2 ತಿಂಗಳು ಸ್ಥಗಿತವಾಗಿದ್ದ ನಿಮ್ಹಾನ್ಸ್ ಓಪಿಡಿ ಸೋಮವಾರ ಪುನರಾರಂಭ

Update: 2020-05-31 17:59 GMT

ಬೆಂಗಳೂರು, ಮೇ.31: ಎರಡು ತಿಂಗಳುಗಳಿಂದ ಸ್ಥಗಿತವಾಗಿದ್ದ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್) ಹೊರರೋಗಿಗಳ ವಿಭಾಗ (ಒಪಿಡಿ) ಸೋಮವಾರದಿಂದ ಪುನರಾರಂಭವಾಗಲಿದೆ.

ರಾಜ್ಯಾದ್ಯಂತ ಸೋಂಕು ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನೋಂದಣಿ ಮಾಡಿಕೊಂಡ ರೋಗಿಗಳಿಗೆ ಅಷ್ಟೇ ಸೇವೆ ದೊರೆಯಲಿದೆ ಎಂದು ಆಸ್ಪತ್ರೆಯು ಹೇಳಿದೆ.

ಕೊರೋನ ಸೋಂಕಿತರ ಸಂಖ್ಯೆ ಹೆಚ್ಚಳವಾದ ಬೆನ್ನಲ್ಲಿಯೇ ಸರಕಾರ ಲಾಕ್ ಡೌನ್ ಘೋಷಿಸಿ, ಕೋವಿಡೇತರ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಆಸ್ಪತ್ರೆಗಳಲ್ಲಿ ಒಪಿಡಿ ಸ್ಥಗಿತ ಮಾಡುವಂತೆ ಸೂಚಿಸಿತ್ತು. ಅದೇ ರೀತಿ, ಚೇತರಿಸಿಕೊಂಡ ರೋಗಿಗಳನ್ನು ಮನೆಗೆ ಕಳುಹಿಸಿ, ತುರ್ತಾಗಿ ಚಿಕಿತ್ಸೆ ಅಗತ್ಯ ಇರುವವರಿಗೆ ಮಾತ್ರ ಸೇವೆ ನೀಡಲು ನಿರ್ದೇಶನ ನೀಡಿತ್ತು. ಆದುದರಿಂದಾಗಿ ನಿಮ್ಹಾನ್ಸ್ ಮಾರ್ಚ್ 26ರಿಂದ ಒಪಿಡಿಯನ್ನು ಸ್ಥಗಿತಗೊಳಿಸಿತ್ತು. ಈ ಆಸ್ಪತ್ರೆಯನ್ನೇ ನೆಚ್ಚಿಕೊಂಡಿದ್ದ ಮಾನಸಿಕ ರೋಗಿಗಳು ಖಾಸಗಿ ಆಸ್ಪತ್ರೆಗಳ ಮೊರೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗ ಲಾಕ್ ಡೌನ್ ಸಡಿಲಿಸಿದ ಪರಿಣಾಮ ನಿಮ್ಹಾನ್ಸ್ ಒಪಿಡಿ ಆರಂಭಿಸಲು ನಿರ್ಧರಿಸಿದೆ.

