ಸರಕಾರದ ಅನುಮತಿ ನಂತರ ಪದಗ್ರಹಣ ‘ಪ್ರತಿಜ್ಞಾ' ಕಾರ್ಯಕ್ರಮ: ಡಿ.ಕೆ.ಶಿವಕುಮಾರ್

Update: 2020-06-01 16:55 GMT

ಬೆಂಗಳೂರು, ಜೂ.1: ರಾಜ್ಯ ಹಾಗೂ ಕೇಂದ್ರ ಸರಕಾರದ ನೂತನ ಮಾರ್ಗಸೂಚಿಯಲ್ಲಿ ಜೂ.8ರವರೆಗೂ ಯಾವುದೇ ರಾಜಕೀಯ ಸಭೆ ನಡೆಸುವಂತಿಲ್ಲ ಎಂದು ಹೇಳಿದೆ. ಹೀಗಾಗಿ ಸರಕಾರ ಅನುಮತಿ ನೀಡಿದ ನಂತರ ಪದಗ್ರಹಣ ‘ಪ್ರತಿಜ್ಞಾ' ಕಾರ್ಯಕ್ರಮ ನಡೆಯುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಸೋಮವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ ಅವರು, ಇದೇ ತಿಂಗಳು 7ರಂದು ನಡೆಸಲು ಉದ್ದೇಶಿಸಲಾಗಿದ್ದ ಪದಗ್ರಹಣ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದರು.

ನನಗೆ ಕೆಪಿಸಿಸಿ ಅಧ್ಯಕ್ಷ ಜವಾಬ್ದಾರಿ ನೀಡಿದ ಘಳಿಗೆಯಿಂದಲೇ ನಾನು ನನ್ನ ಕೆಲಸ ಆರಂಭಿಸಿದ್ದೇನೆ. ನಂತರ ಕೊರೋನ ಸೋಂಕು ಎದುರಾಗಿದ್ದು, ಎಲ್ಲ ಹಿರಿಯ ನಾಯಕರ ಸಹಕಾರದೊಂದಿಗೆ ಪಕ್ಷದ ಕಾರ್ಯಕರ್ತರಿಗೆ ಅಗತ್ಯ ಮಾರ್ಗದರ್ಶನ ನೀಡಿ ನನ್ನ ಕೆಲಸ ಮುಂದುವರಿಸಿದ್ದೇನೆ ಎಂದು ಅವರು ಹೇಳಿದರು.

ಕೋವಿಡ್ ಸಮಯದಲ್ಲಿ ಯಾವುದೇ ರಾಜಕೀಯ ಸಮಾರಂಭ ನಡೆಸಬಾರದು ಎಂದು ಸರಕಾರ ಆದೇಶ ನೀಡಿದೆ. ಕಳೆದ ಎರಡೂವರೆ ತಿಂಗಳಿಂದ ನಮ್ಮ ಹೋರಾಟ ನಡೆಯುತ್ತಿದ್ದು, ಮಾನವ ಸೇವೆಗಾಗಿ, ಮಾನವೀಯತೆಯಿಂದ ಸರಕಾರಕ್ಕೆ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ. ಸರಕಾರ ವಿಫಲವಾದಾಗ ಪ್ರತಿಪಕ್ಷವಾಗಿ ಎಲ್ಲ ವರ್ಗದ ಜನರ ಧ್ವನಿಯಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಶಿವಕುಮಾರ್ ಹೇಳಿದರು.

