ಕಾರ್ಪೊರೇಟ್ ಗಳಿಗೆ ಬಿಟ್ಟುಕೊಟ್ಟ 1,46,000 ಕೋಟಿ ರೂ.ನಿಂದ ದೇಶಕ್ಕೆ ಪೈಸಾ ಪ್ರಯೋಜನವೂ ಆಗಿಲ್ಲವಂತೆ

Update: 2020-06-02 06:46 GMT
ಸಾಂದರ್ಭಿಕ ಚಿತ್ರ

ಮೊನ್ನೆ National Statistical Office (NSO) ಪ್ರಕಟಿಸಿದ ಅಂಕಿಅಂಶಗಳ ಪ್ರಕಾರ ಭಾರತದ ಜಿಡಿಪಿ ದರ 2019-20ರ ನಾಲ್ಕನೇ ತ್ರೈಮಾಸಿಕದಲ್ಲೆ ಶೇ.3.1ಕ್ಕೆ ಕುಸಿದಿದ್ದರೆ ಒಟ್ಟಾರೆ ಭಾರತದ ವಾರ್ಷಿಕ ಜಿಡಿಪಿ ದರ ಶೇ.6.2ರಿಂದ ಶೇ.4.2 ಕುಸಿದಿದೆ. ಇವೆಲ್ಲವೂ ಕೋವಿಡ್ ಪೂರ್ವದ ಅವಧಿಯಲ್ಲಿ ಸಂಭವಿಸಿರುವುದರಿಂದ ಇದಕ್ಕೂ ಕೋವಿಡ್ ಗೂ ಯಾವ ಸಂಬಂಧವು ಇಲ್ಲ. ಆದ್ದರಿಂದ ಸರ್ಕಾರ ಕೋವಿಡ್ ಮರೆಯಲ್ಲಿ ತನ್ನ ವೈಫಲ್ಯಗಳನ್ನು ಮುಚ್ಚಿಟ್ಟುಕೊಳ್ಳಲು ಸಾಧ್ಯವಿಲ್ಲ.

 ಇನ್ನು ಈ ಕೋವಿಡ್ ಅವಧಿಯಲ್ಲಿ ಹಾಗು ಆ ನಂತರದ ಭಾರತದಲ್ಲಿ ಜಿಡಿಪಿ ಬೆಳೆಯುವುದಿರಲಿ, ಈಗಿರುವುದಕ್ಕಿಂತಲೂ ಕಡಿಮೆಯಾಗಬಹುದು (Contraction) ಎಂಬುದನ್ನೇ ಎಲ್ಲರೂ ಮತ್ತು ವಿಶೇಷವಾಗಿ ಆರ್.ಬಿ.ಐ., ಎಸ್.ಬಿ.ಐ. ಹಾಗು ಮೋದಿ ಸ್ನೇಹಿತ ಕಾರ್ಪೊರೇಟ್ ಪಂಡಿತರು ಹೇಳುತ್ತಿದ್ದಾರೆ.

ಆದರೂ ಮೋದಿಯವರು "ಸಬ್ ಚಂಗಾ ಹೈ" ಎಂದು ದೇಶಕ್ಕೆ ಸುಳ್ಳಿನ ಪ್ರಸಾದವನ್ನು ಉಣಿಸುತ್ತಿದ್ದಾರೆ.  ಆದರೆ ವಿದೇಶಿ ಹಾಗು ಸ್ವದೇಶಿ ದೊಡ್ಡ ಬಂಡವಾಳ ಹೂಡಿಕೆದಾರರು ಮೋದಿಯನ್ನು ದೇವರೆಂದೂ ಪರಿಗಣಿಸುವುದಿಲ್ಲ. ಅವರು ಕೊಡುವ ಪ್ರಸಾದವನ್ನು ಮೂಸಿಯೂ ನೋಡುವುದಿಲ್ಲ. ಅದಕ್ಕಾಗಿಯೇ ಅವರು ತಮ್ದೇ ಆದ ಸ್ವತಂತ್ರ ರೇಟಿಂಗ್ ಏಜೆನ್ಸಿಗಳನ್ನು ಇಟ್ಟುಕೊಂಡಿರುತ್ತಾರೆ.

