ಸೌದಿ: ಶ್ರದ್ಧಾಳುಗಳಿಗೆ ಬಾಗಿಲು ತೆರೆದ ಮಸೀದಿಗಳು

Update: 2020-05-31 15:20 GMT

ರಿಯಾದ್ (ಸೌದಿ ಅರೇಬಿಯ), ಮೇ 31: ಎರಡು ತಿಂಗಳಿಗೂ ಹೆಚ್ಚು ಅವಧಿಯ ಬಳಿಕ, ರವಿವಾರ ಸೌದಿ ಅರೇಬಿಯದಲ್ಲಿ ಮಸೀದಿಗಳು ಬಾಗಿಲು ತೆರೆದವು. ಕೊರೋನ ವೈರಸ್ ಸಾಂಕ್ರಾಮಿಕ ಹರಡುವುದನ್ನು ತಡೆಯಲು ವಿಧಿಸಲಾಗಿರುವ ನಿರ್ಬಂಧಗಳನ್ನು ಸೌದಿ ಅರೇಬಿಯವು ಸಡಿಲಿಸಲು ಆರಂಭಿಸಿದೆ.

ಅದೇ ವೇಳೆ, ಮಸೀದಿಗೆ ಪ್ರವೇಶಿಸುವವರಿಗೆ ಸರಕಾರವು ಹಲವು ಶರತ್ತುಗಳನ್ನೂ ವಿಧಿಸಿದೆ. ಮಸೀದಿಗೆ ಪ್ರವೇಶಿಸುವಾಗ ಶ್ರದ್ಧಾಳುಗಳು ಮುಖಕವಚ ಧರಿಸಬೇಕು, ತಮ್ಮದೇ ಆದ ಪ್ರಾರ್ಥನಾ ಚಾಪೆಗಳನ್ನು ತರಬೇಕು, ಕೈಕುಲುಕುವುದನ್ನು ನಿವಾರಿಸಬೇಕು ಹಾಗೂ ಜನರು ತಮ್ಮ ನಡುವೆ ಕನಿಷ್ಠ 2 ಮೀಟರ್‌ಗಳ ಅಂತರವನ್ನು ಕಾಪಾಡಿಕೊಳ್ಳಬೇಕು ಎಂಬ ಶರತ್ತುಗಳನ್ನು ವಿಧಿಸಲಾಗಿದೆ.

ಜನರು ಮುಂಜಾನೆಯ ಪ್ರಾರ್ಥನೆಗೇ ಮಸೀದಿಗಳಿಗೆ ಆಗಮಿಸಿದರು. ಹಿರಿಯರು, 15 ವರ್ಷಕ್ಕಿಂತ ಕೆಳಗಿನ ಮಕ್ಕಳು ಮತ್ತು ಗಂಭೀರ ಕಾಯಿಲೆಗಳಿರುವವರಿಗೆ ಮಸೀದಿ ಪ್ರವೇಶವನ್ನು ನಿಷೇಧಿಸಲಾಗಿದೆ.

ಜಗತ್ತಿನಾದ್ಯಂತದಿಂದ ಲಕ್ಷಾಂತರ ಜನರು ಆಗಮಿಸುವ ಹಜ್ ಮತ್ತು ಉಮ್ರಾ ಯಾತ್ರೆಗಳನ್ನು ಈ ಬಾರಿ ಸ್ಥಗಿತಗೊಳಿಸಲಾಗಿದೆ.

ಸುಮಾರು 3 ಕೋಟಿ ಜನಸಂಖ್ಯೆಯ ಸೌದಿ ಅರೇಬಿಯದಲ್ಲಿ 83,300ಕ್ಕೂ ಅಧಿಕ ಕೊರೋನ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿವೆ ಹಾಗೂ 480 ಸಾವುಗಳು ಸಂಭವಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News