ಬೆಂಗಳೂರು: ಜನಿಸಿದ ಒಂದು ಗಂಟೆಯೊಳಗೆ ಹೆರಿಗೆ ವಾರ್ಡಿನಿಂದಲೇ ಮಗು ನಾಪತ್ತೆ

Update: 2020-06-01 17:06 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ.1: ಜನ್ಮ ಪಡೆದ ಒಂದು ಗಂಟೆಯೊಳಗೆ ನವಜಾತ ಶಿಶುವನ್ನು ದುಷ್ಕರ್ಮಿಗಳು ಕಳ್ಳತನ ಮಾಡಿರುವ ಪ್ರಕರಣವೊಂದು ರಾಜಧಾನಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ನಗರದ ಸಿರಸಿ ರಸ್ತೆ ಸರಕಾರಿ ಹೆರಿಗೆ ಆಸ್ಪತ್ರೆಯಲ್ಲಿ ನವಜಾತ ಶಿಶು ಕಳವು ಪ್ರಕರಣ ಹೊರಬಂದಿದ್ದು, 34 ವರ್ಷದ ಹಸ್ನಾ ಬಾನು ಎಂಬಾಕೆಯ ನವಜಾತ ಶಿಶುವನ್ನು ದುಷ್ಕರ್ಮಿಗಳು ಕೆಲವೇ ಗಂಟೆಗಳಲ್ಲಿ ಆಸ್ಪತ್ರೆಯ ಹೆರಿಗೆ ವಾರ್ಡಿನಿಂದಲೇ ಕಳವು ಮಾಡಿದ್ದಾರೆ. ಈ ಸಂಬಂಧ ಇಲ್ಲಿನ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಏನಿದು ಪ್ರಕರಣ?: ಜೆಜೆ ನಗರದ ನಿವಾಸಿ ಆಗಿರುವ ಹಸ್ನಾ ಬಾನು ಅವರು ತುಂಬು ಗರ್ಭಿಣಿ ಆಗಿದ್ದು, ಸೋಮವಾರ ಮುಂಜಾನೆ ನೋವು ಕಾಣಿಸಿಕೊಂಡ ಹಿನ್ನೆಲೆ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಆದರೆ, ಅಲ್ಲಿನ ವೈದ್ಯರು, ಸಿರಸಿ ರಸ್ತೆಯ ಸರಕಾರಿ ಹೆರಿಗೆ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದ್ದಾರೆ. ಅದರಂತೆ, ಬೆಳಗ್ಗೆ 6:20ಕ್ಕೆ ದಾಖಲಾಗಿದ್ದು, 7:51 ಗಂಟೆಗೆ ಹೆರಿಗೆ ಆಗಿದೆ. ಬಳಿಕ, ಯಾರು ಇಲ್ಲದ ಕೊಠಡಿಯಲ್ಲಿ ತಾಯಿ, ನವಜಾತ ಶಿಶುವನ್ನು ಮಲಗಿಸಿ ಇಲ್ಲಿನ ವೈದ್ಯರು, ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ ಎನ್ನಲಾಗಿದೆ.

ಕೆಲ ಸಮಯದ ಬಳಿಕ ಹಸ್ನಾ ಬಾನು ಅವರು ನೋಡಿದಾಗ ಮಗು ನಾಪತ್ತೆಯಾಗಿದೆ. ಈ ಬಗ್ಗೆ ಸ್ಥಳೀಯ ಸಿಬ್ಬಂದಿ, ವೈದ್ಯರನ್ನು ಪ್ರಶ್ನಿಸಿದರೆ, ಮಗು ಕಳ್ಳತನ ಆಗಿದೆ ಎಂದು ಉತ್ತರಿಸಿದ್ದಾರೆ. ಇನ್ನು, ಕೆಲವರು, ನೀವೇ ಮಗುವನ್ನು ಮಾರಾಟ ಮಾಡಿರುವುದಾಗಿ ತಾಯಿಯ ಮೇಲೆಯೇ ಆರೋಪ ಹೊರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಆಟೊ ಚಾಲಕರ ಸೋಗಿನಲ್ಲಿ ಕಳವು: ಆಟೊ ಚಾಲಕರ ಸೋಗಿನಲ್ಲಿಯೇ ಆಸ್ಪತ್ರೆ ಆವರಣದೊಳಗೆ ಪ್ರವೇಶಿಸಿ ಮಗುವನ್ನು ಕಳ್ಳತನ ಮಾಡಿರಬಹುದು. ಈ ಬಗ್ಗೆ ಆರಂಭದಲ್ಲಿ ಶಂಕೆ ವ್ಯಕ್ತಪಡಿಸಿ ದೂರು ನೀಡಿದರೂ, ಎಲ್ಲರೂ ನಿರ್ಲಕ್ಷ್ಯ ತೋರಿದರು. ಇನ್ನು, ಈ ಕೃತ್ಯವೆಸಗಲು ಇಲ್ಲಿನ ಸ್ಥಳೀಯ ಆಸ್ಪತ್ರೆಯ ಸಿಬ್ಬಂದಿಯ ಕೈವಾಡ ಇರಬಹುದು ಎಂದು ಹಸ್ನಾ ಬಾನು ಆರೋಪಿಸಿದ್ದಾರೆ.

ಮಾತಿಗಷ್ಟೇ ಸೀಮಿತವಾಯಿತು ಮಾರ್ಗಸೂಚಿ ಯೋಜನೆ

ರಾಜ್ಯದ ಆಸ್ಪತ್ರೆಗಳಲ್ಲಿ ನವಜಾತ ಶಿಶುಗಳ ಕಳ್ಳತನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಆಸ್ಪತ್ರೆಗಳಲ್ಲಿನ ಫಲಕಗಳನ್ನು ಹಾಕಬೇಕು. ಮಗು ಜನಿಸಿದ ನಂತರ ಮಾಹಿತಿಯನ್ನು ಸಂಬಂಧಿಕರಿಗೆ ಕಂಪ್ಯೂಟರ್ ಸಹಾಯದಿಂದ ತೋರಿಸಬೇಕು. ನವಜಾತ ಶಿಶುಗಳ ಗುರುತಿಗಾಗಿ ಕೇಸ್‍ಶೀಟ್‍ನಲ್ಲಿ ಮಗುವಿನ ಪಾದದ ಗುರುತು ತೆಗೆದುಕೊಳ್ಳಬೇಕು. ಕುಟುಂಬದ ಸದಸ್ಯರಿಗೆ ಮಾತ್ರ ಮಗು ಹಸ್ತಾಂತರಿಸಬೇಕು. ನವಜಾತ ಶಿಶುವಿನ ಕೈಗೆ ತಾಯಿ ಹೆಸರಿನ ಪಟ್ಟಿ ಕಟ್ಟಬೇಕು. ಮಗು ಪಡೆದವರ ಸಹಿಯನ್ನು ಕೇಸ್‍ಶೀಟ್‍ನಲ್ಲಿ ತೆಗೆದುಕೊಳ್ಳಬೇಕು. ಹೀಗೆ, ಹತ್ತಾರು ಮಾರ್ಗಸೂಚಿಗಳನ್ನು ರಾಜ್ಯ ಸರಕಾರ, ಆರೋಗ್ಯ ಇಲಾಖೆ ಜಾರಿಗೊಳಿಸಿದ್ದರೂ, ಅನೇಕ ಹೆರಿಗೆ ಆಸ್ಪತ್ರೆಗಳಲ್ಲಿ ಕಾರ್ಯರೂಪಕ್ಕೆ ಬಂದಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News