ಮಹಾರಾಷ್ಟ್ರ ಹೊರತುಪಡಿಸಿ ಅಂತರ್ ರಾಜ್ಯ ಸಾರಿಗೆ ಸೇವೆ ಆರಂಭಿಸಿ: ಅಧಿಕಾರಿಗಳಿಗೆ ಯಡಿಯೂರಪ್ಪ ಸೂಚನೆ

Update: 2020-06-03 14:44 GMT

ಬೆಂಗಳೂರು, ಜೂ. 3: ಕೊರೋನ ಸೋಂಕು ತಡೆಗಟ್ಟಲು ಹೇರಿದ್ದ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ಯಾವುದೇ ವಿಳಂಬವಿಲ್ಲದೆ ಕೂಡಲೇ 5 ಸಾವಿರ ರೂ. ಪರಿಹಾರ ಧನ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ, ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬುಧವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಾರಿಗೆ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಂದ ಪರಿಹಾರ ಧನಕ್ಕಾಗಿ ಈಗಾಗಲೇ 1,98,929 ಅರ್ಜಿಗಳು ಬಂದಿದ್ದು, ಚಾಲಕರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.

ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಪ್ರಯಾಣಿಕರು ಸಾರ್ವಜನಿಕ ಸಾರಿಗೆ ಸಂಸ್ಥೆ ಬಸ್‍ಗಳನ್ನು ಬಳಸಲು ಹಿಂಜರಿಯುತ್ತಿದ್ದು, ಪ್ರಯಾಣಿಕರಲ್ಲಿ ವಿಶ್ವಾಸ ಮೂಡಿಸಬೇಕು. ಸಾರಿಗೆ ಇಲಾಖೆ ವಾಹನಗಳನ್ನು ಸ್ವಚ್ಛಗೊಳಿಸುವುದಲ್ಲದೆ, ಸಾರಿಗೆ ಸಂಸ್ಥೆಗಳ ವಾಹನಗಳಲ್ಲಿ ಪ್ರಯಾಣಿಸಲು ಜನರಲ್ಲಿ ಆತ್ಮವಿಶ್ವಾಸ ತುಂಬಬೇಕು ಎಂದು ಸಲಹೆ ಮಾಡಿದರು.

ಮಹಾರಾಷ್ಟ್ರ ಹೊರತುಪಡಿಸಿ ಅಂತರ್ ರಾಜ್ಯ ಸಾರಿಗೆ ಸೇವೆಯನ್ನು ಆರಂಭಿಸಲು ಇತರೆ ರಾಜ್ಯಗಳ ಸಾರಿಗೆ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಿ, ಕೂಡಲೇ ಬಸ್ ಸಂಚಾರ ಆರಂಭಿಸಬೇಕು ಎಂದ ಅವರು, ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವುದು, ಬಸ್ಸುಗಳಲ್ಲಿ ಕಡಿಮೆ ಸಂಖ್ಯೆಯ ಜನರನ್ನು ಹತ್ತಿಸಿಕೊಳ್ಳುವುದು ಸೇರಿದಂತೆ ಸುಗಮ ಸಾರಿಗೆ ಸಂಚಾರಕ್ಕೆ ಸಂಬಂಧಿಸಿದಂತೆ ಪರಿಣಿತರ ಅಭಿಪ್ರಾಯ ಸಂಗ್ರಹಿಸಿ, ಸೂಕ್ತ ತೀರ್ಮಾನ ಕೈಗೊಳ್ಳಿ ಎಂದು ಸೂಚಿಸಿದರು.

ಕೊರೋನ ಹಿನ್ನೆಲೆಯಲ್ಲಿ ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳು ನಷ್ಟದಲ್ಲಿದ್ದು, ಮುಂದಿನ ದಿನಗಳಲ್ಲಿ ಪ್ರಯಾಣಿಕರ ಓಡಾಟ ಹೆಚ್ಚಾದರೆ ಪರಿಸ್ಥಿತಿ ಸುಧಾರಿಸಲಿದೆ ಎಂಬ ನಿರೀಕ್ಷೆ ಇದೆ. ಬೆಂಗಳೂರು ನಗರ ಪ್ರದೇಶದಲ್ಲಿ ರೈಲ್ವೆ ನಿಲ್ದಾಣಕ್ಕೆ ತಲುಪಿಸುವ ವ್ಯವಸ್ಥೆ ಹಾಗೂ ವಿಮಾನ ನಿಲ್ದಾಣದಿಂದ ನಗರದ ವಿವಿಧ ಪ್ರದೇಶಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ವಲಸೆ ಕಾರ್ಮಿಕರನ್ನು ಊರಿಗೆ ಕಳುಹಿಸಲು ಬಸ್ ವ್ಯವಸ್ಥೆ ಮಾಡಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ಕೋವಿಡ್-19ನಿಂಧ ರಾಜಸ್ವ ಸಂಗ್ರಹ ಕುಂಠಿತವಾಗಿದೆ. ಮುಂದಿನ ದಿನಗಳಲ್ಲಿ ಉಂಟಾಗಿರುವ ನಷ್ಟ ಸರಿದೂಗಿಸಲು ಅಧಿಕಾರಿಗಳಿಗೆ, ಸಿಎಂ ಸೂಚಿಸಿದರು.

ಸಭೆಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ, ನಿಗಮಗಳ ಅಧ್ಯಕ್ಷರಾದ ನಂದೀಶ್ ರೆಡ್ಡಿ, ವಿ.ಎಸ್.ಪಾಟೀಲ್, ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಅಜುಂ ಪರ್ವೇಜ್, ಶಿವಯೋಗಿ ಕಳಸದ್, ಶಿಖಾ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News