ಪಕ್ಷದ ಅಧ್ಯಕ್ಷರಾಗಿ ನೇಮಕಗೊಂಡ ನಂತರ ಸಾಂಕೇತಿಕವಾಗಿ ಕಾರ್ಯಕ್ರಮ ಮಾಡುವುದು ಒಂದು ಪದ್ಧತಿ. ನಮ್ಮ ಎಲ್ಲ ನಾಯಕರ ಜತೆ ಸೇರಿ ಸರಳ ಹಾಗೂ ವಿನೂತನ ಕಾರ್ಯಕ್ರಮ ಮಾಡಲು ತೀರ್ಮಾನಿಸಿದ್ದೇವೆ. ಅದೇನೆಂದರೆ ಬೆಂಗಳೂರಿನಲ್ಲಿ ಸಾಂಕೇತಿಕವಾಗಿ 150 ಮಂದಿ ಸೇರಿ ಕಾರ್ಯಕ್ರಮ ಮಾಡುತ್ತೇವೆ. ಉಳಿದಂತೆ ಎಲ್ಲ ಪಂಚಾಯತ್ ಗಳಲ್ಲಿ, ವಾರ್ಡ್‍ಗಳಲ್ಲಿ ಸೇರಿ ಸುಮಾರು 7,800 ಕಡೆಗಳಲ್ಲಿ ಏಕಕಾಲದಲ್ಲಿ ‘ವಂದೇ ಮಾತರಂ’ ದೇಶಭಕ್ತಿ ಗೀತೆಯಿಂದ ಪ್ರಾರಂಭ ಮಾಡಿ ಸಂವಿಧಾನದ ಪೀಠಿಕೆ ವಾಚನದೊಂದಿಗೆ ಪ್ರತಿಜ್ಞೆ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಸುರಕ್ಷಿತ ಅಂತರ ಕಾಯ್ದುಕೊಂಡು ದೇಶದ ಹಾಗೂ ಕಾಂಗ್ರೆಸ್ ಪಕ್ಷದ ಬಾವುಟ ಹಾರಿಸಿ ಟಿವಿಯಲ್ಲಿ ನೇರ ಪ್ರಸಾರ ಮಾಡಿಸಲಾಗುವುದು. ಎಲ್ಲ ಕಡೆಯೂ ಕಾರ್ಯಕ್ರಮಗಳನ್ನು ಜೂಮ್ ಮೂಲಕ ನೇರ ಪ್ರಸಾರ ಮಾಡಲು ತೀರ್ಮಾನಿಸಿದ್ದೇವೆ. ರಾಜ್ಯದ ಮೂಲೆ ಮೂಲೆಯಿಂದ ಲಕ್ಷಂತರ ಜನರನ್ನು ಸೇರಿಸಿ, ಟ್ರಾಫಿಕ್ ಮತ್ತಿತರ ಸಮಸ್ಯೆ ಸೃಷ್ಟಿಸುವುದನ್ನು ತಡೆಯಲು ಹಾಗೂ ಸ್ಥಳೀಯ ಮಟ್ಟದಲ್ಲಿ ಪಕ್ಷ ಸಂಘಟನೆ ಉದ್ದೇಶದಿಂದ ಈ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಿವಕುಮಾರ್ ಹೇಳಿದರು.

ಇದೇ ತಿಂಗಳು 7ರಂದು ಕಾರ್ಯಕ್ರಮ ಮಾಡಲು ಮುಖ್ಯಮಂತ್ರಿ, ಪೊಲೀಸ್ ಆಯುಕ್ತರಿಗೆ ಅನುಮತಿ ಕೇಳಿ ಮನವಿ ಮಾಡಿದ್ದೆವು. ಆದರೆ ಈಗ ಹೊಸ ಮಾರ್ಗಸೂಚಿ ಹೊರಬಿದ್ದಿದೆ. ಇದರ ಹಿಂದೆ ರಾಜಕೀಯ ಹುನ್ನಾರವಿದೆ. ಈ ಕಾರ್ಯಕ್ರಮಕ್ಕೆ ನಾವು "ಪ್ರತಿಜ್ಞಾ" ಎಂದು ಹೆಸರಿಟ್ಟಿದ್ದೇವೆ. ಸರಕಾರ ಅನುಮತಿ ನೀಡಿದ ಕೆಲವೆ ಗಂಟೆಗಳಲ್ಲಿ ನಾನು ನಿಮಗೆ ಹೊಸ ದಿನಾಂಕ ತಿಳಿಸುತ್ತೇನೆ. ಹೀಗಾಗಿ ನಾನು ದಿನಾಂಕದ ವಿಚಾರದಲ್ಲಿ ಈವರೆಗೂ ಎಲ್ಲಿಯೂ ಘೋಷಣೆ ಮಾಡಿರಲಿಲ್ಲ ಎಂದು ಅವರು ತಿಳಿಸಿದರು.

ಕೇಂದ್ರ ಹಾಗೂ ರಾಜ್ಯ ಸರಕಾರಗಳ ನೂತನ ಮಾರ್ಗಸೂಚಿಯಲ್ಲಿ 8ನೇ ತಾರೀಕಿನವರೆಗೂ ರಾಜಕೀಯ ಕಾರ್ಯಕ್ರಮಗಳ ಮೇಲೆ ನಿಷೇಧ ಹೇರಲಾಗಿದ್ದು, ಆ ಮೂಲಕ 7ರಂದು ಕಾರ್ಯಕ್ರಮ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದೆ. ಕೇವಲ 150 ಜನ ಸೇರಲು ಅವರು ಅವಕಾಶ ನೀಡುತ್ತಿಲ್ಲ ಎಂದು ಶಿವಕುಮಾರ್ ಹೇಳಿದರು.

