟ್ಟುತ್ತಿದ್ದೇವೆ. 750 ಕೊಳಚೆ ಪ್ರದೇಶಗಳನ್ನು ಕೊಳಚೆ ರಹಿತ ಪ್ರದೇಶವನ್ನಾಗಿ ಮಾಡುತ್ತಿದ್ದೇವೆ. ಕೊಳಚೆ ಪ್ರದೇಶ ಮುಕ್ತ ರಾಜ್ಯ ನಿರ್ಮಾಣ ನಮ್ಮ ಗುರಿಯಾಗಿದೆ. ಈ ಬಾರಿ ಬೆಂಗಳೂರಿನಲ್ಲೂ 250 ಕೊಳಚೆ ಪ್ರದೇಶಗಳನ್ನು ಕೊಳಚೆ ರಹಿತ ಪ್ರದೇಶವನ್ನಾಗಿ ಮಾಡುತ್ತೇವೆ ಎಂದು ಸೋಮಣ್ಣ ಹೇಳಿದರು.

ಸೂರ್ಯನಗರ 4ನೆ ಹಂತದಲ್ಲಿ ಟೌನ್ ಶಿಪ್ ನಿರ್ಮಾಣ ಮಾಡಲಾಗುತ್ತಿದ್ದು, ಇಲ್ಲಿ 30 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡುತ್ತೇವೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ರೇರಾ ಪ್ರಾಧಿಕಾರ ರಚಿಸಲಾಗಿದೆ. ಅಪಾರ್ಟ್‍ಮೆಂಟ್‍ಗಳ ನಿರ್ಮಾಣ ಮತ್ತು ಖರೀದಿ ನಡುವೆ ಪ್ರಾಧಿಕಾರ ಸಂಪರ್ಕ ಸೇತುವೆ ರೀತಿ ಕೆಲಸ ಮಾಡಲಿದೆ. ಅಪಾರ್ಟ್‍ಮೆಂಟ್‍ಗಳ ಖರೀದಿ ವ್ಯವಹಾರ ಕಾನೂನು ಚೌಕಟ್ಟಿನಲ್ಲಿ ತರುತ್ತೇವೆ. ಈಗಾಗಲೆ ನಾಲ್ಕು ಸಾವಿರ ರಿಯಲ್ ಎಸ್ಟೇಟ್ ಏಜೆಂಟ್‍ಗಳನ್ನು ನೋಂದಣಿ ಮಾಡಿಸಲಾಗಿದೆ ಎಂದು ಸೋಮಣ್ಣ ಹೇಳಿದರು.

ರಾಜ್ಯದಲ್ಲಿ ಹಲವು ಅಪಾರ್ಟ್‍ಮೆಂಟ್ ಮಾಲಕರು ನಿಯಮಗಳನ್ನು ಪಾಲಿಸುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ರೇರಾ ಪ್ರಾಧಿಕಾರವು ಅಪಾರ್ಟ್‍ಮೆಂಟ್ ನಿರ್ಮಾಣ, ಖರೀದಿಗೆ ಸಂಬಂಧಿಸಿದ ದೂರುಗಳನ್ನು ಪರಿಶೀಲಿಸಲಿದೆ. ರೇರಾ ಕಾಯ್ದೆಯನ್ನು ರಾಜ್ಯದಲ್ಲಿ ಮತ್ತಷ್ಟು ಶಕ್ತಿಶಾಲಿಯನ್ನಾಗಿಸಿ, ಸೂಕ್ತ ವ್ಯವಸ್ಥೆಯನ್ನು ರೂಪಿಸುತ್ತೇವೆ ಎಂದು ಸೋಮಣ್ಣ ಹೇಳಿದರು.

ಬಿಜೆಪಿ ಶಾಸಕರ ಪ್ರತ್ಯೇಕ ಸಭೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಸನಗೌಡ ಪಾಟೀಲ್ ಯತ್ನಾಳ್ ಹಿರಿಯರು, ಕೇಂದ್ರದಲ್ಲಿ ಮಂತ್ರಿಯಾಗಿದ್ದವರು. ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಚರ್ಚಿಸಿ, ಸಾಮರಸ್ಯ ಬೆಳೆಸಿಕೊಳ್ಳಲಿ. ಸಾರ್ವಜನಿಕವಾಗಿ ಹೇಳಿಕೆಗಳನ್ನು ಕೊಡುವುದು ಸರಿಯಲ್ಲ ಎಂದರು.

ಯಡಿಯೂರಪ್ಪ ನಮ್ಮ ಪ್ರಶ್ನಾತೀತ ನಾಯಕ. ಅವರು ಹೇಳಿದಂತೆ ನಾವು ಕೇಳಬೇಕಾಗುತ್ತದೆ. ಯಡಿಯೂರಪ್ಪ ವಿರುದ್ಧ ಪಕ್ಷದಲ್ಲಿ ಯಾವುದೆ ಅಸಮಾಧಾನವಿಲ್ಲ. ಕೊರೋನ ನಿಯಂತ್ರಣಕ್ಕಾಗಿ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ನಾವೆಲ್ಲ ಅವರ ಜೊತೆ ಇರುತ್ತೇವೆ. ಅವರು ಅನುಭವಿಗಳಾಗಿದ್ದು, ಎಲ್ಲ ಬಗೆಯ ಸಮಸ್ಯೆಗಳನ್ನು ಬಗೆಹರಿಸುತ್ತಾರೆ ಎಂದು ಸೋಮಣ್ಣ ಹೇಳಿದರು.

120 ಅಡಿ ವಿವೇಕಾನಂದ ಪ್ರತಿಮೆ

ಮುತ್ಯಾಲಮಡುವಿನಲ್ಲಿ ಸುಮಾರು 100 ಎಕರೆ ಜಾಗದಲ್ಲಿ 120 ಅಡಿ ಎತ್ತರದ ಸ್ವಾಮಿ ವಿವೇಕಾನಂದರ ಪ್ರತಿಮೆ ನಿರ್ಮಿಸಲಾಗುವುದು. ಗುಜರಾತ್‍ನಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ಮಾದರಿಯಲ್ಲೆ ಈ ಪ್ರತಿಮೆ ನಿರ್ಮಾಣವಾಗಲಿದೆ.

-ವಿ.ಸೋಮಣ್ಣ, ವಸತಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News