ಸಾಮಾಜಿಕ ಮಾಧ್ಯಮಗಳಲ್ಲಿ ಗಂಭೀರ್, ಅಫ್ರಿದಿ ಸಂವೇದನಶೀಲರಾಗಿ ವರ್ತಿಸಬೇಕು: ವಕಾರ್

Update: 2020-06-02 04:11 GMT

ಹೊಸದಿಲ್ಲಿ: ಮಾಜಿ ಸಹ ಆಟಗಾರ ಶಾಹಿದ್ ಅಫ್ರಿದಿ ಹಾಗೂ ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಸಾಮಾಜಿಕ ಮಾಧ್ಯಮದಲ್ಲಿ ಸಂವೇದನಶೀಲರಾಗಿ ವರ್ತಿಸಬೇಕು. ಸಾಮಾಜಿಕ ಮಾಧ್ಯಮದಲ್ಲಿ ದೀರ್ಘಕಾಲದ ವಾಗ್ವಾದವನ್ನು ಅಂತ್ಯಗೊಳಿಸಬೇಕು ಎಂದು ಪಾಕಿಸ್ತಾನದ ಮಾಜಿ ಬೌಲಿಂಗ್ ಕೋಚ್ ವಕಾರ್ ಯೂನಿಸ್ ವಿನಂತಿಸಿದ್ದಾರೆ.

ಮಾಜಿ ಕ್ರಿಕೆಟಿಗರಾದ ಗಂಭೀರ್ ಹಾಗೂ ಅಫ್ರಿದಿ ಮಾಜಿ ರಾಜಕೀಯದಿಂದ ಆರಂಭಿಸಿ ತಮ್ಮದೇ ಆದ ಕ್ರಿಕೆಟ್ ವೃತ್ತಿಜೀವನದವರೆಗಿನ ವಿಷಯಗಳ ಕುರಿತು ದೀರ್ಘಕಾಲದಿಂದ ಮಾತಿನ ಯುದ್ಧದಲ್ಲಿ ತೊಡಗಿದ್ದಾರೆ.

ಅಫ್ರಿದಿ ತನ್ನ ಆತ್ಮಚರಿತ್ರೆಯಲ್ಲಿ ಗಂಭೀರ್‌ರನ್ನು ಉಲ್ಲೇಖಿಸಿ, ‘‘ಆತ ಡಾನ್ ಬ್ರಾಡ್ಮನ್ ಹಾಗೂ ಜೇಮ್ಸ್ ಬಾಂಡ್ ಪ್ರತಿಬಿಂಬವೆಂಬಂತೆ ವರ್ತಿಸುತ್ತಿದ್ದಾರೆ. ಅವರಲ್ಲಿ ಉತ್ತಮ ವರ್ತನೆ ಹಾಗೂ ಕ್ರಿಕೆಟ್ ದಾಖಲೆಯೂ ಇಲ್ಲ’’ಎಂದು ಬರೆದಿದ್ದರು.

 ಇದಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿದ ಗಂಭೀರ್ ತಾನೇ ಖುದ್ದಾಗಿ ಅಫ್ರಿದಿಯನ್ನು ಮಾನಸಿಕ ವೈದ್ಯರ ಬಳಿ ಕರೆದೊಯ್ಯುತ್ತೇನೆ ಎಂದು ಹೇಳಿದ್ದರು.

‘‘ಈಗ ಗೌತಮ್ ಗಂಭೀರ್ ಹಾಗೂ ಶಾಹಿದ್ ಅಫ್ರಿದಿ ನಡುವೆ ವಾಗ್ವಾದ ಜೋರಾಗಿ ನಡೆಯುತ್ತಿದೆ. ಅವರಿಬ್ಬರು ಚುರುಕಾಗಿರಬೇಕು, ಸಂವೇದನಶೀಲರಾಗಿರಬೇಕು ಹಾಗೂಶಾಂತರಾಗಿರಬೇಕು ಎಂದು ಭಾವಿ ಸುತ್ತೇನೆ’’ಎಂದು ಚಾಟ್ ಶೋ ‘‘ಕ್ಯೂ 20’’ಕ್ಕೆ ವಕಾರ್ ತಿಳಿಸಿದ್ದಾರೆ.

‘‘ಸಾಮಾಜಿಕ ಮಾಧ್ಯಮದಲ್ಲಿ ನೀವು ವಾಗ್ವಾದ ಮುಂದುವರಿಸಿದರೆ ಜನರು ಅದನ್ನು ಇಷ್ಟಪಡುತ್ತಾರೆ ಹಾಗೂ ಆನಂದಿಸುತ್ತಾರೆ. ನನ್ನ ಪ್ರಕಾರ ಇಬ್ಬರೂ ಸಂವೇದನಶೀಲ ಹಾಗೂ ಸ್ಮಾರ್ಟ್ ಆಗಿರಬೇಕೆಂದು ಭಾವಿಸುತ್ತೇನೆ’’ಎಂದು ಅವರು ಹೇಳಿದರು.

ಸೋಷಿಯಲ್ ಮೀಡಿಯಾದಲ್ಲಿ ತೀಕ್ಷ್ಣ ಪ್ರತಿಕ್ರಿಯೆಯನ್ನು ಗಂಭೀರವಾಗಿ ಗಮನಿಸುತ್ತಿರುವ ವಕಾರ್ ಯೂನಿಸ್, ‘‘ಇಬ್ಬರನ್ನು ಭೇಟಿಯಾಗಿ ವೈಯಕ್ತಿಕವಾಗಿ ಸಲಹೆ ನೀಡುವೆ’’ ಎಂದರು.

 ಪಾಕ್‌ನ ಮಾಜಿ ನಾಯಕ ಅಫ್ರಿದಿಯವರು ಕಳೆದ ತಿಂಗಳು ಕಾಶ್ಮೀರ ವಿಚಾರ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಬಳಿಕ ಅಫ್ರಿದಿಯ ಎನ್‌ಜಿಒಗೆ ಬೆಂಬಲ ನೀಡಿದ್ದ ಭಾರತದ ಮಾಜಿ ಆಟಗಾರರಾದ ಯುವರಾಜ್ ಸಿಂಗ್ ಹಾಗೂ ಹರ್ಭಜನ್ ಸಿಂಗ್ ಅಫ್ರಿದಿಯ ಮೇಲೆ ಹರಿಹಾಯ್ದು ಅವರೊಂದಿಗಿನ ಸ್ನೇಹವನ್ನು ಕಡಿದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News