ಸೂಪರ್ ಸ್ಟಾರ್ ಬಿಗ್ ಬಿ ಸುಳ್ಳು ಸುದ್ದಿಯ ಸೂಪರ್ ಸ್ಪ್ರೆಡರ್ ಕೂಡ ಹೌದು !

Update: 2020-05-31 08:32 GMT

ಆಗಾಗ ತನಗೆ ತೋಚಿದಂತೆ ಟ್ವೀಟ್ ಮಾಡಿ ಬಿಡುವ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಕಡಿವಾಣ ಹಾಕಲು ಟ್ವಿಟರ್ ನಿರ್ಧರಿಸಿದ ಬೆನ್ನಿಗೆ ದೊಡ್ಡ ವಿವಾದ ಭುಗಿಲೆದ್ದಿದೆ. ಟ್ರಂಪ್ ಮಾಡಿದ ಟ್ವೀಟ್ ಒಂದರಲ್ಲಿ ತಪ್ಪು ಮಾಹಿತಿ ಇರಬಹುದು ಎಂದು ಎಚ್ಚರಿಸಿ ಅದಕ್ಕೆ ಫ್ಯಾಕ್ಟ್ ಚೆಕ್ ಮಾಡುವ ಆಯ್ಕೆಯನ್ನು ಟ್ವಿಟರ್ ಒದಗಿಸಿದ ಕೆಲವೇ ದಿನಗಳೊಳಗೆ ಅಮೇರಿಕ ಅಧ್ಯಕ್ಷರ ಇನ್ನೊಂದು ಟ್ವೀಟ್ ಹಿಂಸೆಯನ್ನು ವೈಭವೀಕರಿಸುತ್ತಿದೆ ಎಂದು ಟ್ವಿಟರ್ ಎಚ್ಚರಿಸಿದ್ದು ಎಲ್ಲರ ಹುಬ್ಬೇರಿಸಿದೆ. 

ಟ್ರಂಪ್ ರಂತಹ ಟ್ರಂಪ್ ರನ್ನೇ ತಪ್ಪು ಮಾಹಿತಿ ನೀಡಿದ್ದಕ್ಕೆ ಕಿವಿ ಹಿಂಡಿದ ಟ್ವಿಟರ್, ನಮ್ಮ ಭಾರತದಲ್ಲೂ ಇದೇ ರೀತಿಯ ಬೇಜವಾಬ್ದಾರಿ ಟ್ವೀಟ್ ಮಾಡುವ ಖ್ಯಾತನಾಮರ ಬಗ್ಗೆ ಏಕೆ ಗಮನ ಹರಿಸುತ್ತಿಲ್ಲ ಎಂಬುದು ಈಗ ಚರ್ಚೆಯಲ್ಲಿರುವ ವಿಷಯ. ಹೀಗೆ ಬೇಕಾಬಿಟ್ಟಿ ಟ್ವೀಟ್ ಗಳ ಮೂಲಕ ದೊಡ್ಡ ಸಂಖ್ಯೆಯ ಜನರನ್ನು ದಾರಿ ತಪ್ಪಿಸುತ್ತಿರುವ ಗಣ್ಯರಲ್ಲಿ ಅಗ್ರಗಣ್ಯರು ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ !  ಬಿಗ್ ಬಿ ಯ ಈ ವಿವೇಚನಾ ರಹಿತ ಟ್ವೀಟ್ ಸರಣಿಯಿಂದ ಬೇಸತ್ತ ಜನರು ಅವರು ತಮ್ಮ ವಾಟ್ಸಾಪ್ ಅನ್ನು ಡಿಲೀಟ್ ಮಾಡಬೇಕು ಎಂದು ಇತ್ತೀಚಿಗೆ change.org ನಲ್ಲಿ ಮನವಿ ಅಭಿಯಾನವನ್ನೇ ಪ್ರಾರಂಭಿಸಿದ್ದರು. ಏಕೆಂದರೆ ಬಿಗ್ ಬಿ ಸಹಿತ ಹೆಚ್ಚಿನವರು ಬಳಸುವ ಈ ಅರೆಬೆಂದ ಮಾಹಿತಿಗಳು ಅವರಿಗೆ ತಲುಪುವುದು ಈ ವಾಟ್ಸಾಪ್ ನಿಂದ.  

