ವಿದ್ಯುತ್‍ಶಕ್ತಿ ತಿದ್ದುಪಡಿ ಮಸೂದೆ-2020 ಜಾರಿ ಬೇಡ: ರೈತ ಸಂಘ ಒತ್ತಾಯ

Update: 2020-05-31 18:13 GMT

ಬೆಂಗಳೂರು, ಮೇ 31: ದೇಶದ ರೈತರು, ಕೂಲಿಕಾರರು, ಕಾರ್ಮಿಕರು, ಸಣ್ಣ ಕೈಗಾರಿಕೆಗಳು ಹಾಗೂ ವಿದ್ಯುತ್ ಗ್ರಾಹಕರಿಗೆ ಮಾರಕವಾಗುವ ಕೇಂದ್ರದ ವಿದ್ಯುತ್‍ಶಕ್ತಿ ತಿದ್ದುಪಡಿ ಮಸೂದೆ-2020ನ್ನು ರಾಜ್ಯದಲ್ಲಿ ಜಾರಿಗೊಳಿಸಬಾರದೆಂದು ಕರ್ನಾಟಕ ಪ್ರಾಂತ ರೈತ ಸಂಘ ಒತ್ತಾಯಿಸಿದೆ.

ಕೇಂದ್ರ ಸರಕಾರ ಕಾರ್ಪೊರೇಟ್ ಕಂಪೆನಿಗಳ ಲೂಟಿ ಮಾಡುವುದಕ್ಕೆ ಅನುಕೂಲ ಕಲ್ಪಿಸುವ ರೀತಿಯಲ್ಲಿ ವಿದ್ಯುತ್‍ಶಕ್ತಿ ತಿದ್ದುಪಡಿ ಮಸೂದೆ-2020ನ್ನು ಜಾರಿ ಮಾಡಲು ಮುಂದಾಗಿದೆ. ಈ ಮಸೂದೆಯನ್ನು ಎಲ್ಲ ರಾಜ್ಯ ಸರಕಾರಗಳು ಕೂಡಲೇ ಜಾರಿಗೆ ಸೂಕ್ತ ಕ್ರಮ ವಹಿಸುವಂತೆ ಒತ್ತಡ ಹಾಕುತ್ತಿದ್ದು, ಇದು ಒಕ್ಕೂಟ ವ್ಯವಸ್ಥೆಗೆ ಮಾರಕವಾದ ಮನಸ್ಥಿತಿಯಾಗಿದೆ.

ಈ ಮಸೂದೆ ಜಾರಿಯಾದರೆ ವಿದ್ಯುತ್ ಉತ್ಪಾದನೆ, ಸರಬರಾಜು ಮತ್ತು ವಿತರಣೆಗಳ ಕಂಪನಿಗಳು ಹಾಗೂ ಅವುಗಳ ಲಕ್ಷಾಂತರ ಕೋಟಿ ರೂ.ಗಳ ಆಸ್ತಿ, ಸಂಪತ್ತುಗಳು ಕಾರ್ಪೊರೇಟ್ ಕಂಪೆನಿಗಳ ಕೈ ವಶವಾಗಲಿವೆ. ಅದೇ ರೀತಿ ರೈತರ ಲಕ್ಷಾಂತರ ಕೃಷಿ ಪಂಪ್‍ಸೆಟ್‍ಗಳಿಗೆ ಮತ್ತು ಭಾಗ್ಯ ಜ್ಯೋತಿ, ಕುಠೀರ ಜ್ಯೋತಿಗಳಿಗೆ ಹಾಗೂ ಸಣ್ಣ ಕೈಗಾರಿಕೆಗಳಿಗೆ ಒದಗಿಸಲಾಗುತ್ತಿರುವ ಉಚಿತ, ಸಹಾಯ ಧನದ ವಿದ್ಯುತ್‍ಗೆ ಸಂಪೂರ್ಣ ಕತ್ತರಿ ಬೀಳಲಿದೆ. ಹೀಗಾಗಿ ರಾಜ್ಯ ಸರಕಾರ ಯಾವ ಕಾರಣಕ್ಕೂ ಮಸೂದೆಯನ್ನು ಜಾರಿ ಮಾಡಬಾರದು.

ಕೆಪಿಆರ್‍ಎಸ್‍ಗೆ ಬೆಂಬಲ: ವಿದ್ಯುತ್‍ಶಕ್ತಿ ತಿದ್ದುಪಡಿ ಮಸೂದೆ -2020ನ್ನು ಕೇಂದ್ರ ಸರಕಾರ ಕೂಡಲೇ ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ಜೂ.1ರಂದು ದೇಶಾದಾದ್ಯಂತ ವಿದ್ಯುತ್ ಕಂಪೆನಿಗಳ ನೌಕರರು, ಎಂಜಿನಿಯರ್ ಗಳ ರಾಷ್ಟ್ರೀಯ ವೇದಿಕೆ ವತಿಯಿಂದ ಹೋರಾಟ ಹಮ್ಮಿಕೊಳ್ಳಲಾಗಿದೆ. ಅದಕ್ಕೆ ಕರ್ನಾಟಕ ಪ್ರಾಂತ ರೈತ ಸಂಘ ಬೆಂಬಲಿಸಲಿದೆ ಎಂದು ಪ್ರಧಾನ ಕಾರ್ಯದರ್ಶಿ ಯು.ಬಸವರಾಜ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News