ಹೂಡಿಕೆದಾರರಿಗೆ ರಾಜ್ಯ ಸರಕಾರದಿಂದ ವಿಶೇಷ ರಿಯಾಯಿತಿ: ಡಾ.ಅಶ್ವತ್ಥನಾರಾಯಣ

Update: 2020-06-02 18:01 GMT

ಬೆಂಗಳೂರು, ಜೂ.2: ಐಟಿ, ಬಿಟಿ ಮತ್ತು ಎಲೆಕ್ಟ್ರಾನಿಕ್ ಕ್ಷೇತ್ರದಲ್ಲಿ ಹೂಡಿಕೆ ಮಾಡುವವರಿಗೆ ರಾಜ್ಯ ಸರಕಾರದಿಂದ ಹಲವು ವಿಶೇಷ ರಿಯಾಯಿತಿ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

ಮಂಗಳವಾರ ನಗರದ ಎಂ.ಎಸ್.ಬಿಲ್ಡಿಂಗ್‍ನಲ್ಲಿರುವ ಸಭಾಂಗಣದಲ್ಲಿ ಇನ್ವೆಸ್ಟ್ ಇಂಡಿಯಾ ವತಿಯಿಂದ ಪ್ರಮುಖ ರಾಜ್ಯಗಳ ಐಟಿ ಇಲಾಖೆ ಪ್ರಮುಖರು ಹಾಗೂ ಕಂಪೆನಿಗಳ ಮುಖ್ಯಸ್ಥರ ಜತೆ ಏರ್ಪಡಿಸಿದ್ದ ವೀಡಿಯೊ ಸಂವಾದದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಹೂಡಿಕೆದಾರರಿಗೆ ಭೂ ಸ್ವಾಧೀನ, ತೆರಿಗೆ ಮುಂತಾದ ವಿಚಾರದಲ್ಲಿ ಈಗಾಗಲೆ ಸರಕಾರ ಹಲವು ವಿನಾಯಿತಿಗಳನ್ನು ನೀಡುತ್ತಿದೆ. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದು. ಕರ್ನಾಟಕ ಹೂಡಿಕೆ ಸ್ನೇಹಿ ಆಡಳಿತ ಇರುವ ರಾಜ್ಯವಾಗಿದ್ದು, ಉದ್ಯಮಿಗಳು ಇದರ ಅನುಕೂಲ ಪಡೆದುಕೊಳ್ಳಬೇಕೆಂದು ಸಭೆಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಇಎಸ್‍ಡಿಎಂ (ಎಲೆಕ್ಟ್ರಾನಿಕ್ಸ್ ಸಿಸ್ಟೆಮ್ ವಿನ್ಯಾಸ ಮತ್ತು ಉತ್ಪಾದನೆ) ವಲಯದಲ್ಲಿ ಕರ್ನಾಟಕ ದೇಶದಲ್ಲೇ ಅಗ್ರಸ್ಥಾನದಲ್ಲಿದ್ದು, ಜಾಗತಿಕ ಹೂಡಿಕೆಗಳನ್ನು ಆಕರ್ಷಿಸಲು ಸಮರ್ಥವಾಗಿದೆ. ನುರಿತ ವೃತ್ತಿಪರರು, ಅಪರಿಮಿತ ಅವಕಾಶಗಳಿರುವ ರಾಜ್ಯ ನಮ್ಮದು. ಇಎಸ್‍ಡಿಎಂ ವಲಯ ಸೇರಿದಂತೆ ಐಟಿ-ಬಿಟಿ ಹೂಡಿಕೆಗೆ ಹೇರಳ ಅವಕಾಶ ಇದ್ದು, ಇದನ್ನು ಬಳಸಿಕೊಳ್ಳುವಂತೆ ಕಂಪನಿಗಳನ್ನು ಆಹ್ವಾನಿಸಲಾಗಿದೆ. ನಮ್ಮ ರಾಜ್ಯ ಎಲ್ಲರಿಗೂ ಸಲ್ಲುವಂತದ್ದು ಉದ್ಯಮಿಗಳಿಗೆ ಪೂರಕ ವಾತಾವರಣ, ಐಟಿ ಕೌಶಲ, ಮಾನವ ಸಂಪನ್ಮೂಲ ಎಲ್ಲವೂ ಇಲ್ಲಿ ಲಭ್ಯವಿದೆ. ಹಾಗಾಗಿ, ನಮ್ಮ ಸರ್ಧೆ ಇತರ ರಾಜ್ಯಗಳ ಜತೆಗಲ್ಲ ಬದಲಾಗಿ ಪ್ರಮುಖ ರಾಷ್ಟ್ರಗಳು ಹಾಗೂ ಕಂಪನಿಗಳೊಂದಿಗೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.

