ಬಿಬಿಎಂಪಿ ಆಯುಕ್ತರ ವಿರುದ್ಧ ಸಿಎಂಗೆ ದೂರು

Update: 2020-06-02 17:36 GMT

ಬೆಂಗಳೂರು, ಜೂ.2: ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‍ಕುಮಾರ್ ಸರಕಾರದ ನಿಯಮಗಳ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮಾಹಿತಿ ಹಕ್ಕು ಅಧ್ಯಯನ ಕೇಂದ್ರವು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ದೂರು ನೀಡಿದೆ.

ಬಿಬಿಎಂಪಿಯ ವೃಂದ ಮತ್ತು ನೇಮಕಾತಿ ನಿಯಮಾವಳಿಗಳನ್ನು ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ಗಾಳಿಗೆ ತೂರುತ್ತಿದ್ದಾರೆ ಎಂದು ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ಅಮರೇಶ್ ಆರೋಪಿಸಿದ್ದಾರೆ.

ವೃಂದ ನೇಮಕಾತಿ ನಿಯಮದಂತೆ 74 ಸಾವಿರಕ್ಕಿಂತ ಹೆಚ್ಚು ವೇತನ ಪಡೆಯುವ ಎ ದರ್ಜೆ ಅಧಿಕಾರಿಗಳನ್ನು ನೇಮಿಸುವ ಅಧಿಕಾರ ಸರಕಾರಕ್ಕಿರುತ್ತದೆ. ಆದರೆ, ಏಪ್ರಿಲ್ ತಿಂಗಳಿನಲ್ಲಿ ನಿವೃತ್ತಿ ಹೊಂದಿದ ಪಾಲಿಕೆಯ ಪೂರ್ವ ವಲಯದ ಮುಖ್ಯ ಅಭಿಯಂತರರ ಸ್ಥಳಕ್ಕೆ ಪ್ರಹ್ಲಾದ ಅವರನ್ನು ನೇಮಿಸಲಾಗಿದೆ. ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಮುಖ್ಯ ಅಭಿಯಂತರ ಸೋಮಶೇಖರ್ ಅವರ ಜಾಗಕ್ಕೂ ಪ್ರಹ್ಲಾದ್ ಅವರನ್ನೇ ಹೆಚ್ಚುವರಿ ಮುಖ್ಯ ಅಭಿಯಂತರರಾಗಿ ನೇಮಿಸುವ ಮೂಲಕ ಸರಕಾರದ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಹೀಗಾಗಿ ಸರಕಾರದ ಧೋರಣೆ ವಿರುದ್ಧ ನಡೆದುಕೊಳ್ಳುತ್ತಿರುವ ಆಯುಕ್ತರ ವಿರುದ್ಧ ಸಿಎಂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ನಗರಾಭಿವೃದ್ಧಿ ಇಲಾಖೆಗೂ ಪತ್ರ: ವೃಂದ ಮತ್ತು ನೇಮಕಾತಿ ವಿರುದ್ಧವಾಗಿ ಆಯುಕ್ತ ಅನಿಲ್‍ಕುಮಾರ್ ಹೊರಡಿಸಿರುವ ವರ್ಗಾವಣೆ ಆದೇಶವನ್ನು ರದ್ದುಪಡಿಸುವಂತೆಯೂ ಮಾಹಿತಿ ಹಕ್ಕು ಅಧ್ಯಯನ ಕೇಂದ್ರ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೂ ಪತ್ರ ಬರೆದಿದೆ.

ನಿಯಮ ಉಲ್ಲಂಘಿಸಿ ಪ್ರಹ್ಲಾದ್ ಹಾಗೂ ದೊಡ್ಡಯ್ಯ ಅವರಿಗೆ ನೀಡಿರುವ ನೇಮಕಾತಿಯನ್ನು ಈ ಕೂಡಲೇ ರದ್ದುಪಡಿಸಬೇಕು ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರಿಗೆ ಅಮರೇಶ್ ಮನವಿ ಮಾಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News