ಇಂದಿನಿಂದ ರೈಲು ಸಂಚಾರ: 200 ರೈಲುಗಳಲ್ಲಿ 1.5 ಲಕ್ಷ ಮಂದಿ ಪ್ರಯಾಣ

Update: 2020-06-01 05:56 GMT

ಹೊಸದಿಲ್ಲಿ : ಇಂದಿನಿಂದ ರೈಲು ಸೇವೆ ದೇಶದಲ್ಲಿ ಪುನರಾರಂಭವಾಗಲಿದ್ದು, ವಿಶೇಷ ಎಕ್ಸ್‌ಪ್ರೆಸ್ ರೈಲು‌ಗಳಲ್ಲಿ ಸುಮಾರು 1.45 ಲಕ್ಷ ಮಂದಿ ಪ್ರಯಾಣ ಮಾಡುವ ನಿರೀಕ್ಷೆ ಇದೆ. ಟಿಕೆಟ್ ಕಾಯ್ದಿರಿಸುವಿಕೆ ಬಗ್ಗೆ ನಿಗಾ ವಹಿಸಲಾಗಿದ್ದು, ದುರೊಂತೊ, ಶತಾಬ್ದಿ ಮತ್ತು ಗರೀಬ್ ರಥ ರೈಲುಗಳನ್ನು ಆರಂಭಿಸುವ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದೆ.

ರೈಲುಗಳ ಸಂಚಾರ ಅಥವಾ ಹಲವು ನಿಲುಗಡೆಗಳನ್ನು ನೀಡುವ ಬಗ್ಗೆ ಮಹಾರಾಷ್ಟ್ರ, ಜಾರ್ಖಂಡ್ ಮತ್ತು ಆಂಧ್ರಪ್ರದೇಶ ವಿರೋಧ ವ್ಯಕ್ತಪಡಿಸಿವೆ ಎಂದು ಮೂಲಗಳು ಹೇಳಿವೆ. ಆದರೆ ನಿಗದಿಯಾದಂತೆ ಎಲ್ಲ ರೈಲುಗಳು ಸಂಚರಿಸಲಿವೆ ಎಂದು ಭಾರತೀಯ ರೈಲ್ವೆ ಸಚಿವಾಲಯ ಸ್ಪಷ್ಟಪಡಿಸಿದೆ.

ಜೂನ್ 30ರ ವರೆಗೆ ಈ ವಿಶೇಷ ರೈಲುಗಳಿಗೆ ಸುಮಾರು 26 ಲಕ್ಷ ಮಂದಿ ಟಿಕೆಟ್ ಕಾಯ್ದಿರಿಸಿದ್ದಾರೆ. ಈಗಾಗಲೇ ಓಡಾಟ ಆರಂಭಿಸಿರುವ ಶ್ರಮಿಕ್ ಸ್ಪೆಷಲ್ ಮತ್ತು ರಾಜಧಾನಿ ರೈಲುಗಳ ಜತೆಗೆ ಈ ರೈಲುಗಳೂ ಓಡಾಟ ಆರಂಭಿಸಲಿವೆ. ಶ್ರಮಿಕ್ ಸ್ಪೆಷಲ್ ರೈಲುಗಳಿಗೆ ಬೇಡಿಕೆ ನಿಧಾನವಾಗಿ ಕಡಿಮೆಯಾಗುತ್ತಿದೆ ಎಂದು ಸಚಿವಾಲಯ ಪ್ರಕಟಿಸಿದೆ.

ರೈಲು ಸಂಚಾರವನ್ನು ಯಥಾಸ್ಥಿತಿಗೆ ತರುವ ಪ್ರಯತ್ನವಾಗಿ 200 ವಿಶೇಷ ರೈಲು ಓಡಿಸಲು ಕ್ರಮ ಕೈಗೊಳ್ಳಲಾಗಿದೆ. ಈ ರೈಲುಗಳು ಮಾಮೂಲು ರೈಲುಗಳ ಮಾದರಿಯಲ್ಲೇ ಇದ್ದು, ಎಸಿ ಹಾಗ್ ನಾನ್-ಎಸಿ ಒಳಗೊಂಡ ಸಂಪೂರ್ಣ ಕಾಯ್ದಿರಿಸಿದ ಬೋಗಿಗಳಾಗಿರುತ್ತವೆ. ಜನರಲ್ ಬೋಗಿಗಳು ಕುಳಿತುಕೊಂಡು ಪ್ರಯಾಣಿಸಲು ಕಾಯ್ದಿರಿಸಿದ ಬೋಗಿಗಳಾಗಿರುತ್ತವೆ. ಇದು ಜನದಟ್ಟಣೆಯನ್ನು ತಪ್ಪಿಸಲಿದೆ. ರೈಲು ಏರುವ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಸ್ಕ್ರೀನಿಂಗ್ ಕಡ್ಡಾಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News