ವಲಯವಾರು ವಿಪತ್ತು ನಿರ್ವಹಣಾ ತಂಡ ರಚನೆ: ಸಚಿವ ಆರ್. ಅಶೋಕ್

Update: 2020-06-01 17:24 GMT

ಬೆಂಗಳೂರು, ಜೂ.1: ನಗರದಲ್ಲಿ ಮಳೆ ಅನಾಹುತ ತಪ್ಪಿಸಲು ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಬಿಬಿಎಂಪಿ, ಅರಣ್ಯ ಇಲಾಖೆ, ಬೆಸ್ಕಾಂ, ಜಲಮಂಡಳಿ, ಸಂಚಾರಿ ಪೊಲೀಸ್ ಇಲಾಖೆ ಸೇರಿದಂತೆ ವಲಯವಾರು ವಿಪತ್ತು ನಿರ್ವಹಣಾ ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಮೇಯರ್ ಗೌತಮ್ ಕುಮಾರ್ ಅಧ್ಯಕ್ಷತೆ ಹಾಗೂ ಕಂದಾಯ ಸಚಿವ ಅರ್.ಅಶೋಕ್ ನೇತೃತ್ವದಲ್ಲಿ ಸೋಮವಾರ ಬಿಬಿಎಂಪಿ, ಜಲಮಂಡಳಿ, ಅಗ್ನಿಶಾಮಕ, ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ, ಬೆಸ್ಕಾಂ, ಸಂಚಾರಿ ವಿಭಾಗ ಹಾಗೂ ಸಂಬಂಧಪಟ್ಟ ಇತರೆ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಅವರು ಮಾತನಾಡಿದರು.

ನಗರದಲ್ಲಿ ಮಳೆ ಅನಾಹುತ ತಪ್ಪಿಸುವ ನಿಟ್ಟಿನಲ್ಲಿ ಕಂದಾಯ ವಿಭಾಗದಲ್ಲಿರುವ ಕರ್ನಾಟಕ ವಿಪತ್ತು ನಿರ್ವಹಣಾ ತಂಡವನ್ನು ಬಳಸಿಕೊಳ್ಳಲಾಗುವುದು. ಎಲ್ಲೆಲ್ಲಿ ಪ್ರವಾಹ ಸೃಷ್ಟಿಯಾಗುವ ಸಾಧ್ಯತೆ ಇದೆ, ಗಾಳಿಯ ವೇಗ ಯಾವ ಪ್ರಮಾಣದಲ್ಲಿ ಬೀಸಲಿದೆ, ಎಷ್ಟು ಪ್ರಮಾಣದಲ್ಲಿ ಮಳೆ ಬೀಳಲಿದೆ, ಯಾವ ಭಾಗದಲ್ಲಿ ಎಚ್ಚರಿಕೆ ವಹಿಸಬೇಕು ಹಾಗೂ ಪ್ರಮುಖವಾಗಿ ಎಲ್ಲೆಲ್ಲಿ ಎಷ್ಟು ಮಳೆ ಬೀಳಲಿದೆ ಎನ್ನುವ ಮಾಹಿತಿಯನ್ನು ಶೀಘ್ರ ನೀಡಲಾಗುವುದು ಎಂದು ಹೇಳಿದರು.

ಪ್ರತಿದಿನ ಹವಾಮಾನ ವರದಿ ಬಂದ ಕೂಡಲೇ ನಗರದಲ್ಲಿ ಎಲ್ಲೆಲ್ಲಿ ಮಳೆಯಾಗಲಿದೆ, ಎಲ್ಲಿ ಎಚ್ಚರಿಕೆ ವಹಿಸಬೇಕು ಎನ್ನುವ ನಿಟ್ಟಿನಲ್ಲಿ ಕಂದಾಯ ಇಲಾಖೆಯಿಂದ ನೇರ ಸಂದೇಶ ಕಳುಹಿಸಲಾಗುವುದು. ಬೆಂಗಳೂರಿನಲ್ಲಿ ಈಗಾಗಲೇ 210 ಪ್ರವಾಹ ಪೀಡಿತ ಪ್ರದೇಶಗಳನ್ನು ಗುರುತಿಸಲಾಗಿದೆ. ಇನ್ನು ವಿಪತ್ತು ನಿರ್ವಹಣಾ ತಂಡದಿಂದ 21 ರಾಜಕಾಲುವೆಗಳಲ್ಲಿ ಸೆನ್ಸಾರ್ ಅಳವಡಿಕೆ ಮಾಡಲಾಗಿದ್ದು, ಇಲ್ಲಿ ಶೇ.75 ರಷ್ಟು ನೀರು ತುಂಬಿದರೆ ಎಚ್ಚರಿಕೆಯ ಸಂದೇಶ ರವಾನೆಯಾಗುತ್ತದೆ. ಇದರ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು. ಅಲ್ಲದೆ ಪ್ರವಾಹ ಉಂಟಾಗುವ ಪ್ರಮುಖ ಪ್ರದೇಶಗಳಲ್ಲಿ ಸೆನ್ಸಾರ್ ಗಳನ್ನು ಅಳವಡಿಕೆ ಮಾಡುವ ಚಿಂತನೆ ಇದೆ ಎಂದು ತಿಳಿಸಿದರು.