ಹೈಟೆಕ್ ಉದ್ಯಮ ಅದರಲ್ಲೂ ವಿಶೇಷವಾಗಿ ಇಎಸ್‍ಡಿಎಂ ವಲಯದ ಕೇಂದ್ರ ಕರ್ನಾಟಕ ಎಂಬುದು ಗಮನಾರ್ಹ. ಇಎಸ್‍ಡಿಎಂ ರಫ್ತಿನಲ್ಲಿ ರಾಜ್ಯದ ಪಾಲು ಶೇ.64ರಷ್ಟಿದೆ. ನಮ್ಮ ರಾಜ್ಯ ಅತಿದೊಡ್ಡ ಚಿಪ್ ವಿನ್ಯಾಸ ಕೇಂದ್ರವಾಗಿದ್ದು, ದೇಶದ ಶೇ. 70 ರಷ್ಟು ಚಿಪ್ ವಿನ್ಯಾಸಕರಿಗೆ ನೆಲೆಯಾಗಿದೆ. ನಮ್ಮ ಕೆಇಎಸ್‍ಡಿಎಂ ನೀತಿ 2017-2022 ರಲ್ಲಿ ಉಲ್ಲೇಖಿಸಿರುವಂತೆ, ಈ ಅವಧಿಯಲ್ಲಿ 2000 ಇಎಸ್‍ಡಿಎಂ ಸ್ಟಾರ್ಟ್‍ಅಪ್‍ಗಳ ಬೆಳವಣಿಗೆಗೆ ಉತ್ತೇಜಿಸುವ ಜತೆಗೆ 2025ರ ವೇಳೆಗೆ 20 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ. ಕೌಶಲ ಅಭಿವೃದ್ಧಿಗೆ ಒತ್ತು ನೀಡುವ ಜತೆಗೆ ಗುಣಮಟ್ಟದ ಮೂಲಸೌಕರ್ಯ ಒದಗಿಸಿ ಸುಲಲಿತ ವ್ಯವಹಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಅವರು ಹೇಳಿದರು.

ಉದ್ಯಮ ಸ್ನೇಹಿ ಕಾರ್ಮಿಕ ಕಾನೂನುಗಳು, ಹಿತಕರವಾದ ಹವಾಮಾನ, ಕಾನೂನು ಮತ್ತು ಸುವ್ಯವಸ್ಥೆ ಪಾಲನೆ, ನುರಿತ ವೃತ್ತಿಪರರು, ಕಾಸ್ಮೋಪಾಲಿಟನ್ ಪರಿಸರ, ಹೂಡಿಕೆಗೆ ಪೂರಕವಾದ ನೀತಿಗಳು ಮತ್ತು ಉದ್ಯಮ ಸ್ಥಾಪನೆಗೆ ಏಕ ಗವಾಕ್ಷಿ ವ್ಯವಸ್ಥೆ ಇರುವುದರಿಂದ ಕರ್ನಾಟಕ ಹಲವು ವಿದೇಶಿ ಹೂಡಿಕೆದಾರರಿಗೆ ಅಚ್ಚುಮೆಚ್ಚಿನ ತಾಣವಾಗಿದೆ. ಇಎಸ್‍ಡಿಎಂ ವಲಯದಲ್ಲಿ ಲಭ್ಯವಿರುವ ಅಪರಿಮಿತ ಅವಕಾಶಗಳನ್ನು ಬಳಸಿಕೊಳ್ಳಲು ಎಲ್ಲ ಕಂಪನಿಗಳಿಗೆ ಕರ್ನಾಟಕ ಮುಕ್ತ ಆಹ್ವಾನ ನೀಡುತ್ತದೆ. ಮುಂಬರುವ ದಿನಗಳಲ್ಲಿ ಇಎಸ್‍ಡಿಎಂ ವಲಯವನ್ನು ಉತ್ತುಂಗಕ್ಕೆ ಒಯ್ಯವಲ್ಲಿ ನಮ್ಮ ಜತೆ ಕೈಜೋಡಿಸಲು ಸಭೆಯಲ್ಲಿ ಮನವಿ ಮಾಡಲಾಗಿದೆ ಎಂದು ಅಶ್ವತ್ಥ ನಾರಾಯಣ ತಿಳಿಸಿದರು.

ಇನ್ವೆಸ್ಟ್ ಇಂಡಿಯಾ ಸಿಇಒ ದೀಪಕ್ ಬಾಗ್ಲಾ, ಕೇಂದ್ರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಅಜಯ್ ಪ್ರಕಾಶ್, ಜಂಟಿ ಕಾರ್ಯದರ್ಶಿ ಸೌರಭ್ ಗೌರ್, ಐಟಿ ಬಿಟಿ, ವಿಜ್ಞಾನ ತಂತ್ರಜ್ಞಾನ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಇ.ವಿ.ರಮಣರೆಡ್ಡಿ, ಹೂಡಿಕೆ ತಜ್ಞ ರಾಘವ್ ಗುಪ್ತಾ, ಇನ್ವೆಸ್ಟ್ ಇಂಡಿಯಾದ ಎಎಸ್‍ಡಿಎಂ ಮುಖ್ಯಸ್ಥ ಅತುಲ್ ಬಿಸ್ತಾ, ಆಂಧ್ರಪ್ರದೇಶದ ವಿಶೇಷ ಮುಖ್ಯಕಾರ್ಯದರ್ಶಿ ಕರಿಕಾಲ್ ವಾಲ್ವಾನ್, ಹರಿಯಾಣದ ಮಾಹಿತಿ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್ ಮತ್ತು ಸಂಪರ್ಕ ಇಲಾಖೆ ಪ್ರಧಾನ ಕಾರ್ಯದರ್ಶಿ ಅಂಕುರ್ ಗುಪ್ತ, ತಮಿಳುನಾಡಿನ ಕೈಗಾರಿಕೋದ್ಯಮ ಇಲಾಖೆ ಪ್ರಧಾನ ಕಾರ್ಯದರ್ಶಿ ತಿರು ಎನ್ ಮುರುಘಾನಂದಮ್ ವೀಡಿಯೋ ಕಾನ್ಫರೆನ್ಸ್‍ನಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News