ಹೊಸ ಆವಿಷ್ಕಾರಗಳಿಗೆ ಆದ್ಯತೆ ನೀಡಲು ವೈದ್ಯರಿಗೆ ಪ್ರಧಾನಿ ಮೋದಿ ಕರೆ

Update: 2020-06-01 17:15 GMT

ಬೆಂಗಳೂರು, ಜೂ. 1: ಮಾರಕ ಕೊರೋನ ವೈರಸ್ ಸೋಂಕು ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಕೊರೋನ ವಾರಿಯರ್ಸ್‍ಗಳ ರಕ್ಷಣೆಗೆ ಸರಕಾರ ಬದ್ಧವಾಗಿದ್ದು, ಅವರ ಮೇಲಿನ ಹಲ್ಲೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಹೇಳಿದ್ದಾರೆ.

ಸೋಮವಾರ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾಲಯ ರಜತ ಮಹೋತ್ಸವವನ್ನು ಹೊಸದಿಲ್ಲಿಯಿಂದ ವಿಡಿಯೋ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕೊರೋನ ವಾರಿಯರ್ಸ್ ಗಳಿಗೆ 50 ಲಕ್ಷ ರೂ.ಮೊತ್ತದ ವಿಮೆ ಒದಗಿಸಲಾಗಿದೆ. ಕೋರೋನ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ವೈದ್ಯಕೀಯ ಉಪಕರಣಗಳ ಉತ್ಪಾದನೆಯಲ್ಲಿ ದೇಶ ಸ್ವಾವಲಂಬನೆ ಸಾಧಿಸುತ್ತಿದ್ದು, ಪಿಪಿಇ ಕಿಟ್ ಮತ್ತು ಮಾಸ್ಕ್ ಉತ್ಪಾದಿಸಲಾಗುತ್ತಿದೆ ಎಂದರು.

ಹೊಸ ಆವಿಷ್ಕಾರಕ್ಕೆ ಕರೆ: ಆರೋಗ್ಯ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳಿಗೆ ಆದ್ಯತೆ ನೀಡಬೇಕು ಎಂದು ಸಲಹೆ ಮಾಡಿದ ಮೋದಿ, ವೈದ್ಯಕೀಯ ಮತ್ತು ವಿಜ್ಞಾನಿಗಳ ತಂಡಕ್ಕೆ ಅಭಿನಂದನೆಗಳು ಎಂದರು. ಕೊರೋನ ವೈರಸ್ ಸೋಂಕು ಇಲ್ಲದೆ ಇದ್ದಿದ್ದರೆ ರಜತ ಮಹೋತ್ಸವ ಸಮಾರಂಭದಲ್ಲಿ ತಾನು ಖುದ್ದಾಗಿ ಪಾಲ್ಗೊಳ್ಳುತ್ತಿದ್ದೆ ಎಂದು ಪ್ರಧಾನಿ ಮೋದಿ ಇದೇ ಸಂದರ್ಭದಲ್ಲಿ ಹೇಳಿದರು.

ದೇಶದಲ್ಲಿ 30 ಸಾವಿರ ವೈದ್ಯಕೀಯ ಸೀಟುಗಳನ್ನು ಹೆಚ್ಚಿಸಲಾಗಿದೆ. ಜೊತೆಗೆ 15 ಸಾವಿರ ಸ್ನಾತಕೋತ್ತರ ಸೀಟುಗಳನ್ನು ಹೆಚ್ಚಿಸಿದ್ದು, 2025ರ ವೇಳೆಗೆ ಕ್ಷಯ ರೋಗ ನಿರ್ಮೂಲನೆಗೆ ಸಂಕಲ್ಪ ಮಾಡಲಾಗಿದೆ. ಕೊರೋನ ಸೋಂಕಿನ ವಿರುದ್ಧ ಹೋರಾಟದಲ್ಲಿ ಕರ್ನಾಟಕ ದಿಟ್ಟ ಕ್ರಮಗಳನ್ನು ಕೈಗೊಂಡಿದೆ ಎಂದು ಪ್ರಧಾನಿ ಮೋದಿ ಇದೇ ವೇಳೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಪಾಲ್ಗೊಂಡಿದ್ದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಮಾತನಾಡಿ, ರಾಜ್ಯದಲ್ಲಿ ಶೇ.80ರಷ್ಟು ಮಂದಿಗೆ ಕೊರೋನ ಸೋಂಕಿನ ಯಾವುದೇ ಲಕ್ಷಣಗಳಿಲ್ಲದೆ ಸೋಂಕು ಕಂಡುಬರುತ್ತಿದೆ. ಈ ಅಂಶದ ಬಗ್ಗೆ ಜಾಗತಿಕ ಮಟ್ಟದಲ್ಲಿ ಉಪಯೋಗ ಆಗುವಂತಹ ಔಷಧಗಳ ಆವಿಷ್ಕಾರ ನಮ್ಮ ಪ್ರಮುಖ ಗುರಿ. ಟೆಲಿ ಮೆಡಿಷನ್ ಅನ್ನು ವ್ಯಾಪಕವಾಗಿ ಬಳಕೆ ಮಾಡುವ ನಿಟ್ಟಿನಲ್ಲಿ ಮಾರ್ಗೋಪಾಯಗಳನ್ನು ಕಂಡುಹಿಡಿಯಬೇಕಿದೆ ಎಂದರು.

ಕೊರೋನ ಸೋಂಕಿನ ಬಗ್ಗೆ ಜನಸಾಮಾನ್ಯರಲ್ಲಿನ ಭಯ ನಿವಾರಿಸಬೇಕಿದೆ. ಶಾಶ್ವತವಾಗಿ ಲಾಕ್‍ಡೌನ್ ಹೇರಿಕೆ ಮೂಲಕ ಸೋಂಕು ನಿಯಂತ್ರಣ ಸಾಧ್ಯವಿಲ್ಲ. ಹೀಗಾಗಿ ಸಾರ್ವಜನಿಕರು ಮತ್ತು ಸರಕಾರ ಒಟ್ಟಿಗೆ ಕೊರೋನ ಸೋಂಕಿನ ವಿರುದ್ಧದ ಹೋರಾಟ ಮುಂದುವರಿಸಬೇಕು ಎಂದ ಅವರು, ಸೋಂಕಿಗೆ ಔಷಧ ಕಂಡುಹಿಡಿಯಲು ಹೊಸ ಆವಿಷ್ಕಾರಗಳಾಗಬೇಕು ಎಂದು ಹೇಳಿದರು.

ರಾಜ್ಯಪಾಲ ವಜುಭಾಯಿ ವಾಲಾ, ಮುಖ್ಯಮಂತ್ರಿ ಯಡಿಯೂರಪ್ಪ, ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ, ಸಂಸದ ತೇಜಸ್ವಿ ಸೂರ್ಯ, ಜಯನಗರ ಕ್ಷೇತ್ರದ ಶಾಸಕಿ ಸೌಮ್ಯರೆಡ್ಡಿ ಸೇರಿದಂತೆ ಅನೇಕ ಗಣ್ಯರು ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಪ್ರಮುಖರು ಸಮಾರಂಭದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News