ಬೆಂಗಳೂರು: ಕಸ ಎಸೆದವರಿಗೆ 10 ಸಾವಿರ ರೂ. ದಂಡ ವಿಧಿಸಿದ ಬಿಬಿಎಂಪಿ

Update: 2020-05-31 18:16 GMT

ಬೆಂಗಳೂರು, ಮೇ 31: ಪಾದರಾಯನಪುರದಿಂದ ಪ್ರಾಣಿ ತ್ಯಾಜ್ಯ ತೆಗೆದುಕೊಂಡು ಬಾಪೂಜಿ ನಗರದಲ್ಲಿ ಎಸೆಯಲು ಬಂದಿದ್ದವರಿಗೆ ಬಿಬಿಎಂಪಿ ಅಧಿಕಾರಿಗಳು 10 ಸಾವಿರ ರೂ. ದಂಡ ವಿಧಿಸಿದ್ದಾರೆ.

ಬಾಪೂಜಿನಗರ ವಾರ್ಡ್ 134 ಹಾಗೂ ಹಂಪಿನಗರ ವಾರ್ಡ್ 133ಕ್ಕೆ ಸೇರುವ ಅಂಡರ್ ಪಾಸ್ ಬಳಿ ಹಾಕಲಾಗಿದ್ದ ಕಸವನ್ನು ತೆರವುಗೊಳಿಸಿ ಸ್ವಚ್ಛಗೊಳಿಸಲಾಗಿತ್ತು. ಆದರೂ ಕೆಲವು ದುಷ್ಕರ್ಮಿಗಳು ರಾತ್ರಿ ವೇಳೆ ಪ್ರಾಣಿ ತ್ಯಾಜ್ಯ ತಂದು ಎಸೆಯುತ್ತಿದ್ದರು. ಇದರಿಂದಾಗಿ ಬಾಪೂಜಿ ನಗರದಲ್ಲಿ ಬಿಬಿಎಂಪಿ ಮಾರ್ಷಲ್ ಕಾರ್ಯಾಚರಣೆ ನಡೆಸಿದ್ದರು.

ಬಿಬಿಎಂಪಿ ಅಧಿಕಾರಿ ಸೋಮಶೇಖರ್ ಪಾಟೀಲ್ ನೇತೃತ್ವದಲ್ಲಿ ಮಾರ್ಷಲ್‍ಗಳು ಕಾರ್ಯಾಚರಣೆ ನಡೆಸಿದ್ದರು. ಇತ್ತ ಪಾದರಾಯನಪುರದ ಕೆಲವರು ಆಟೋದಲ್ಲಿ ಕೋಳಿ ಕಸ ಹಾಗೂ ಕುರಿಗಳ ಬೋಟಿ ತ್ಯಾಜ್ಯ ತಂದು ರಾಜಕಾಲುವೆಗೆ ಹಾಕಲು ಯತ್ನಿಸಿದ್ದರು. ಈ ವೇಳೆ ಮಾರ್ಷಲ್‍ಗಳು ಅವರನ್ನು ರೆಡ್ ಹ್ಯಾಂಡಾಗಿ ಹಿಡಿದು 10 ಸಾವಿರ ರೂ. ದಂಡ ವಿಧಿಸಿದ್ದಾರೆ.

ಕೊರೋನ ಹಾಟ್‍ಸ್ಪಾಟ್ ಎಂದೇ ಗುರುತಿಸಿಕೊಂಡಿರುವ ಪಾದರಾಯನಪುರ ಸಮೀಪದ ಬಾಪೂಜಿ ನಗರಕ್ಕೂ ಸೋಂಕು ಹರಡುತ್ತಾ ಎನ್ನುವ ಆತಂಕ ಶುರುವಾಗಿದೆ. ಹೀಗಾಗಿ ಬಿಬಿಎಂಪಿ ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News