ಬಾಲಿವುಡ್ ನಲ್ಲಿ ಅತ್ಯಂತ ಸಕ್ರಿಯ ಟ್ವಿಟರ್ ಬಳಕೆದಾರರಲ್ಲಿ ಅಮಿತಾಭ್ ಪ್ರಮುಖರು. ಆದರೆ ಕೆಲಸವಿಲ್ಲದೆ ಮನೆಯಲ್ಲೇ ಆರಾಮವಾಗಿದ್ದುಕೊಂಡು ವಾಟ್ಸಾಪ್ ನಲ್ಲಿ ಬಂದಿರುವ ಆಡಿಯೋ, ವಿಡಿಯೋ, ಚಿತ್ರಗಳನ್ನು ಹಿಂದೆ ಮುಂದೆ ನೋಡದೆ ಫಾರ್ವರ್ಡ್ ಮಾಡುವ ಹೆಚ್ಚಿನ ಅಂಕಲ್ ಗಳಿಗೂ ಅಮಿತಾಭ್ ಬಚ್ಚನ್ ಅವರಿಗೂ ಈಗ ಹೆಚ್ಚಿನ ವ್ಯತ್ಯಾಸ ಉಳಿದಿಲ್ಲ. ಆದರೆ ದೊಡ್ಡ ಸಮಸ್ಯೆ ಏನೆಂದರೆ ಈ ಮನೆಯಲ್ಲಿರುವ ಅಂಕಲ್ ಗಳು ಫಾರ್ವರ್ಡ್ ಮಾಡಿದ ಫೇಕ್ ಮೆಸೇಜ್ ಗಳು ಅವರ ಕುಟುಂಬ ವಲಯಕ್ಕೆ ಮಾತ್ರ ತಲುಪಿದರೆ ಅಮಿತಾಭ್ ಮಾಡುವ ಟ್ವೀಟ್ ಅವರ 4.2 ಕೋಟಿಗೂ ಹೆಚ್ಚು ಫಾಲೋವರ್ ಗಳನ್ನು ತಲುಪುತ್ತದೆ. ಇದೇ ದೊಡ್ಡ ಅಪಾಯ. 

ಸುಳ್ಳು ಸುದ್ದಿಯ ಸೂಪರ್ ಸ್ಪ್ರೆಡರ್ ಈ ಸೂಪರ್ ಸ್ಟಾರ್ !

ಅಮಾವಾಸ್ಯೆಯ ದಿನ ಚಂದ್ರ ಯಾವುದೋ ನಕ್ಷತ್ರವನ್ನು ಪ್ರವೇಶಿಸುವ  ಆ ನಿರ್ದಿಷ್ಟ ಸಮಯದಲ್ಲಿ ಚಪ್ಪಾಳೆ ಹೊಡೆಯುವ ಮೂಲಕ ಉಂಟಾಗುವ ಕಂಪನಗಳಿಂದ ಕೊರೊನ ವೈರಸ್ ದುರ್ಬಲವಾಗುತ್ತದೆ. ಇದು ನರೇಂದ್ರ ಮೋದಿ ಅವರ ಮಾಸ್ಟರ್ ಪ್ಲಾನ್ ಎಂದು ಪ್ರಧಾನಿ ಮೋದಿ ಕೊರೊನ ಯೋಧರಿಗೆ ಚಪ್ಪಾಳೆ ಹೊಡೆಯಲು ಹೇಳಿದಾಗ ವಾಟ್ಸಾಪ್ ನಲ್ಲಿ ವೈರಲ್ ಆಗಿತ್ತು. ಅದನ್ನೇ ನಂಬಿದ ಬಿಗ್ ಬಿ ಟ್ವೀಟ್ ಮಾಡಿ ಬಿಟ್ಟರು. ಬಳಿಕ ಯಾವುದೇ ಸ್ಪಷ್ಟೀಕರಣ ಕೊಡದೆ ಅದನ್ನು ಡಿಲೀಟ್ ಮಾಡಿದರೂ ಆಗಲೇ ಸಾಕಷ್ಟು ಜನರು ಅದನ್ನು ನೋಡಿ, ಲೈಕ್ ಮಾಡಿ ರಿಟ್ವೀಟ್ ಮಾಡಿ ಆಗಿತ್ತು. 

ತನಗಿರುವ ದೊಡ್ಡ ಸಂಖ್ಯೆಯ ಫಾಲೋವರ್ ಗಳಿಗೆ ಈ ಹೊತ್ತಿಗೆ ಬಹಳ ಅಗತ್ಯವಿರುವ ವೈಜ್ಞಾನಿಕ ಜಾಗೃತಿ ಮೂಡಿಸಬೇಕಾದ ಅಮಿತಾಭ್ ಇಂತಹ ಮೂಢನಂಬಿಕೆಗಳನ್ನು ಹರಡುವ ಮೂಲಕ ನಗೆಪಾಟಲಿಗೀಡಾದರು.  