ಅಂಥಾ ಒಂದು  ಅಂತಾರಾಷ್ಟ್ರೀಯ ರೇಟಿಂಗ್ ಏಜೆನ್ಸಿಯಾದ Moody's ಕೂಡ ಭಾರತದ ಆರ್ಥಿಕತೆಯ ಶ್ರೇಯಾಂಕವನ್ನ ನಿನ್ನೆ Baa-2 ಕ್ರಮಾಂಕದಿಂದ Baa-3ಗೆ ಇಳಿಸಿದೆ. ಇದು ಒಂದು ರೇಟಿಂಗ್ ಏಜೆನ್ಸಿ ಒಂದು ದೇಶದ ಆರ್ಥಿಕ ಆರೋಗ್ಯದ ಬಗ್ಗೆ ಕೊಡಬಹುದಾದ ಅತ್ಯಂತ ಕಡಿಮೆ ಶ್ರೇಯಾಂಕ.

ಇದು ಕೋವಿಡ್ ಪೂರ್ವದ ಅವಧಿಯಲ್ಲಿ ಅಂದರೆ ಕಳೆದ ಮೂರೂ ವರ್ಷಗಳ 12 ತ್ರೈಮಾಸಿಕಗಳಲ್ಲಿ ಭಾರತದ ಆರ್ಥಿಕತೆ ನಿರಂತರವಾಗಿ ಕುಸಿಯುತ್ತಿರುವುದನ್ನು ಆಧರಿಸಿ ನೀಡಲಾಗಿರುವ ಶ್ರೇಯಾಂಕವಾಗಿದೆ. ಇದರ ಅರ್ಥ ಮೋದಿಯವರ ಸರ್ಕಾರದಡಿ ಭಾರತವು ವಿದೇಶಿ ಬಂಡವಾಳ ಹೂಡಿಕೆಗೆ ಅತ್ಯಂತ ಅನರ್ಹ ರಾಷ್ಟ್ರವಾಗಿದೆ ಎಂದರ್ಥ

ಆದ್ದರಿಂದಲೇ ಮೊನ್ನೆ ಚೀನಾದಿಂದ ಹಿಂದೆಗೆದ 52 ವಿದೇಶಿ ಕಂಪೆನಿಗಳು ಇಂಡೋನೇಶ್ಯಗೆ ಹೋದವೇ ವಿನಾ ಭಾರತಕ್ಕೆ ಬರಲಿಲ್ಲ.  ಮೋದಿಯವರು ಬಂದ ಮೇಲೆ Ease Of Doing Business ಹೆಚ್ಚಿದೆ ಎಂದು ಸರ್ಕಾರಿ ಪ್ರಾಯೋಜಿತ ಅಧ್ಯಯನಗಳು ಎಷ್ಟೇ ಬೊಬ್ಬೆ ಹಾಕಿದರು ಅಂತಾರಾಷ್ಟ್ರೀಯ ಏಜೆನ್ಸಿಗಳ ಮಟ್ಟಿಗೆ ಮೋದಿಯ ಆರ್ಥಿಕ ನಿರ್ವಹಣೆ ಒಂದು ಮಹಾನ್ ವೈಫಲ್ಯ.

