ಕೋವಿಡ್ ನಿಯಂತ್ರಿಸಲು ಸಾಧ್ಯವಿಲ್ಲದಿದ್ದರೆ ಆರೋಗ್ಯ ಸಚಿವ ರಾಜೀನಾಮೆ ನೀಡಲಿ: ವೆಲ್ಫೇರ್ ಪಾರ್ಟಿ

Update: 2020-06-02 17:59 GMT

ಬೆಂಗಳೂರು, ಜೂ.2: ಕೊರೋನ ಸಾಂಕ್ರಾಮಿಕ ರೋಗವು ದಿನದಿಂದ ದಿನಕ್ಕೆ ಏರುತ್ತಲಿದೆ. ಆದರೆ ರಾಜ್ಯ ಸರಕಾರ ಏನು ಮಾಡುತ್ತಿದೆ, ನಮ್ಮ ಆರೋಗ್ಯ ಸಚಿವರು ಯಾರು ಎನ್ನುವುದೇ ಗೊತ್ತಿಲ್ಲ. ಇದರ ಬಗ್ಗೆ ಸರಿಯಾದ ವ್ಯವಸ್ಥೆ ಕಲ್ಪಿಸಲು ಇವರಿಂದ ಸಾಧ್ಯವಾಗುವುದಿಲ್ಲ ಎಂದ  ಮೇಲೆ ಇವರು ಸಚಿವರಾಗಿ ಏನು ಪ್ರಯೋಜನ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಡ್ವೊಕೇಟ್ ತಾಹೀರ್ ಹುಸೇನ್ ಪ್ರಶ್ನಿಸಿದ್ದಾರೆ.

ಇವರಿಂದ ನಿಭಾಯಿಸಲು ಸಾಧ್ಯವಿಲ್ಲದಿದ್ದರೆ ರಾಜಿನಾಮೆ ಕೊಡಬಹುದಲ್ಲವೇ, ಕೇವಲ ಪತ್ರಿಕಾಗೋಷ್ಠಿ ನಡೆಸಿ ಹೇಳಿಕೆ ಕೊಡುವುದರಿಂದ ಸಾಂಕ್ರಾಮಿಕ ರೋಗ ತಡೆಗಟ್ಟಬಹುದು ಎನ್ನುವ ಮೂಢರಾಗಿದ್ದಾರೆಯೆ ನಮ್ಮ  ಸಚಿವರು ಎಂದು ಅವರು ಪ್ರಶ್ನಿಸಿದ್ದಾರೆ.

ಸರಕಾರ ಸೃಷ್ಟಿಸಿದ ಅವಾಂತರಗಳಿಂದ ಗ್ರಾಮಗಳಲ್ಲೂ ಕೊರೋನ ಆತಂಕ ಮನೆ ಮಾಡಿದೆ. ಸರಕಾರದ ಆದೇಶದ ಬಳಿಕ ಕ್ಷೇತ್ರದಲ್ಲಿ ಕ್ವಾರಂಟೈನ್‍ನಲ್ಲಿದ್ದ ಕಾರ್ಮಿಕರನ್ನು ಅವಧಿಗೂ ಮುನ್ನ ಬಿಡಲಾಗಿದೆ. ಇಂತಹ ಅವಾಂತರಗಳನ್ನು ಸರಕಾರ ಸೃಷ್ಟಿ ಮಾಡಿದ್ದು ಜನರು ಆತಂಕದಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಸರಕಾರ ಪ್ರತಿ ಹಂತದಲ್ಲಿ ಎಡವಿದೆ. ಲಾಕ್‍ಡೌನ್ ಘೋಷಣೆ ಸಂದರ್ಭದಲ್ಲೂ ತರಾತುರಿ ಮಾಡಿದೆ. ಇಡೀ ದೇಶದಲ್ಲಿ ಕಾರ್ಮಿಕರು ನರಳುವಂತಹ ಸನ್ನಿವೇಶಗಳು ನಡೆದಿವೆ. ಸರಿಯಾದ ಆಹಾರ, ಸಾರಿಗೆ ವ್ಯವಸ್ಥೆಯಿಲ್ಲದೆ ಪರದಾಡುವಂತಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೊರೋನ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದ್ದು ಇದರ ಪರಿಣಾಮ ದೇಶದ ಸಾಮಾನ್ಯ ಜನರು ಎದುರಿಸುತ್ತಿದ್ದಾರೆ ಎಂದು ತಾಹೀರ್ ಹುಸೇನ್ ಹೇಳಿದ್ದಾರೆ.

ಸರಕಾರದ ಅವಾಂತರಗಳಿಂದ ಗ್ರಾಮಗಳಲ್ಲೂ ಜನರು ಆತಂಕದ ವಾತಾವರಣದಲ್ಲಿದ್ದಾರೆ. ಆದುದರಿಂದ, ಜನರ ಸಹನೆಯನ್ನು ಪರೀಕ್ಷಿಸಬೇಡಿ. ಸರಿಯಾಗಿ ಆಡಳಿತ ನಡೆಸಲು ಸಾಧ್ಯವಾಗದಿದ್ದರೆ ಕೂಡಲೇ ಆರೋಗ್ಯ ಸಚಿವರು ರಾಜಿನಾಮೆ ನೀಡಲಿ ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News