ಆರೋಗ್ಯ ಸೇವೆ ಡಿಜಿಟಲೈಸ್‍ಗೆ ಐಟಿ-ಬಿಟಿ ವಲಯ ನೆರವು ಅಗತ್ಯ: ಡಿಸಿಎಂ ಡಾ.ಅಶ್ವಥ್ ನಾರಾಯಣ

Update: 2020-05-30 18:05 GMT

ಬೆಂಗಳೂರು, ಮೇ 30: ಕೊರೋನ ವೈರಸ್ ಸೋಂಕು ಬಹುದಿನಗಳ ವರೆಗೆ ನಮ್ಮ ನಡುವೆ ಇರುವುದರಿಂದ ಆರೋಗ್ಯ ಕ್ಷೇತ್ರದ ಮೂಲಸೌಕರ್ಯ ಹೆಚ್ಚಿಸಿಕೊಳ್ಳಬೇಕು. ಆರೋಗ್ಯ ಸೇವೆಯನ್ನು ಡಿಜಿಟಲೈಸ್ ಮಾಡುವುದು ಬಹಳ ಮುಖ್ಯ. ಇದಕ್ಕೆ ಐಟಿ-ಬಿಟಿ ವಲಯದ ನೆರವು ಅಗತ್ಯ ಎಂದು ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ತಿಳಿಸಿದ್ದಾರೆ.

ಶನಿವಾರ ರಾಜ್ಯ ಸರಕಾರ ಹಾಗೂ ನ್ಯಾಸ್ಕಾಮ್ ಸಹಯೋಗದಲ್ಲಿ ಅಭಿವೃದ್ಧಿ ಪಡಿಸಿರುವ ದತ್ತಾಂಶ ವಿಶ್ಲೇಷಣೆ ಸಾಧನವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ರಾಜ್ಯದಲ್ಲಿ ಕೊರೋನ ವೈರಸ್ ಸೋಂಕು ನಿಯಂತ್ರಣಕ್ಕೆ ಮುಂದಾಗಬೇಕಿದೆ ಎಂದರು.

ಲಭ್ಯವಿರುವ ಎಲ್ಲ ಸಂಪನ್ಮೂಲಗಳನ್ನು ಬಳಸಿ ನಗರದಲ್ಲಿ 24/7 ಆರೋಗ್ಯ ಸೇವೆ ಒದಗಿಸಬೇಕು. ನಮ್ಮ ಎಲ್ಲ ಕೆಲಸಗಳು ಇತರೆ ರಾಜ್ಯಗಳಿಗೆ ಮಾದರಿಯಾಗುವಂತೆ ಇರಬೇಕು. ವೈದ್ಯನಾಗಿ ಎಲ್ಲ ರೀತಿಯ ಸಹಕಾರ ನೀಡಲು ನಾನು ಸಿದ್ಧ. ಉತ್ತಮ ಕಾರ್ಯಕ್ಕೆ ಎಲ್ಲ ಕಂಪೆನಿಗಳು ಕೈಜೋಡಿಸಬೇಕು ಎಂದು ಅವರು ಕೋರಿದರು.

ಪ್ರಶಂಸೆ: ತಂತ್ರಜ್ಞಾನವನ್ನು ಬಳಸಿಕೊಂಡು ಕೋವಿಡ್-19 ಪರಿಸ್ಥಿತಿಯನ್ನು ಕರ್ನಾಟಕ ರಾಜ್ಯ ಅತಂತ್ಯ ಸಮರ್ಥವಾಗಿ ನಿಭಾಸಿದೆ. ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಎಲ್ಲರೂ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಬಿಬಿಎಂಪಿ ಹೆಲ್ತ್ ಕೇರ್, ಆಪ್ತಮಿತ್ರ ಸಹಾಯವಾಣಿಯ ಕೆಲಸ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಕೊರೋನ ಸೋಂಕು ನಿಯಂತ್ರಣದಲ್ಲಿ ಬೆಂಗಳೂರನ್ನು ಮಾದರಿ ನಗರವೆಂದು ಕೇಂದ್ರ ಸರಕಾರ ಗುರುತಿಸಿದೆ ಎಂದು ಅವರು ಪ್ರಶಂಸಿಸಿದರು.

ಕೊರೋನ ಹರಡು ಸಾಧ್ಯತೆ, ವಿವರ, ಸೋಂಕಿನ ಮೂಲಕ, ಅದರ ವರ್ಗೀಕರಣ, ಸೋಂಕಿನ ಪ್ರಮಾಣ, ಅಂಕಿ_ಅಂಶ ಮಾಹಿತಿ, ಸೋಂಕು ಪತ್ತೆ ಪರೀಕ್ಷೆ ವಿವರ, ಚಿಕಿತ್ಸೆ ಹಾಗೂ ಲಭ್ಯವಿರುವ ಮೂಲಸೌಲಭ್ಯ, ಮಾನವ ಸಂಪನ್ಮೂಲದ ಮಾಹಿತಿ ಒದಗಿಸುವ ಈ ಸಾಧನ ಕೋವಿಡ್ ನಿಯಂತ್ರಣದಲ್ಲಿ ನೆರವಾಗಬಲ್ಲದು. ನ್ಯಾಸ್ಕಾಮ್ ಬಹಳ ಒಳ್ಳೆಯ ಕೆಲಸ ಮಾಡಿದೆ. ಇದಕ್ಕೆ ಸಹಕರಿಸಿದ ಎಲ್ಲರನ್ನೂ ನಾನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಜೈವಿಕ ತಂತ್ರಜ್ಞಾನ ವಿಷನ್ ಗ್ರೂಪ್ ಅಧ್ಯಕ್ಷೆ ಮಜೂಂದಾರ್, ಮಾಹಿತಿ ತಂತ್ರಜ್ಞಾನದ ವಿಷನ್ ಗ್ರೂಪ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣ, ನ್ಯಾಸ್ಕಾಮ್ ಅಧ್ಯಕ್ಷೆ ದೇಬ್ಜಾನಿ ಘೋಷ್, ಉಪಾಧ್ಯಕ್ಷ ವಿಶ್ವನಾಥನ್ ಸೇರಿದಂತೆ ವಿವಿಧ ಕಂಪೆನಿಗಳ ಮುಖ್ಯಸ್ಥರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News