ನಮ್ಮ ಕಾರ್ಯಕರ್ತರು ಈಗಾಗಲೆ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಕಾರ್ಯಕ್ರಮ ದಿನಾಂಕ ಬದಲಾಗಬಹುದು ಆದರೆ ಕಾರ್ಯಕ್ರಮ ರದ್ದಾಗುವುದಿಲ್ಲ. ನೀವು ನಿಮ್ಮ ಸಿದ್ಧತೆ ಮುಂದುವರಿಸಿಕೊಳ್ಳಿ. ಸರಕಾರದ ಅನುಮತಿ ಇಲ್ಲದೆ ಕಾರ್ಯಕ್ರಮ ಮಾಡಿದರೆ ಶಾಸನ ರೂಪಿಸುವ ನಾವೇ ಕಾನೂನು ಮುರಿದಂತಾಗುತ್ತದೆ. ಜತೆಗೆ ನಿಮಗೆ ಸ್ಥಳೀಯವಾಗಿ ಅಧಿಕಾರಿಗಳು ತೊಂದರೆ ನೀಡಲಿದ್ದಾರೆ. ಹೀಗಾಗಿ ಸರಕಾರ ಅನುಮತಿ ನೀಡಿದ ನಂತರವೆ ಈ ಕಾರ್ಯಕ್ರಮ ನಡೆಸಲಾಗುವುದು. ಹೀಗಾಗಿ 7ರಂದು ಈ ಕಾರ್ಯಕ್ರಮ ಇರುವುದಿಲ್ಲ. ಸರಕಾರದ ಅನುಮತಿಗಾಗಿ ಕಾಯೋಣ ಎಂದು ಅವರು ಮನವಿ ಮಾಡಿದರು.

ಮನೆಯಲ್ಲೆ ಕೂತು ಜನರು, ಕಾಂಗ್ರೆಸ್ ಅಭಿಮಾನಿಗಳು, ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಮಿಸ್ ಕಾಲ್ (7676366666) ನೀಡುವ ಅವಕಾಶ ಕಲ್ಪಸಿದ್ದು, ಈ ಸಂಖ್ಯೆಗೆ ಮಿಸ್ ಕಾಲ್ ಕೊಟ್ಟು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಎಂದು ಅವರು ಮಾಹಿತಿ ನೀಡಿದರು.

ಪರಿಶೀಲನೆ ಮಾಡುವುದರಲ್ಲಿ ತಪ್ಪೇನಿದೆ: ಸಾರ್ವಜನಿಕ ಹಕ್ಕುಪತ್ರ ಸಮಿತಿ ಕಾರ್ಯಕ್ಕೆ ಅಡ್ಡಿಪಡಿಸಿದ ವಿಧಾನಸಭೆ ಸ್ಪೀಕರ್ ಅವರ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡನೆ ಬಗ್ಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಯಾವುದೆ ಅವ್ಯವಹಾರ ಆರೋಪ ಬಂದರೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಆ ಬಗ್ಗೆ ಪರಿಶೀಲನೆ ನಡೆಸುವ ಹಕ್ಕಿದೆ. ಈ ವಿಚಾರದಲ್ಲಿ ಸ್ಪೀಕರ್ ಹಸ್ತಕ್ಷೇಪ ಮಾಡಿದ್ದೇಕೆ ಎಂಬುದೆ ಗೊತ್ತಾಗುತ್ತಿಲ್ಲ. ಸರಕಾರ ಪಾರದರ್ಶಕವಾಗಿರಬೇಕು. ಈಗ ಆರ್‍ಟಿಐ ಮೂಲಕ ಮಾಹಿತಿ ಸಿಗುವಾಗ ಸ್ಪೀಕರ್ ಪರಿಶೀಲನೆಗೆ ಅಡ್ಡಿ ಪಡಿಸಿದ್ದೇಕೆ? ಪರಿಶೀಲನೆ ಮಾಡುವುದರಲ್ಲಿ ತಪ್ಪೇನಿದೆ? ಈ ಸರಕಾರದಲ್ಲೆ ಸಚಿವರು ಅಧಿಕಾರಿಗಳ ವಿರುದ್ಧ ದೂರಿರುವುದನ್ನು ನಾವು ನೋಡಿದ್ದೇವೆ. ಮುಖ್ಯಮಂತ್ರಿಗಳಿಗೂ ಅನೇಕ ದೂರುಗಳು ಹೋಗಿವೆ. ಅವರೆ ಅಧಿಕಾರಿಗಳ ಬದಲಾವಣೆ ಮಾಡಿರುವುದನ್ನು ನೋಡಿದ್ದೇವೆ ಎಂದು ಶಿವಕುಮಾರ್ ಹೇಳಿದರು.

ಈ ಸಮಿತಿ ಸರಕಾರಕ್ಕೆ ಸಹಾಯ ಮಾಡಲು ಇದೆಯೇ ಹೊರತು ತೊಂದರೆ ನೀಡಲು ಅಲ್ಲ. ಸರಕಾರದ ಅನುಮತಿ ಮೇಲೆ ಸ್ಪೀಕರ್ ರಚಿಸಿರುವ ಸಮಿತಿ ಇದು. ಈ ವಿಚಾರದಲ್ಲಿ ಸ್ಪೀಕರ್ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡಿಸುವ ವಿಚಾರವಾಗಿ ಶಾಸಕಾಂಗ ಪಕ್ಷದಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News