ಬೆಂಗಳೂರಿನಲ್ಲಿ ಇಂದು 28 ಮಂದಿಗೆ ಕೊರೋನ ಪಾಸಿಟಿವ್: 90 ವರ್ಷದ ವೃದ್ಧ ಸಾವು

Update: 2020-06-01 17:42 GMT

ಬೆಂಗಳೂರು, ಜೂ.1: ನಗರದಲ್ಲಿ ಸೋಮವಾರ ಹೊಸದಾಗಿ 28 ಕೊರೋನ ಪ್ರಕರಣ ದೃಢಪಟ್ಟಿದ್ದು, ಬಹುದಿನದಿಂದ ಸೋಂಕಿಗೆ ಬಳಲುತ್ತಿದ್ದ 90 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ.

ಬಿಬಿಎಂಪಿ ಅಧಿಕಾರಿ, ಪೊಲೀಸ್ ಪೇದೆ ಹಾಗೂ ಮಹಾರಾಷ್ಟ್ರದಿಂದ ಬಂದಿರುವ 21 ಮಂದಿಗೆ ಕೊರೋನ ಸೋಂಕು ಕಾಣಿಸಿಕೊಂಡಿದೆ. ರಾಜಸ್ಥಾನದಿಂದ ಬಂದಿರುವ 37 ವರ್ಷದ ಮಹಿಳೆಗೆ ಸೋಂಕು ಪತ್ತೆಯಾಗಿದೆ. ಇವರನ್ನು ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು ರೋಗಿ-2519 ಮಹಿಳೆಯಿಂದ ದಾಸರಹಳ್ಳಿಯ 42 ವರ್ಷದ ಡಾಕ್ಟರ್ ಹಾಗೂ 35 ವರ್ಷದ ಡಾಕ್ಟರ್ ಮತ್ತು ಮೆಡಿಕಲ್ ಕೆಲಸ ಮಾಡುವ ಮಹಿಳೆಗೆ ಕೊರೋನ ಸೋಂಕು ಪತ್ತೆಯಾಗಿದೆ. ಇವರ ಸಂಪರ್ಕದಲ್ಲಿದ್ದ ಏಳು ಜನರನ್ನು ಕ್ವಾರಂಟೈನ್ ಮಾಡಲಾಗಿದೆ.

ಸುಬ್ರಹ್ಮಣ್ಯ ನಗರದ 25 ವರ್ಷದ ಯುವತಿಗೆ ಕೊರೋನ ಇರುವುದು ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ರೋಗ ನಿರೋಧಕ ಶಕ್ತಿ ಕಡಿಮೆ ಇದ್ದ ಹಿನ್ನೆಲೆ ಹೊರಗೆ ಓಡಾಡಿದಾಗ ಸೋಂಕು ತಗಲಿದೆ. ಮನೆಯಲ್ಲಿದ್ದ ಅಜ್ಜಿ, ಇಬ್ಬರು ಸಹೋದರರು ಹಾಗೂ ತಾಯಿಯನ್ನು ಕ್ವಾರಂಟೈನ್ ಮಾಡಲಾಗಿದೆ.

ಬೆಂಗಳೂರು ನಿವಾಸಿಯಾಗಿರುವ ರೋಗಿ- 492 ಸೋಂಕಿತ 90 ವರ್ಷದ ವ್ಯಕ್ತಿಯು ಮೃತಪಟ್ಟಿದ್ದು, ರೋಗಿ-419 ಸೋಂಕಿತನ ಸಂಪರ್ಕದಿಂದ ಮೃತ ವ್ಯಕ್ತಿಗೆ ಕೊರೋನ ಒಂದಿತ್ತು. ಇವರಿಗೆ ಎ.24 ರಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಬಹು ಅಂಗಾಂಗ ವೈಪಲ್ಯದಿಂದ ಸೋಮವಾರ ಮರಣ ಹೊಂದಿದ್ದಾರೆ.

ಪಾಲಿಕೆಯ ಸಹಾಯಕ ಆಯುಕ್ತರಿಗೆ ಕೊರೋನ

ಪಾದರಾಯನಪುರ ಪಾಲಿಕೆ ಸದಸ್ಯ ಇಮ್ರಾನ್ ಪಾಷಾ ಅವರ ಸಂಪರ್ಕದಲ್ಲಿದ್ದ ಪಾಲಿಕೆಯ ಶಿಕ್ಷಣ ವಿಭಾಗದ ಸಹಾಯಕ ಆಯುಕ್ತರಿಗೂ ಸೋಂಕು ದೃಢಪಟ್ಟಿದೆ. ಪಾಲಿಕೆ ಸದಸ್ಯನ ಪ್ರಾಥಮಿಕ ಸಂಪರ್ಕದಲ್ಲಿದ್ದ ಇದ್ದ ಹಿನ್ನೆಲೆಯಲ್ಲಿ ಅಧಿಕಾರಿ ಕ್ವಾರಂಟೈನ್ ಮಾಡಲಾಗಿತ್ತು. ಇವರ ಗಂಟಲು ದ್ರವ ಪರೀಕ್ಷೆ ನಡೆಸಿದಾಗ ಕೊರೋನ ಇರುವುದು ದೃಢಪಟ್ಟಿದೆ. ಇವರು ಬಿಬಿಎಂಪಿ ಕೇಂದ್ರ ಕಚೇರಿಯ ವಾರ್ ರೂಂನಲ್ಲಿ ಕೆಲಸ ಮಾಡುತ್ತಿದ್ದರು. ಇವರ ಸಂಪರ್ಕದಲ್ಲಿ ಇದ್ದವರನ್ನು ಪತ್ತೆಹಚ್ಚಲಾಗುತ್ತಿದೆ. ಇನ್ನಿಬ್ಬರು ಅಧಿಕಾರಿಗಳಿಗೂ ಕೊರೋನ ಸೋಂಕಿರುವುದು ದೃಢಪಟ್ಟಿದ್ದು, ಮತ್ತೊಮ್ಮೆ ಪರಿಶೀಲನೆ ಮಾಡಲಾಗುತ್ತಿದೆ. ಮತ್ತಿಬ್ಬರು ಅಧಿಕಾರಿಗಳು ಯಾರು ಎನ್ನುವುದು ಇನ್ನು ಬಹಿರಂಗವಾಗಿಲ್ಲ.