ಇಂತಹ ಸುಳ್ಳು ಸುದ್ದಿಗಳನ್ನು ಬಿಗ್ ಬಿ ಹರಡಿದ್ದು ಒಮ್ಮೆ ಮಾತ್ರ ಅಲ್ಲ. ಕೊರೊನ ಸಮಸ್ಯೆ ಪ್ರಾರಂಭವಾದಂದಿನಿಂದ ಅಮಿತಾಭ್ ಇಂತಹ ಆಧಾರರಹಿತ ಮೆಸೇಜ್ ಗಳನ್ನು ಟ್ವೀಟ್ ಮಾಡುತ್ತಲೇ ಇದ್ದಾರೆ. ಕೊರೊನ ಸೋಂಕು ನೊಣಗಳಿಂದ ಬರುತ್ತದೆ ಎಂದು ಬಿಗ್ ಬಿ ಟ್ವೀಟ್ ಮಾಡಿದ್ದರು. ಅದು ಸುಳ್ಳು ಎಂದು ಅರೋಗ್ಯ ಸಚಿವಾಲಯವೇ ಹೇಳಬೇಕಾಯಿತು. ಒಂದು ಫೇಕ್ ವೆಬ್ ಸೈಟ್ ಅನ್ನು ಕೊರೊನ ಅಂಕಿ ಅಂಶ ಕುರಿತ ಅಧಿಕೃತ ವೆಬ್ ಸೈಟ್ ಎಂದರು ಬಿಗ್ ಬಿ. ಅದರ ಬೆನ್ನಿಗೇ ಪ್ರಧಾನಿ ಮನವಿ ಮೇರೆಗೆ ಮನೆಯ ದೀಪಗಳನ್ನು ಆರಿಸಿ ಬಾಲ್ಕನಿಯಲ್ಲಿ ದೀಪ ಬೆಳಗಿದಾಗ ಭಾರತದ ಭ್ಆಗೋಳಿಕ ಪ್ರದೇಶ ಇಡೀ ವಿಶ್ವದಲ್ಲೇ ಪ್ರಕಾಶಮಾನವಾಗಿ ಕಾಣುತ್ತಿತ್ತು ಎಂದು ಹೇಳಿದ ಫೇಕ್ ಚಿತ್ರವನ್ನೂ ಅವರು ಟ್ವೀಟ್ ಮಾಡಿದರು. 

ಕ್ಷಮೆ ಅಂದರೆ ... 

ಈ ಬಗ್ಗೆ  ಅಮಿತಾಭ್ ಕ್ಷಮೆ ಯಾಚಿಸಿದರು. ಆದರೆ ಹೇಗೆ ಗೊತ್ತೇ ? ಆ ಟ್ವೀಟ್ ನಲ್ಲಿ ಅವರು ಬಳಸಿದ ಟ್ವೀಟ್ ನಂಬರ್ ಬಗ್ಗೆ ಸ್ಪಷ್ಟೀಕರಣ ನೀಡಿ! 

ಅಮಿತಾಭ್ ತಮ್ಮ ಕೌನ್ ಬನೇಗಾ ಕರೋಡ್ ಪತಿ ಧಾರಾವಾಹಿಯಲ್ಲಿ ಸ್ಪರ್ಧಿಗಳು ನೀಡಿದ ಉತ್ತರವನ್ನು ಅಂತಿಮಗೊಳಿಸುವ ಮೊದಲು ತನ್ನ ಕಂಪ್ಯೂಟರ್ ಗೆ ದಾಖಲಿಸುವ ಮೊದಲು " ಟಾಲಾ ಲಗದಿಯಾ ಜಾಯೆ ? ( ಹಾಗಾದರೆ ಇದನ್ನು ಅಂತಿಮಗೊಳಿಸೋಣವೇ ) "  ಎಂದು ಕೇಳುತ್ತಿದ್ದರು. ಈಗ ಅವರು ಟ್ವೀಟ್ ಮಾಡುವಾಗಲೂ ಅಂತಹದೇ ಒಂದು ಫ್ಯಾಕ್ಟ್ ಚೆಕ್ ಮಾಡಿಕೊಳ್ಳುವ ವ್ಯವಸ್ಥೆ ಅಳವಡಿಸಿಕೊಂಡಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಅಲ್ಲವೇ ?  

ಆಧಾರ :  theprint.in ನಲ್ಲಿ ಶುಭಾಂಗಿ ಮಿಶ್ರಾ ಬರೆದ ಲೇಖನ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News