9.74 ಲಕ್ಷ ಮನೆಗಳ ಪೂರ್ಣಕ್ಕೆ 10,194 ಕೋಟಿ ರೂ. ಮಂಜೂರು: ಸಿಎಂ ಯಡಿಯೂರಪ್ಪ

Update: 2020-06-01 17:55 GMT

ಬೆಂಗಳೂರು, ಜೂ. 1: ರಾಜ್ಯದಲ್ಲಿ ಪ್ರಗತಿಯಲ್ಲಿರುವ 9.74 ಲಕ್ಷ ಮನೆಗಳನ್ನು ಪೂರ್ಣಗೊಳಿಸಲು ಒಟ್ಟು 10,194 ಕೋಟಿ ರೂ.ಗಳನ್ನು ಅನುದಾನದ ಮಂಜೂರಾತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ವಸತಿ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಕಲಿ ದಾಖಲೆಗಳನ್ನು ನೀಡಿ ಮನೆ ಪಡೆದುಕೊಂಡಿರುವ ಪ್ರಕರಣಗಳನ್ನು ಪತ್ತೆ ಹಚ್ಚಿ ಸರಕಾರಕ್ಕೆ 8 ಸಾವಿರ ಕೋಟಿ ರೂ.ಹಣವನ್ನು ಉಳಿತಾಯ ಮಾಡಿರುವ ವಸತಿ ಇಲಾಖೆ ಕ್ರಮಕ್ಕೆ ಇದೇ ವೇಳೆ ಮೆಚ್ಚುಗೆ ವ್ಯಕ್ತಪಡಿಸಿದರು.

ಅರ್ಹ ಫಲಾನುಭವಿಗಳಿಗೆ ವಸತಿ ಯೋಜನೆ ಲಾಭ ದೊರಕಿಸಿಕೊಡುವ ನಿಟ್ಟಿನಲ್ಲಿ ಯೋಜನೆಗಳ ಪಾರದರ್ಶಕ ಅನುಷ್ಠಾನಕ್ಕೆ ಆದ್ಯತೆ ನೀಡಬೇಕು. ತಾಂತ್ರಿಕ ತೊಂದರೆಗಳನ್ನು ನಿವಾರಿಸಬೇಕು. ಅನುದಾನ ದುರ್ಬಳಕೆ ತಡೆಗೆ ಅಭಿವೃದ್ಧಿ ಪಡಿಸಲಾಗಿರುವ ವಿಜಿಲ್ ಆ್ಯಪ್ ತಂತ್ರಾಂಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕೊಡಗು ಜಿಲ್ಲೆಯಲ್ಲಿ ಕಳೆದ ವರ್ಷದ ಮಳೆಯಿಂದಾಗಿ ಉಂಟಾದ ನೆರೆ ಪರಿಸ್ಥಿತಿಯಿಂದ ಹಾನಿಗೊಳಗಾದವರಿಗೆ ಪುನರ್ವಸತಿ ಯೋಜನೆಯಡಿ 115 ಮನೆ ಹಂಚಿಕೆ ಮಾಡಲಾಗಿದೆ. ಪೂರ್ಣಗೊಂಡಿರುವ 405 ಮನೆಗಳನ್ನು ಶೀಘ್ರವೇ ಫಲಾನುಭವಿಗಳಿಗೆ ಹಸ್ತಾಂತರ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.

ಸಭೆಯಲ್ಲಿ ಹಾಜರಿದ್ದ ವಸತಿ ಸಚಿವ ವಿ.ಸೋಮಣ್ಣ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ 1.24 ಲಕ್ಷ ನಿವೇಶನಗಳನ್ನು ಬಡವರಿಗೆ ನೀಡಲು ಗುರುತಿಸಲಾಗಿದ್ದು, 100 ಕೋಟಿ ರೂ. ಇಲಾಖೆಯಲ್ಲಿ ಲಭ್ಯವಿದ್ದು, ನಿವೇಶನಗಳನ್ನು ಅಭಿವೃದ್ಧಿಪಡಿಸಿ ಹಂಚಿಕೆ ಮಾಡಲು 1 ಸಾವಿರ ಕೋಟಿ ರೂ.ಗಳ ಅಗತ್ಯವಿದೆ ಎಂದು ಮನವಿ ಮಾಡಿದರು.

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಸರಕಾರಿ ಜಮೀನಿನಲ್ಲಿರುವ ಕೊಳಚೆ ಪ್ರದೇಶದ ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕಿದೆ. ಕೊಳಚೆ ಅಭಿವೃದ್ಧಿ ಮಂಡಳಿಗೆ ಬದಲಾಗಿ ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ವಿಲೀನಗೊಳಿಸಿದರೆ ಕೊಳಗೇರಿಗಳ ಸಮಸ್ಯೆಗಳನ್ನು ವ್ಯವಸ್ಥಿತವಾಗಿ ಬಗೆಹರಿಸಲು ಅನುಕೂಲವಾಗಲಿದೆ ಎಂದು ಸೋಮಣ್ಣ ತಿಳಿಸಿದರು.

ಗೃಹ ಮಂಡಳಿ ವತಿಯಿಂದ ಆನೇಕಲ್ ತಾಲೂಕಿನ ಜಿಗಣಿ ಹೋಬಳಿಯ ಕೋನಸಂದ್ರ, ಬೊಮ್ಮಂಡಹಳ್ಳಿ, ಕಾಡುಜಕ್ಕನಹಳ್ಳಿ ಮತ್ತು ಕಸಬಾ ಹೋಬಳಿಯ ಇಂಗ್ಲವಾಡಿ, ಬಗ್ಗನದೊಡ್ಡಿ ಗ್ರಾಮಗಳಲ್ಲಿ ಪ್ರಧಾನ ಮಂತ್ರಿ ವಸತಿ ಬಡಾವಣೆಯನ್ನು 1,264 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಸೋಮಣ್ಣ ವಿವರಿಸಿದರು.

ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದಡಿ 4 ಸಾವಿರಕ್ಕೂ ಹೆಚ್ಚು ದೂರುಗಳು ದಾಖಲಾಗಿದ್ದು, ಆ ಪೈಕಿ 700ಕ್ಕೂ ಹೆಚ್ಚು ದೂರುಗಳನ್ನು ವಿಲೇವಾರಿ ಮಾಡಲಾಗಿದೆ. ಈ ಸಂಬಂಧದ ದೂರುಗಳ ವಿಲೇವಾರಿಗೆ ಹೆಚ್ಚಿನ ಸಿಬ್ಬಂದಿ ಅಗತ್ಯವಿದ್ದು, ಇಲಾಖೆಗೆ ಹೆಚ್ಚಿನ ಸಿಬ್ಬಂದಿ ಒದಗಿಸಬೇಕು ಎಂದು ಸೋಮಣ್ಣ ಕೋರಿದರು.

ಸಭೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐಎನ್‍ಎಸ್ ಪ್ರಸಾದ್, ವಸತಿ ಇಲಾಖೆ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ, ರಾಜೀವ್ ಗಾಂಧಿ ವಸತಿ ನಿಗಮದ ಹಿರಿಯ ಅಧಿಕಾರಿಗಳು ಸೇರಿದಂತೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News