ಪಿಪಿಇ ಕಿಟ್ ಖರೀದಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ: ಸಚಿವ ಬಿ.ಶ್ರೀರಾಮುಲು

Update: 2020-06-01 18:04 GMT

ಬೆಂಗಳೂರು, ಜೂ.1: ಪಿಪಿಇ ಕಿಟ್ ಖರೀದಿಯಲ್ಲಿ ಯಾವುದೆ ಅಕ್ರಮ ನಡೆದಿಲ್ಲ. ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಕೇಳಿರುವ ದಾಖಲೆಗಳನ್ನು ನಾನೇ ಅವರಿಗೆ ಕಳುಹಿಸಿ ಕೊಡುತ್ತೇನೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದರು.

ಸೋಮವಾರ ನಗರದಲ್ಲಿರುವ 7 ಮಿನಿಸ್ಟರ್ ಕ್ವಾಟ್ರರ್ಸ್‍ನಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪೀಕರ್ ಅವರ ಪರಮಾಧಿಕಾರದ ಬಗ್ಗೆ ನಾನು ಪ್ರಶ್ನೆ ಮಾಡುವುದಿಲ್ಲ. ಪಿಪಿಇ ಕಿಟ್ ಖರೀದಿ ಕುರಿತು ಯಾವುದೇ ದಾಖಲೆ ಬೇಕಾದರೂ ಕೊಡುತ್ತೇವೆ ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪ ನಾಡಿನ ಅಭಿವೃದ್ಧಿಗೆ ಪಣತೊಟ್ಟು ನಿಂತವರು. ಕೊರೋನ ಆರಂಭವಾದಾಗಲೆ ಲಾಕ್‍ಡೌನ್ ಘೋಷಣೆ ಮಾಡಿ ಸಮಸ್ಯೆಗೆ ಸ್ಪಂದಿಸಿದ್ದಾರೆ. ಆಹಾರ ಪೂರೈಕೆಯಲ್ಲಿ ಯಾವುದೇ ಸಮಸ್ಯೆಯಾಗದ ಹಾಗೆ ನೋಡಿಕೊಂಡಿದ್ದಾರೆ. ಕೊರೋನ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರು ಮೃತ ಪಟ್ಟರೆ 30 ಲಕ್ಷ ರೂ.ಪರಿಹಾರ ಘೋಷಣೆ ಮಾಡಿದ್ದಾರೆ ಎಂದು ಅವರು ಹೇಳಿದರು.

ಈ ಸರಕಾರ ರಚನೆಯಾದ ಹೊಸತರಲ್ಲಿ ನೆರೆಹಾವಳಿ ವೇಳೆ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ 24 ಗಂಟೆ ಮುಖ್ಯಮಂತ್ರಿ ಕೆಲಸ ಮಾಡಿದ್ದಾರೆ. ಅವರು ಸಮರ್ಥ ನಾಯಕರು. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಬಸನಗೌಡ ಪಾಟೀಲ್ ಯತ್ನಾಳ್, ಮುರುಗೇಶ್ ನಿರಾಣಿ, ಉಮೇಶ್ ಕತ್ತಿ ನಮ್ಮ ಹಿರಿಯ ನಾಯಕರು. ಅವರೆಲ್ಲ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಎಂದು ಶ್ರೀರಾಮುಲು ಹೇಳಿದರು.

ಯಡಿಯೂರಪ್ಪ ಮುಂದಿನ ಮೂರು ವರ್ಷ ಮುಖ್ಯಮಂತ್ರಿ ಆಗಿ ಇರುತ್ತಾರೆ. ಎಲ್ಲರೂ ಒಗ್ಗಟ್ಟಿನಿಂದ ಇದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ. ಬಿಜೆಪಿ ರಾಷ್ಟ್ರೀಯ ಪಕ್ಷ. ಇಲ್ಲಿ ಯಾರು ಸಚಿವರಾಗಬೇಕು ಅನ್ನೋದನ್ನ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ಅವರು ಹೇಳಿದರು.

ನಾನು ಮೂರನೆ ಬಾರಿ ಮಂತ್ರಿಯಾಗಿದ್ದೇನೆ. ಸ್ವಾರ್ಥದಿಂದ ರಾಜಕೀಯ ಮಾಡಿದ ವ್ಯಕ್ತಿ ಅಲ್ಲ ನಾನು. ಸಮರ್ಥವಾಗಿ ಈ ಹಿಂದೆ ಆರೋಗ್ಯ ಇಲಾಖೆ ನಿರ್ವಹಿಸಿದೆ. ಹಾಗಾಗಿ ಈ ಬಾರಿ ಅದೆ ಖಾತೆಯ ಜವಾಬ್ದಾರಿ ಕೊಟ್ಟಿದ್ದಾರೆ. ನಾನು ಡಿಸಿಎಂ ಸ್ಥಾನ ಕೊಟ್ಟಿಲ್ಲ ಅಂತ ಯಾವತ್ತು ನೋವು ಪಟ್ಟಿಲ್ಲ. ಪಕ್ಷ ನಂಗೆ ರಾಜೀನಾಮೆ ಕೊಡೊದಕ್ಕೆ ತಿಳಿಸಿದರೆ ಖಂಡಿತವಾಗಿಯೂ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಶ್ರೀರಾಮುಲು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News