‘ಆಪ್ ಗುಜರಾತ್ ಕೋರ್ಟ್ ಕಾ ಭಿ ಕ್ರೋನಾಲಜಿ ಸಮಜ್ ಲೀಜಿಯೇ....’

Update: 2020-06-01 08:56 GMT

ಇಂದು ಇಡೀ ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಅತಿ ಹೆಚ್ಚು ದಾಖಲಾಗುತ್ತಿರುವುದು ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ. ಆದರೆ ಗುಜರಾತಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಮಹಾರಾಷ್ಟ್ರಕ್ಕಿಂತ ಕಡಿಮೆ ಇರಲು ಕಾರಣ ಅಲ್ಲಿ ಸೋಂಕಿತರು ಕಡಿಮೆ ಇರುವುದಲ್ಲ. ಬದಲಿಗೆ ಪರೀಕ್ಷೆಗಳನ್ನೇ ಕಡಿಮೆ ಮಾಡುತ್ತಿರುವುದು!

ವಾಸ್ತವದಲ್ಲಿ ಮಹಾರಾಷ್ಟ್ರದಲ್ಲಿ ಮಾಡುತ್ತಿರುವ ಟೆಸ್ಟ್ ಗಳ ಅರ್ಧದಷ್ಟು ಟೆಸ್ಟ್ ಗಳನ್ನೂ ಸಹ ಗುಜರಾತ್ ಸರ್ಕಾರ  ಮಾಡುತ್ತಿಲ್ಲ. ಸೋಂಕಿತರನ್ನು ಆಸ್ಪತ್ರೆಯಲ್ಲಿ ನೋಂದಾಯಿಸಿಕೊಳ್ಳುತ್ತಿಲ್ಲ. ಸತ್ತವರ ಸರಿಯಾದ ದಾಖಲೆಗಳನ್ನು ಇಟ್ಟುಕೊಳ್ಳುತ್ತಿಲ್ಲ. ಹಾಗು ಸಂಬಂಧಿಕರಿಗೂ ತಿಳಿಸುತ್ತಿಲ್ಲ.

ಅದರಲ್ಲೂ ವಿಶೇಷವಾಗಿ ಗುಜರಾತ್ ನ ರಾಜಧಾನಿ ಅಹಮದಾಬಾದಿನ ಸರ್ಕಾರಿ ಆಸ್ಪತ್ರೆ ಸಾವಿನ ಕೂಪವಾಗಿ ಬಿಟ್ಟಿದೆ. ಈವರೆಗೆ ಗುಜರಾತಿನಲ್ಲಿ ಕೋವಿಡ್ ನಿಂದ ಸತ್ತವರಲ್ಲಿ ಅರ್ಧದಷ್ಟು ಭಾಗ ಸತ್ತಿರುವುದು ಅಹಮದಾಬಾದಿನ ಈ ಆಸ್ಪತ್ರೆಯಲ್ಲೇ. ಕಾರಣ ನಿರ್ಲಕ್ಷ್ಯ, ಸಿಬ್ಬಂದಿ ಹಾಗು ಪರಿಕರಗಳ ಕೊರತೆ, ಸರ್ಕಾರದ ಬೇಜವಾಬ್ದಾರಿ.. ಇತ್ಯಾದಿ.

ಹೀಗೆ ಕೋವಿಡ್ ನಿರ್ವಹಣೆಯಲ್ಲಿ ‘ಗುಜರಾತ್ ಮಾಡೆಲ್’ ಎಂದರೆ ಸುಳ್ಳುಗಳನ್ನು ಹೇಳುತ್ತಾ ಸತ್ಯವನ್ನು ಮರೆಮಾಚುತ್ತಾ ನಡೆಸುತ್ತಿರುವ ಕಪಟವಾಗಿದೆ. ಇತ್ತೀಚೆಗೆ, ಇವೆಲ್ಲವನ್ನೂ  ಕಂಡು ಬೇಸತ್ತ ಅಹಮದಾಬಾದಿನ ಸರ್ಕಾರಿ ಆಸ್ಪತ್ರೆಯ ಅನಾಮಧೇಯ ವೈದ್ಯರೊಬ್ಬರು ಗುಜರಾತಿನ ಹೈಕೋರ್ಟಿಗೆ ಪತ್ರವೊಂದನ್ನು ಬರೆದಿದ್ದರು. ಅದನ್ನು ಆಧರಿಸಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯೊಂದನ್ನು ಗುಜರಾತಿನ ಹೈಕೋರ್ಟು ದಾಖಲಿಸಿಕೊಂಡಿತು. ಪ್ರಾರಂಭಿಕ ವಿಚಾರಣೆಯಲ್ಲಿ ಸರ್ಕಾರವು ಸತ್ಯಗಳನ್ನು ಮರೆಮಾಚುತ್ತಿರುವುದನ್ನು ಕಂಡುಕೊಂಡಿದ್ದ ಹೈಕೋರ್ಟಿನ ದ್ವಿಸದಸ್ಯ ಪೀಠ ಕೂಡಲೇ ಸರಿಯಾದ ಕ್ರಮಗಳನ್ನು ಜಾರಿಗೊಳಿಸಲು ಆದೇಶಿಸಿತ್ತು