ನಗರದಲ್ಲಿ ಇಲ್ಲಿಯವರಿಗೆ 386 ಪ್ರಕರಣ ಪತ್ತೆಯಾಗಿದ್ದು, 237 ಜನರು ಗುಣಮುಖರಾಗಿದ್ದಾರೆ. 136 ಜನರಿಗೆ ಸಕ್ರಿಯವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 12 ಮಂದಿ ಮರಣ ಹೊಂದಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯಲ್ಲಿ ಒಟ್ಟು 11,487 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ.

ಪೊಲೀಸ್‍ಗೆ ಪೇದೆಗೆ ಕೊರೋನ

ಜೆಜೆಆರ್ ನಗರ ಪೊಲೀಸ್ ಠಾಣೆಯ 43 ವರ್ಷದ ಪೇದೆಗೆ ಕೊರೋನ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಠಾಣೆಯನ್ನು ಸ್ಯಾನಿಟೈಸರ್ ಮಾಡಲಾಗುತ್ತಿದೆ. ಪಾದರಾಯನಪುರದ 11ನೇ ಕ್ರಾಸ್‍ನಲ್ಲಿ ಬೀಟ್ ಕಾರ್ಯ ಮಾಡುತ್ತಿದ್ದ ಪೇದೆ ಠಾಣೆಯಲ್ಲಿಯೂ ಕಾರ್ಯ ನಿರ್ವಹಿಸಿದ್ದು, ನಾಯಂಡಹಳ್ಳಿ ವಾರ್ಡ್‍ನಲ್ಲಿ ಪತ್ನಿ ಮತ್ತು ಮಕ್ಕಳೊಂದಿಗೆ ನೆಲೆಸಿದ್ದರು. ಇದೀಗ ಕೊರೋನ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಅವರ ಪತ್ನಿ ಹಾಗೂ ಮಗುವನ್ನು ಕ್ವಾರಂಟೈನ್ ಮಾಡಲಾಗಿದೆ. ಮಾತ್ರವಲ್ಲದೆ ಹೆಡ್‍ಕಾನ್‍ಸ್ಟೇಬಲ್ ಜೊತೆ ಕಾರ್ಯನಿರ್ವಹಿಸಿದ್ದ ಪೊಲೀಸರನ್ನು ಕ್ವಾರಂಟೈನ್ ಮಾಡಲಾಗುತ್ತಿದ್ದು, ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಹಚ್ಚಲಾಗುತ್ತಿದೆ.

ಗುರುದತ್ತ ಬಡಾವಣೆ ಸ್ವಯಂ ಘೋಷಿತ ಸೀಲ್ ಡೌನ್

ಕೊರೊನ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಬನಶಂಕರಿ 3ನೇ ಹಂತದಲ್ಲಿರುವ ಗುರುದತ್ತ ಬಡಾವಣೆಯಲ್ಲಿ ಸ್ವಯಂ ಘೋಷಿತ ಸೀಲ್ ಡೌನ್ ಮಾಡಲಾಗಿದೆ. ಬನಶಂಕರಿ 3ನೇ ಹಂತದ ಇಟ್ಟುಮಡುವಿನಲ್ಲಿ ರವಿವಾರ ವ್ಯಕ್ತಿಯೊಬ್ಬರಲ್ಲಿ ಕೊರೋನ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಆತನನ್ನು ವಿಕ್ಟೋರಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗಾಗಿ ಗುರುದತ್ತ ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದಿಂದ ಸ್ವಯಂ ಸೀಲ್ ಡೌನ್ ಮಾಡಲಾಗಿದೆ.

ಬಿಬಿಎಂಪಿ ಕಚೇರಿಗೆ ಸಾರ್ವಜನಿಕರ ಭೇಟಿ ನಿಷೇಧ

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗೆ ಕೊರೋನ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅಧಿಕಾರಿ ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿಯ ಆವರಣ ಹಾಗೂ ಸದರಿ ಕಚೇರಿಯ ನೆಲಮಹಡಿ ಮತ್ತು ಮೊದಲನೆ ಮಹಡಿಯನ್ನು ಸಂಪೂರ್ಣ ಸ್ಯಾನಿಟೇಷನ್ ಔಷಧಿ ಸಿಂಪಡಣೆ ಹಾಗೂ ಸ್ವಚ್ಛತೆ ಮಾಡಲಾಗಿದೆ. ಕಚೇರಿ ಸುತ್ತ ಮುತ್ತ ಸಾರ್ವಜನಿಕ ಭೇಟಿಯನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News