ಅಗತ್ಯ ಮುಂಜಾಗರೂಕತೆ: ರೋಗಿಗಳ ದಟ್ಟಣೆ ಉಂಟಾಗದಂತೆ ನೋಡಿಕೊಂಡು ಚಿಕಿತ್ಸೆ ನೀಡಬೇಕಾಗಿದೆ. ಹಾಗಾಗಿ ಒಪಿಡಿ ಆರಂಭಿಸಿದರೂ ಸೀಮಿತ ಸಂಖ್ಯೆಯ ರೋಗಿಗಳಿಗೆ ಸೇವೆ ನೀಡಲಾಗುತ್ತದೆ. ಸಂಸ್ಥೆಗೆ ಬರುವ ಮೊದಲು ಐವಿಆರ್‍ಎಸ್ ಮೂಲಕ ಸಂಭಾಷಣೆ ನಡೆಸಿ (080-26991699), ನೋಂದಣಿ ಮಾಡಿಕೊಳ್ಳಬೇಕು. ಬಳಿಕ ಸಂಸ್ಥೆಯಿಂದಲೇ ವ್ಯಕ್ತಿಯನ್ನು ಸಂಪರ್ಕಿಸಿ, ಸಮಸ್ಯೆಯ ಬಗ್ಗೆ ಸಮಾಲೋಚನೆ ನಡೆಸಲಾಗುತ್ತದೆ. ಸಂಸ್ಥೆಗೆ ಬರುವುದು ಅಗತ್ಯವಿದ್ದಲ್ಲಿ ನಾವೇ ಸೂಚಿಸುತ್ತೇವೆ. ಪ್ರತಿಯೊಬ್ಬರೂ ಈ ಪ್ರಕ್ರಿಯೆ ಪೂರೈಸಿಯೇ ಸೇವೆ ಪಡೆಯಬೇಕು’ ಎಂದು ನಿಮ್ಹಾನ್ಸ್ ನಿರ್ದೇಶಕ ಡಾ.ಬಿ.ಎನ್. ಗಂಗಾಧರ್ ತಿಳಿಸಿದ್ದಾರೆ.

ತುರ್ತಾಗಿ ಚಿಕಿತ್ಸೆ ಅಗತ್ಯ ಇಲ್ಲದಿದ್ದವರು ಸಂಸ್ಥೆಗೆ ಬರದಿದ್ದರೆ ಒಳ್ಳೆಯದು. ಈ ಹಿಂದೆ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ರೋಗಿಗಳು ಮಾತ್ರ ಐವಿಆರ್‍ಎಸ್ ಮೂಲಕ ನೋಂದಣಿ ಮಾಡಿಕೊಳ್ಳಬೇಕಾಗಿತ್ತು. ಈಗ ಎಲ್ಲ ಹೊರರೋಗಿಗಳು ಈ ವ್ಯವಸ್ಥೆಗೆ ಒಳಪಡಬೇಕು. ತಮ್ಮ ಸರದಿಗಾಗಿ ಕಾಯಲು ಸಂಸ್ಥೆಯಲ್ಲಿ ಆಶ್ರಯ ತಾಣಗಳನ್ನು ನಿರ್ಮಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

2.7 ಲಕ್ಷ ದೂರವಾಣಿ ಕರೆ: ಲಾಕ್ ಡೌನ್ ಪರಿಣಾಮ ಮಾನಸಿಕ ಸಮಸ್ಯೆಗೆ ಒಳಗಾಗುವವರ ಸಂಖ್ಯೆ ಹೆಚ್ಚಳವಾಗುತ್ತಿದ್ದ ಹಿನ್ನೆಲೆಯಲ್ಲಿ ನಿಮ್ಹಾನ್ಸ್ ಪ್ರತ್ಯೇಕ ಸಹಾಯವಾಣಿಯನ್ನು ಪ್ರಾರಂಭಿಸಿ, ಸಮಸ್ಯೆಗಳಿಗೆ ತಜ್ಞರಿಂದ ಪರಿಹಾರ ಒದಗಿಸುವ ಪ್ರಯತ್ನವನ್ನೂ ಮಾಡಿತ್ತು. ಈ ಸೇವೆ ಈಗಲೂ ಮುಂದುವರಿಯುತ್ತಿದ್ದು, 2.7 ಲಕ್ಷ ದೂರವಾಣಿ ಕರೆಗಳು ಬಂದಿವೆ. ಅದರಲ್ಲಿ 45 ಸಾವಿರ ಕರೆಗಳು ಮನೋವೈದ್ಯಶಾಸ್ತ್ರ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದ್ದಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News