ಮೋದಿ  ಸರ್ಕಾರದ  ಅವಿವೇಕಿ ಆರ್ಥಿಕ ಕ್ರಮಗಳಿಂದ ಸಂಭವಿಸಿರುವ ಆರ್ಥಿಕ ವೈಫಲ್ಯಗಳ ಮತ್ತೊಂದು ಉದಾಹರಣೆಯನ್ನು ಇಂದು ಮತ್ತೊಂದು ಅಧ್ಯಯನ ಬಯಲುಮಾಡಿದೆ. ಈಗಾಗಲೇ ಗಮನಿಸಿದಂತೆ ಭಾರತದ ಆರ್ಥಿಕತೆ ಕೋವಿಡ್ ಗೆ ಮುಂಚೆಯೇ ಪಾತಾಳಕ್ಕೆ ಮುಟ್ಟಿತ್ತು . ಅದಕ್ಕೆ ಕಾರಣ ಆರ್ಥಿಕತೆಯಲ್ಲಿ ಹೂಡಿಕೆ ಮತ್ತು ಬೇಡಿಕೆ ಎರಡೂ ಕುಸಿದಿದ್ದು. ಹೂಡಿಕೆಯನ್ನು ಹೆಚ್ಚಿಸಲು ಬೇಕಾದ ಎಲ್ಲ ಸೌಕರ್ಯಗಳನ್ನು ಒದಗಿಸಿದರು ಉದ್ದಿಮೆಪತಿಗಳು ಹೂಡಿಕೆ ಮಾಡುತ್ತಿರಲಿಲ್ಲ. ಏಕೆಂದರೆ ಅವರ ಉತ್ಪನ್ನಗಳಿಗೆ ದೇಶೀಯ (ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೂಡಾ) ಬೇಡಿಕೆ ಇರಲಿಲ್ಲ. ಹೀಗಾಗಿ ಭಾರತದ ಆರ್ಥಿಕತೆಯ ಪ್ರಧಾನ ದೌರ್ಬಲ್ಯ ಬೇಡಿಕೆಯದ್ದೇ ಹೊರತು ಹೂಡಿಕೆಯದ್ದಾಗಿರಲಿಲ್ಲ. ಅದಕ್ಕೆ ಕಾರಣ ಸರಕುಗಳನ್ನು ಕೊಂಡು ಬೇಡಿಕೆಯನ್ನು ಸೃಷ್ಟಿಸಬೇಕಾದ ಈ ದೇಶದ  ಕೊಳ್ಳುವವರ ಅಂದರೆ ಈ ದೇಶದ ಶ್ರೀಸಾಮಾನ್ಯರ ಬಳಿ ಹಣವಿಲ್ಲ. ಹೀಗಾಗಿ ಆರ್ಥಿಕತೆ ಪುನಶ್ಚೇತನಗೊಳ್ಳಬೇಕಿದ್ದರೆ ಸರ್ಕಾರ ಜನರ ಆದಾಯ, ವೇತನ, ಕೂಲಿ, ಉಳಿತಾಯಗಳು ಹೆಚ್ಚುವಂತ ಅರ್ಥಾತ್  ಜನರ ಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಬೇಡಿಕೆಯನ್ನು ಹೆಚ್ಚುಸುವಂಥ ಕ್ರಮಗಳನ್ನು ತೆಗೆದುಕೊಳ್ಳಬೇಕಿತ್ತು. ಆದರೆ  ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಜನರ ಆದಾಯವನ್ನು ಹೆಚ್ಚಿಸುವ ಕ್ರಮಗಳನ್ನು ತೆಗೆದುಕೊಳ್ಳುವ ಬದಲಾಗಿ ಕಾರ್ಪೊರೇಟ್ ಹೂಡಿಕೆಗೆ ಪೂರಕವಾದ ಕ್ರಮಗಳನ್ನು ತೆಗೆದುಕೊಳ್ಳುತ್ತಾ ಬಂದಿದೆ.  ಅದರ ಭಾಗವಾಗಿಯೇ  2019ರ ಸೆಪ್ಟೆಂಬರ್ ನಲ್ಲಿ ಮೋದಿ ಸರ್ಕಾರ ಕಾರ್ಪೊರೇಟ್ ಕಂಪೆನಿಗಳ  ಲಾಭದ ಮೇಲೆ ಹಾಕುತ್ತಿದ್ದ ತೆರಿಗೆಯನ್ನು ಶೇ.35ರಿಂದ ಶೇ.25ಕ್ಕೆ ಇಳಿಸಿತು. ಇದರ ಮೂಲಕ ಭಾರತದ ದೊಡ್ಡ ಕಾರ್ಪೊರೇಟ್ ಕಂಪೆನಿಗಳ ಬಳಿ ಅಂದಾಜು 1,45,000 ಕೋಟಿ ರೂ. ಆದಾಯ ಉಳಿಸಿತು. ಸರ್ಕಾರಕ್ಕೆ ಬರಬೇಕಿದ್ದ ಅಷ್ಟು ತೆರಿಗೆ ನಷ್ಟವಾಯಿತು.