ನಗರದಲ್ಲಿ ಮರಗಳು ಬಿದ್ದ ವೇಳೆ ಪೊಲೀಸ್ ಸಿಬ್ಬಂದಿ ಕೂಡಲೇ ಬ್ಯಾರಿಕೇಡ್ ವ್ಯವಸ್ಥೆ ಮಾಡಬೇಕು. ವಿದ್ಯುತ್ ತಂತಿಗಳ ಅನಾಹುತ ಹಾಗೂ ಅವಘಡ ತಪ್ಪಿಸುವ ಉದ್ದೇಶದಿಂದ ಈ ಕ್ರಮಕ್ಕೆ ಸೂಚಿಸಲಾಗಿದೆ. ಸಿವಿಲ್ ಡಿಫೆನ್ಸ್ ನಿಂದ 500 ಜನ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಇದರ ಸಂಪೂರ್ಣ ವೆಚ್ಚವನ್ನು ಬಿಬಿಎಂಪಿ ವಹಿಸಲಿದೆ. ಅಲ್ಲದೆ, ನಗರದಲ್ಲಿ ತೆರೆದಿರುವ ಎಲ್ಲ ಒಳಚರಂಡಿಗಳನ್ನು ಕೂಡಲೇ ಮುಚ್ಚುವಂತೆ ಜಲಮಂಡಳಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ರಾತ್ರಿ ವೇಳೆ ಮರ ಕಡಿಯಲು ಪ್ಲಡ್ ಲೈಟ್‍ಗಳ ವ್ಯವಸ್ಥೆ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಮಳೆ ಅನಾಹುತ ತಪ್ಪಿಸಲು ವಿಪತ್ತು ನಿರ್ವಹಣಾ ತಂಡದ ಅಡಿಯಲ್ಲಿ ಹಿರಿಯ ಅಧಿಕಾರಿಗಳನ್ನು ಒಳಗೊಂಡ ತಂಡ ರಚನೆ ಮಾಡಲು ಸೂಚಿಸಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಅನಾಹುತ ತಪ್ಪಿಸಲು ಈ ತಂಡ ಕ್ರಮ ವಹಿಸಲಿದೆ ಇದೇ ಮಾದರಿಯಲ್ಲಿ ನಗರದಲ್ಲೂ ಹಿರಿಯ ಅಧಿಕಾರಿಗಳ ತಂಡ ರಚನೆ ಮಾಡಲು ಸೂಚಿಸಲಾಗಿದೆ ಎಂದರು.

ರಾಜಕಾಲುವೆಗಳಲ್ಲಿ ಹೂಳು ತೆರವು: ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆ ಮುಂಜಾಗ್ರತಾ ಕ್ರಮವಾಗಿ ರಾಜಕಾಲುವೆಗಳಲ್ಲಿ ತುಂಬಿರುವ ಹೂಳನ್ನು ನಿರಂತರವಾಗಿ ತೆರವುಗೊಳಿಸಲಾಗುತ್ತಿದೆ. ಅದರಂತೆ ಬೊಮ್ಮನಹಳ್ಳಿ ವ್ಯಾಪ್ತಿಯ ಅಗರ ಕೆರೆ ಹಾಗೂ ಜಕ್ಕಸಂದ್ರ ಬಳಿ ರಾಜಕಾಲುವೆಯಲ್ಲಿ ಹೂಳು ತೆರವುಗೊಳಿಸಲಾಗಿದೆ.

ಸಭೆಯಲ್ಲಿ ಉಪಮೇಯರ್ ರಾಮಮೋಹನ ರಾಜು, ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್, ವಿಶೇಷ ಆಯುಕ್ತರಾದ  ಅನ್ಬುಕುಮಾರ್, ಡಿ.ರಂದೀಪ್, ಕೆ.ಎಸ್.ಎನ್.ಡಿ.ಎಂ.ಸಿ ಅಧ್ಯಕ್ಷ ಡಾ. ಶ್ರೀನಿವಾಸ್ ರೆಡ್ಡಿ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಗೌಡ, ಸಂಚಾರಿ ವಿಭಾಗದ ಜಂಟಿ ಆಯುಕ್ತ ರವಿಕಾಂತೆ ಗೌಡ ಉಪಸ್ಥಿತರಿದ್ದರು.

ವಿಪ್ಪತ್ತು ನಿರ್ವಹಣೆ ತಂಡಕ್ಕೆ 310 ಕೋಟಿ ರೂ. ಮೀಸಲು...

ರಾಜ್ಯದಲ್ಲಿ ಮಳೆಯಿಂದ ಸೃಷ್ಟಿಯಾಗಬಹುದಾದ ಪ್ರವಾಹ ತಪ್ಪಿಸುವ ನಿಟ್ಟಿನಲ್ಲಿ ವಿಪತ್ತು ನಿರ್ವಹಣಾ ತಂಡಕ್ಕೆ 310 ಕೋಟಿ ರೂ. ಮೀಸಲಿಡಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ಸೃಷ್ಟಿಯಾದರೆ ಕಲ್ಯಾಣ ಮಂಟಪಗಳಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲಿ ಸೂಕ್ತ ಮೂಲಸೌಕರ್ಯ ಇರುವುದಿಲ್ಲ ಎಂಬ ಕಾರಣಕ್ಕಾಗಿ ಪ್ರವಾಹ ಭೀತಿ ಇರುವ ಜಿಲ್ಲೆಗಳಲ್ಲಿ ಶಾಶ್ವತ ಕೇಂದ್ರ ತೆರೆಯಲು ಕ್ರಮವಹಿಸಲಾಗುತ್ತಿದೆ. ಇದರಲ್ಲಿ ಆಸ್ಪತ್ರೆ, ಅಡುಗೆ ಕೊಠಡಿ, ಶೌಚಾಲಯ, ಹಾಸಿಗೆ ವ್ಯವಸ್ಥೆ ಇರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News