ಆದರೆ ಈ ಟೀಕೆಗಳು ದಿನಗಳೆದಂತೆ ಹೇಗೆ ಬದಲಾಗುತ್ತಾ ಹೋಗಿ ಪ್ರಶಂಸೆಗಳಾಗಿ ಮಾರ್ಪಾಡಾಯಿತು ಎನ್ನುವ ಕ್ರೋನಾಲಜಿಯನ್ನು ನೀವು ಗಮನಿಸಬೇಕು..

ಮೇ 22-

ಅಹಮದಾಬಾದಿನ ಹೈಕೋರ್ಟಿನ ಜಸ್ಟಿಸ್ ಪಾರ್ದಿವಾಲ ಮತ್ತು ಜಸ್ಟಿಸ್ ವೋರಾ ಪೀಠ:

"ಕೋವಿಡ್ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಗುಜರಾತ್ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ. ಅದರಲ್ಲೂ ಅಹಮದಾಬಾದಿನ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ. ಸಾವಿನ ಸೆರೆಮನೆಯಾಗಿದೆ. ಗುಜರಾತ್ ಸರ್ಕಾರ ಮೇ 29ರ ಒಳಗೆ ಇದರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಂಡು ವರದಿಯನ್ನು ನೀಡದಿದ್ದರೆ ಕೋರ್ಟು ಕಠಿಣವಾದ ಆದೇಶಗಳನ್ನು ನೀಡಬೇಕಾಗುತ್ತದೆ"

ಮೇ 25-

ಹೈಕೋರ್ಟು ಈ ಕ್ರಮಗಳಿಗೆ ಮುಂದಾಗಬಾರದೆಂದು ಸರ್ಕಾರಿ ವಕೀಲರ ಮನವಿ. ಈ ಮನವಿಯಿಂದ ಕೆಂಡಾಮಂಡಲವಾಗುವ ಕೋರ್ಟು ಮೇ 29ರೊಳಗೆ ಸರಿಯಾದ ತಿದ್ದುಪಡಿ ಕ್ರಮಗಳನ್ನು ತೆಗೆದುಕೊಂಡು ವರದಿ ಮಾಡಲು ಸೂಚನೆ ಹಾಗು ಆಸ್ಪತೆಯ ಖುದ್ದು ಭೇಟಿ ಕಾರ್ಯಕ್ರಮದ ಘೋಷಣೆ.

ಮೇ 29-

ಅಹಮದಾಬಾದಿನ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾದ ಜಸ್ಟಿಸ್ ವಿಕ್ರಂ ನಾಥರಿಂದ ಈ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ವಿಚಾರಣೆ ನಡೆಸುತ್ತಿದ್ದ ಪಾರ್ದಿವಾಲ -ವೋರಾ ಪೀಠದ ಪುನರ್ರಚನೆ.

ಈ ಹಿಂದಿನ ಜಸ್ಟಿಸ್ ಪಾರ್ದಿವಾಲ ಮತ್ತು ಜಸ್ಟಿಸ್ ವೋರಾ ಪೀಠದಲ್ಲಿ ಆದೇಶಗಳನ್ನು ಬರೆದ ಜಸ್ಟಿಸ್ ಪಾರ್ದಿವಾಲ ಆ ಪೀಠದ ಹಿರಿಯ ನ್ಯಾಯಾಧೀಶರಾಗಿದ್ದರು.

ಪುನರ್ರಚಿತವಾದ ಪೀಠದ ಜವಾಬ್ದಾರಿಯನ್ನು ಈಗ ಸಾಕ್ಷಾತ್ ಮುಖ್ಯ ನ್ಯಾಯಮೂರ್ತಿ ವಿಕ್ರಂ ನಾಥರೇ ವಹಿಸಿಕೊಂಡಿದ್ದರಿಂದ ಹಳೆಯ ಪೀಠದಲ್ಲಿ  ಹಿರಿಯ ನ್ಯಾಯಾಧೀಶರಾಗಿದ್ದ ಪಾರ್ದಿವಾಲಾರವರು ಈ ಹೊಸ ದ್ವಿಸದಸ್ಯ ಪೀಠದಲ್ಲಿ ಕಿರಿಯ ಸಹಚರರಾದರು!