ಇದರ ಹಿಂದಿದ್ದ ತಿಳವಳಿಕೆ ಏನೆಂದರೆ ಸರ್ಕಾರ ಉಳಿಸಿಕೊಟ್ಟ ಈ ಮೊತ್ತವನ್ನು ಕಾರ್ಪೊರೇಟ್ ಕಂಪೆನಿಗಳು ಹಣವನ್ನು ಆರ್ಥಿಕತೆಯಲ್ಲಿ ತೊಡಗಿಸುತ್ತಾರೆ ಎಂಬುದಾಗಿತ್ತು. ಆ ಮೂಲಕ ಆರ್ಥಿಕ ಪುನಶ್ಚೇತನವಾಗುತ್ತದೆ ಎಂಬ ಆಧಾರವಿಲ್ಲದ ಭರವಸೆಗಳನ್ನು ಮೋದಿ ಸರ್ಕಾರ ದೇಶಕ್ಕೆ ಕೊಟ್ಟಿತ್ತು. ಆದರೆ ಮೊನ್ನೆ RBI, CMIE (Center For Monitoring Indian Economy) ಮತ್ತು National Statistical Office (NSO) ಬಿಡುಗಡೆ ಮಾಡಿರುವ ಅಂಕಿಅಂಶಗಳು ಸರ್ಕಾರದ ಈ ನಿರೀಕ್ಷೆ ಎಷ್ಟು ಹಾಸ್ಯಾಸ್ಪದವಾಗಿತ್ತು ಮತ್ತು ಈ ಕ್ರಮಗಳು ಹೇಗೆ ದೇಶದ ಆರ್ಥಿಕತೆಗೆ ಮತ್ತಷ್ಟು ಧಕ್ಕೆ ಉಂಟುಮಾಡಿದೆ ಎಂಬುದನ್ನು ಸಾಬೀತು ಪಡಿಸಿದೆ.

 ಈ  ಅಂಕಿಅಂಶಗಳ ಪ್ರಕಾರ, ಸರ್ಕಾರ 1,46,000 ಕೋಟಿ ರೂ. ಮೊತ್ತವನ್ನು  ಕಾರ್ಪೊರೇಟ್ ಗಳ ಬಳಿ ಉಳಿಸಿದ ನಂತರದ  2019ರ ಸೆಪ್ಟಂಬರ್ -2020ರ ಮಾರ್ಚ್ ಅವಧಿಯಲ್ಲಿ ಕಾರ್ಪೊರೇಟ್ ಬಂಡವಾಳ ಹೂಡಿಕೆ ಒಂದು ಪೈಸೆಯೂ ಹೆಚ್ಚಲಿಲ್ಲ ... ಹೆಚ್ಚುವುದಿರಲಿ ...  2018ರ ಅವಧಿಗೆ ಹೋಲಿಸಿದಲ್ಲಿ ಶೇ.8ರಷ್ಟು ಕಡಿಮೆಯಾಯಿತು. ಅಷ್ಟು ಮಾತ್ರವಲ್ಲ, 2019-20ನೇ ಸಾಲಿನಲ್ಲಿ ಭಾರತ ಸರ್ಕಾರದ ತೆರಿಗೆ ಆದಾಯದಲ್ಲಿ ಕಾರ್ಪೊರೇಟ್ ತೆರಿಗೆ ಆದಾಯದ ಪಾಲು 1,06,696 ಕೋಟಿ ರೂಪಾಯಿಗಳಷ್ಟು ಕಡಿಮೆಯಾಗಿದೆ. ಭಾರತದ ಒಟ್ಟಾರೆ ತೆರಿಗೆ ಆದಾಯದಲ್ಲಿ ಜನಸಾಮಾನ್ಯರು ತೆರುವ ಪರೋಕ್ಷ ತೆರಿಗೆಯ ಪಾಲು ಹೆಚ್ಚಾಗುತ್ತಿದೆ.

ಆದಾಯ ತೆರಿಗೆಯ ಪಾಲಿನಲ್ಲಿ 2014ರ ನಂತರ ಮಧ್ಯಮ ವರ್ಗದವರು ಹಾಗು ವೇತನದಾರರು ಕಟ್ಟುತ್ತಿರುವ ಆದಾಯ ತೆರಿಗೆಯ ಪಾಲು ಹೆಚ್ಚುತ್ತಿದ್ದು ಕಾರ್ಪೊರೇಟ್ ಉದ್ದಿಮೆಪತಿಗಳು ಕಟ್ಟಬೇಕಾದ ಕಾರ್ಪೊರೇಟ್ ತೆರಿಗೆಯ ಪಾಲು ಕಡಿಮೆಯಾಗುತ್ತಲೇ ಬರುತ್ತಿದೆ. ಇದು 2019 ರಲ್ಲಿ ಮತ್ತಷ್ಟು ಕಡಿಮೆಯಾಗಿದೆ.

