ತನ್ವೀರ್ ಸೇಠ್ ಕೊಲೆ ಯತ್ನ ಪ್ರಕರಣ: ನಾಲ್ವರು ಆರೋಪಿಗಳಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು

Update: 2020-06-03 14:45 GMT

ಬೆಂಗಳೂರು, ಜೂ.3: ಮಾಜಿ ಸಚಿವ, ಹಾಲಿ ಶಾಸಕ ತನ್ವೀರ್ ಸೇಠ್ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. 

ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್.ಮುದಗಲ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ನೂರ್ ಖಾನ್, ಅಕ್ರಂ ಡಾನ್, ಸೈಯದ್ ಮುಹೀಬ್, ಅಬ್ದುಲ್ಲಾ ಬೇಗ್‍ಗೆ ಜಾಮೀನು ಮಂಜೂರು ಮಾಡಿದೆ.

ಈ ನಾಲ್ವರು ಆರೋಪಿಗಳ ವಿರುದ್ಧ ಮೈಸೂರು ನಗರದ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 347 ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 25 ಹಾಗೂ ಐಪಿಸಿ ಸೆಕ್ಷನ್ 307, 109, 114, 201, 450, 120(ಬಿ)ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ತಲಾ ಐವತ್ತು ಸಾವಿರ ರೂ.ವೈಯಕ್ತಿಕ ಬಾಂಡ್, ಇಬ್ಬರ ಶೂರಿಟಿ ನೀಡಬೇಕು. ವಿಚಾರಣೆಗೆ ಕರೆದಾಗ ಹೋಗಬೇಕು. ಸಾಕ್ಷಿಗಳನ್ನು ನಾಶಮಾಡಬಾರದು. ಯಾವುದೇ ಅಪರಾಧ ಚಟುವಟಿಕೆಯಲ್ಲಿ ಪಾಲ್ಗೊಳ್ಳಬಾರದು. ತಿಂಗಳ ಕೊನೆ ರವಿವಾರ ಪೊಲೀಸ್ ಠಾಣೆಗೆ ಹಾಜರಾಗಬೇಕು. ನ್ಯಾಯಾಲಯದ ಅನುಮತಿ ಇಲ್ಲದೆ ನಗರವನ್ನು ಬಿಟ್ಟು ಹೋಗಬಾರದು ಎಂದು ಷರತ್ತುಗಳನ್ನು ವಿಧಿಸಿ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ.

ಈ ಎಲ್ಲ ಆರೋಪಿಗಳು ಸೇರಿ ಫರ್ಹಾನ್ ಪಾಷ ಮೂಲಕ ಕೊಲೆಯತ್ನ ನಡೆಸಿರುವುದು ತನಿಖೆಯಿಂದ ಸಾಬೀತಾಗಿದೆ ಎಂದು ಸಿಸಿಬಿ ಪೊಲೀಸರು ಕೋರ್ಟ್‍ಗೆ ದೋಷಾರೋಪಣೆ ಪಟ್ಟಿ ಸಲ್ಲಿಕೆ ಮಾಡಿದ್ದರು. 

ಏನಿದು ಘಟನೆ: ಕಳೆದ ವರ್ಷ ನವೆಂಬರ್ 18ರ ರಾತ್ರಿ ಸಮಯದಲ್ಲಿ ಮೈಸೂರಿನ ಬನ್ನಿಮಂಟಪದಲ್ಲಿ ಮಾಜಿ ಸಚಿವ ತನ್ವೀರ್ ಸೇಠ್ ಮೇಲೆ ಕೊಲೆ ಯತ್ನ ನಡೆದಿತ್ತು. ತನ್ವೀರ್ ಸೇಠ್ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿದ್ದಾಗ, ಈ ಘಟನೆ ನಡೆದಿತ್ತು.

ಅವರ ಕುತ್ತಿಗೆ ಭಾಗಕ್ಕೆ ತೀವ್ರ ಪೆಟ್ಟು ಬಿದ್ದಿತ್ತು. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ತನ್ವೀರ್ ಸೇಠ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ಕಳುಹಿಸಲಾಗಿತ್ತು. ಕೆಲವು ದಿನಗಳ ಬಳಿಕ ಸಂಪೂರ್ಣವಾಗಿ ಚಿಕಿತ್ಸೆ ಪಡೆದು ಭಾರತಕ್ಕೆ ಮರಳಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News