ಮೇ 31-

ಮುಖ್ಯ ನ್ಯಾಯಮೂರ್ತಿ ವಿಕ್ರಂ ನಾಥ ಹಾಗೂ ಜಸ್ಟಿಸ್ ಪಾರ್ದಿವಾಲರ ಪೀಠ :

"ಗುಜರಾತ್ ಸರ್ಕಾರವು ಕೋವಿಡ್ ನಿರ್ವಹಣೆಯಲ್ಲಿ ಅತ್ಯುತ್ತಮವಾದ ಕೆಲಸವನ್ನು ಮಾಡುತ್ತಿದೆ. ಸರ್ಕಾರವು ಈಗ ತೆಗೆದುಕೊಂಡಿರುವ ಕ್ರಮಗಳನ್ನು ತೆಗೆದುಕೊಳ್ಳದಿರುತ್ತಿದ್ದರೆ ನಾವೆಲ್ಲರೂ ಸತ್ತೇ ಹೋಗಿರುತ್ತಿದ್ದೆವು. ಅಹಮದಾಬಾದಿನ ಆಸ್ಪತ್ರೆಯೂ ಸಹ ಅತ್ಯುತ್ತಮವಾಗಿದೆ. ಈ ಸಾರ್ವಜನಿಕ ಮೊಕದ್ದಮೆಯನ್ನು ಅಲಹಾಬಾದ್ ಕೋರ್ಟು ಕೈಗೆತ್ತಿಕೊಂಡಿರುವುದು ಸರ್ಕಾರದ ಮೇಲೆ ಆಕ್ಷೇಪಣೆ ಮಾಡುವುದಕ್ಕಲ್ಲ. ವಿರೋಧ  ಪಕ್ಷಗಳೂ ಸಹ ಇಂದಿನ ಸಂದರ್ಭದಲ್ಲಿ ಸರ್ಕಾರಕ್ಕೆ ರಚನಾತ್ಮಕ ಸಹಕಾರ ಕೊಡಬೇಕು"

ಅಡಿ ಟಿಪ್ಪಣಿ :

ಅಹಮದಾಬಾದಿನ ಹಾಲಿ ಮುಖ್ಯನ್ಯಾಯಮೂರ್ತಿ ವಿಕ್ರಂ ನಾಥರು 2014 ರಲ್ಲಿ ಉತ್ತರಪ್ರದೇಶದ ಅಲಹಾಬಾದಿನ ಹೈಕೋರ್ಟಿನ ನ್ಯಾಯಾಧೀಶರಾಗಿದ್ದಾಗ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ನರೇಂದ್ರ ಮೋದಿಯವರ ಗೆಲುವನ್ನು ಪ್ರಶ್ನಿಸಿದ್ದ ತಕರಾರು ಅರ್ಜಿಯನ್ನು ಹೆಚ್ಚಿನ ವಿಚಾರಣೆಯಿಲ್ಲದೆ ವಜಾ ಮಾಡಿದ್ದರು.

ಆದರೂ 2019ರ ಏಪ್ರಿಲ್ ನಲ್ಲಿ ಸುಪ್ರೀಂ ಕೋರ್ಟಿನ ಕೊಲಿಜಿಯಂ ಆಗ ಅಲಹಾಬಾದ್ ಹೈಕೋರ್ಟಿನ  ಹಿರಿಯ ನ್ಯಾಯಾಧೀಶರಾಗಿದ್ದ ವಿಕ್ರಂ ನಾಥರನ್ನು ಆಂಧ್ರಪ್ರದೇಶದ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರನ್ನಾಗಿಸಲು ಮಾಡಿದ್ದ ಶಿಪಾರಸ್ಸುಗಳನ್ನು ಮೋದಿ ಸರ್ಕಾರ ವಾಪಸ್ ಕಳಿಸಿತ್ತು .

ಆದರೆ 2019 ರ ಆಗಸ್ಟ್ ನಲ್ಲಿ ಮೋದಿ ಸರ್ಕಾರವೇ ಕೊಲಿಜಿಯಂಗೆ ವಿಶೇಷ ಮನವಿ ಮಾಡಿ ಜಸ್ಟಿಸ್ ವಿಕ್ರಂ ನಾಥರನ್ನು ಗುಜರಾತಿನ ಮುಖ್ಯ ನ್ಯಾಯಾಧೀಶರನ್ನಾಗಿಸಿಕೊಂಡಿತು.

ಒಂದು ಗಿಳಿಪಾಠ : ಭಾರತದ ನ್ಯಾಯಾಂಗವು ಒಂದು ಸ್ವತಂತ್ರ ಸಂಸ್ಥೆಯಾಗಿದೆ....!

- ಶಿವಸುಂದರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News