ಇದರ ಅರ್ಥವೇನು?

ಕಾರ್ಪೊರೇಟ್ ಉದ್ದಿಮೆಪತಿಗಳು ತಮಗೆ ದಕ್ಕಿದ ಹೆಚ್ಚುವರಿ ಉಳಿತಾಯದ ಒಂದು ನಯಾಪೈಸೆಯನ್ನು ಕೂಡಾ ಆರ್ಥಿಕತೆಯಲ್ಲಿ ಹೂಡಿಕೆ ಮಾಡಿಲ್ಲ. ಹೀಗಾಗಿ ಮೋದಿ ಸರ್ಕಾರದ ಈ ಆರ್ಥಿಕ ಅವಿವೇಕದ ನೀತಿ ಕಷ್ಟದ ಕಾಲದಲ್ಲೂ ಶ್ರೀಮಂತರನ್ನು ಇನ್ನು ಹೆಚ್ಚು ಶ್ರೀಮತರನ್ನಾಗಿಸಿತೇ ಹೊರತು ಶ್ರೀಸಾಮಾನ್ಯರ ಆರ್ಥಿಕತೆಯಲ್ಲಿ ಯಾವುದೇ ಚೇತರಿಕೆ ತರಲಿಲ್ಲ. ಬದಲಿಗೆ ಮತ್ತಷ್ಟು ಕಂಗೆಡಿಸಿತು.

ಉದಾಹರಣೆಗೆ ಸುಳ್ಳು-ಮೋಸಗಳಿಂದ ಕೂಡಿದ 20 ಲಕ್ಷ ರೂ. ಕೋವಿಡ್ ಪ್ಯಾಕೇಜನ್ನೇ ನೋಡಿ..

ಕೋವಿಡ್ ಬಿಕ್ಕಟ್ಟಿನ ಕಾಲದಲ್ಲೂ ಈ ದೇಶದ 100 ಕೋಟಿ ಬಡವರ ಬದುಕನ್ನು ಉಳಿಸಲು ಆ ಪ್ಯಾಕೇಜಿನಲ್ಲಿ ನಿಜವಾಗಿ ವೆಚ್ಚವಾಗುವುದು  1,25,000 ಕೋಟಿ ಮಾತ್ರ. ಅಂದರೆ ಇದೆ ಸರ್ಕಾರ ಶೇ.0.1ರಷ್ಟು ಕಾರ್ಪೊರೇಟ್ ಉದ್ದಿಮೆಪತಿಗಳಿಗೆ ಕೊಟ್ಟ 1.46,000 ಕೋಟಿ ರೂ.ಗಿಂತಲೂ 21,000 ಕೋಟಿ ರೂ. ಕಡಿಮೆ.

ಅದೇ ಮೊತ್ತವನ್ನು ಬಡ-ಮಾಧ್ಯಮವರ್ಗಗಳಿಗೆ ವರ್ಗಾಯಿಸಿದ್ದಾರೆ ಅಷ್ಟು ಹಣ ಆರ್ಥಿಕತೆಯಲ್ಲೇ ಮರು ವ್ಯಯವಾಗುತ್ತಿತ್ತು. ಅಷ್ಟರ ಮಟ್ಟಿಗೆ ಆರ್ಥಿಕತೆಯು ಚೇತರಿಕೆಯಾಗುತ್ತಿತ್ತು.. ಕಾರ್ಪೊರೇಟ್ ಗಳಿಗೆ ಬಿಟ್ಟುಕೊಟ್ಟ ಹಣ ಹೂಡಿಕೆಯಾಗದೆ ತೆರಿಗೆಯ ಲೆಕ್ಕಕ್ಕೂ ಬಾರದ ಖಾಸಗಿ ಸಂಪತ್ತಾಯಿತಷ್ಟೆ..

- ಶಿವಸುಂದರ್

Writer - - ಶಿವಸುಂದರ್

contributor

Editor - - ಶಿವಸುಂದರ್

contributor

Similar News