ಪಿಎಸಿ ಸ್ಥಳ ಪರಿಶೀಲನೆಗೆ ತಡೆ: ಸ್ಪೀಕರ್ ಕಾಗೇರಿಯಿಂದ ಅಧಿಕಾರ ದುರುಪಯೋಗ- ರವಿಕೃಷ್ಣಾರೆಡ್ಡಿ ಆರೋಪ

Update: 2020-05-30 17:17 GMT

ಬೆಂಗಳೂರು, ಮೇ 30: ವೈದ್ಯಕೀಯ ಸಾಮಗ್ರಿಗಳ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬ ದೂರುಗಳಿಗೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆಗೆಗೆ ಮುಂದಾಗಿದ್ದ ವಿಧಾನಸಭೆ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ(ಪಿಎಸಿ) ತನಿಖೆಗೆ ತಡೆಯಾಜ್ಞೆ ನೀಡಿರುವ ವಿಧಾನಸಭಾ ಸ್ಪೀಕರ್ ಅವರ ಕ್ರಮ ಕಾನೂನು ಬಾಹಿರ. ಭ್ರಷ್ಟರ ರಕ್ಷಣೆಗೆ ಸ್ಪೀಕರ್ ಸ್ಥಾನವನ್ನು ವಿಶ್ವೇಶ್ವರ ಹಗಡೆ ಕಾಗೇರಿ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.

ಕೊರೋನ ಸೋಂಕು ತಡೆಗಟ್ಟಲು ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಆದರೆ, ಕೆಲ ವಿಚಾರಗಳಲ್ಲಿ ಸರಕಾರದ ವೈಫಲ್ಯಗಳು ಕಂಡು ಬಂದಿದ್ದು, ಭ್ರಷ್ಟಾಚಾರದ ಸಂಶಯವೂ ಇದೆ. ಔಷಧ ಮತ್ತು ಇನ್ನಿತರ ಪರಿಕರಗಳ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬ ದೂರುಗಳಿದ್ದು, ಕೋಟ್ಯಂತರ ರೂಪಾಯಿ ಅವ್ಯವಹಾರ ಸಂಬಂಧ ಮಾಧ್ಯಮಗಳಲ್ಲಿ ವರದಿಗಳು ಬಂದಿವೆ.

2020ರ ಮೇ 12ರಂದು ಕರ್ನಾಟಕ ರಾಷ್ಟ್ರ ಸಮಿತಿ ಪ್ರಧಾನ ಕಾರ್ಯದರ್ಶಿ ದೀಪಕ್ ನಾಗರಾಜ್ ದೂರನ್ನು ಆಧರಿಸಿ ವಿಧಾನಸಭೆ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಪರಿಶೀಲನೆಗೆ ಮುಂದಾಗಿತ್ತು. ಇದಕ್ಕೆ ಸ್ಪೀಕರ್ ತಡೆಯಾಜ್ಞೆ ನೀಡಿರುವುದು ಹಲವು ಸಂಶಯಗಳನ್ನು ಸೃಷ್ಟಿಸಿದೆ. ಅಲ್ಲದೆ, ಭ್ರಷ್ಟಚಾರ ನಡೆದಿದೆ ಎಂಬುದರಲ್ಲಿ ನಮಗೆ ಯಾವುದೇ ಸಂಶಯ ಉಳಿದಿಲ್ಲ. ಅಕ್ರಮ ಮುಚ್ಚಿಹಾಕಲೆಂದು ತಮ್ಮ ಮೇಲೆ ಕೆಲವರು ತಂದ ಒತ್ತಡಕ್ಕೆ ಮಣಿದು ಭ್ರಷ್ಟರನ್ನು ರಕ್ಷಿಸಲು ತಾವೇ ಸ್ವಯಂಪ್ರೇರಿತವಾಗಿ ಈ ತೀರ್ಮಾನ ಕೈಗೊಂಡಿದ್ದೀರಿ ಎಂದು ರವಿಕೃಷ್ಣಾರೆಡ್ಡಿ ದೂರಿದ್ದಾರೆ.

ಸ್ಪೀಕರ್ ಹುದ್ದೆಯಂತಹ ಜವಾಬ್ದಾರಿಯುವ ಸ್ಥಾನದಲ್ಲಿ ಕುಳಿತಿರುವ ತಾನು ಸತ್ಯ, ನ್ಯಾಯ ಮತ್ತು ಧರ್ಮದ ಹಾದಿಯಲ್ಲಿ ನಡೆಯಲು ನಿಮಗೆ ಶಿರಸಿಯ ಮಾರಿಕಾಂಬೆ ತಮಗೆ ಪ್ರೇರಣೆ ನೀಡಲಿ. ತಾವು ಊರಿಗೆ ಹೋಗಿ ಆ ತಾಯಿಯ ಮುಂದೆ ನಿಂತಾಗ ತಮ್ಮನ್ನು ಯಾವುದೇ ಪಾಪಪ್ರಜ್ಞೆ ಕಾಡದಿರಲಿ ಎಂದು ಆಶಿಸುತ್ತೇನೆ. ತಾವು ಕೂಡಲೇ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಗೆ ನೀಡಿರುವ ತಡೆಯಾಜ್ಞೆ ತೆರವು ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಸ್ಪೀಕರ್ ಕಚೇರಿ ಸ್ಪಷ್ಟನೆ

ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಸರಕಾರದ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳಲಾಗಿದೆಯೇ ಹೊರತು ಅದರಲ್ಲಿ ಯಾವುದೇ ದುರುದ್ದೇಶ ಇಲ್ಲ. ಮುಂದಿನ ದಿನಗಳಲ್ಲಿ ಲಾಕ್‍ಡೌನ್ ಸಂಬಂಧ ಮಾರ್ಗಸೂಚಿ ಸಡಿಲಗೊಂಡ ಬಳಿಕ ಆದೇಶ ಮರುಪರಿಶೀಲಿಸುವ ಕುರಿತು ಸ್ಪೀಕರ್ ಗಮನಕ್ಕೆ ತರಲಾಗುವುದು. ವಿಧಾನ ಮಂಡಲ ಸಮಿತಿ ಸ್ಥಳ ಪರಿಶೀಲನೆಗೆ ಅವಕಾಶ ನೀಡದೆ ಸಮಿತಿ ಕಾರ್ಯಗಳಿಗೆ ಅಡ್ಡಿ, ಭ್ರಷ್ಟರಿಗೆ ಸ್ಪೀಕರ್ ರಕ್ಷಣೆ ನೀಡಿದ್ದಾರೆಂಬ ಮಾಧ್ಯಮಗಳ ವರದಿಗಳು ಸರಿಯಲ್ಲ'

-ಎಂ.ಕೆ.ವಿಶಾಲಾಕ್ಷಿ, ವಿಧಾನಸಭೆ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News