ಪಾದರಾಯನಪುರ ಗಲಾಟೆ: ಹಜ್ ಭವನದಿಂದ 126 ಆರೋಪಿಗಳು ಬಿಡುಗಡೆ

Update: 2020-06-03 14:53 GMT

ಬೆಂಗಳೂರು, ಜೂ.3: ಪಾದರಾಯನಪುರದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಬಂಧಿತರಾಗಿದ್ದ 126 ಆರೋಪಿಗಳು, ಜಾಮೀನು ಪಡೆದು ಬುಧವಾರ ಹಜ್ ಭವನದಿಂದ ಬಿಡುಗಡೆಯಾಗಿದ್ದಾರೆ.

ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡಿದ ನಂತರ ಅವರಿಗೆ ಹಳೆ ಗುಡ್ಡದಹಳ್ಳಿ ಬಳಿಯ ಹಜ್ ಭವನದಲ್ಲಿ ಆಶ್ರಯ ಒದಗಿಸಲಾಗಿತ್ತು. ಕೊರೋನ ಸೋಂಕು ಲಕ್ಷಣದ ಪರೀಕ್ಷೆಯ ನಂತರ ಹಜ್ ಭವನದಿಂದ ಬಿಡುಗಡೆ ಮಾಡಲಾಗಿದೆ.

ಈ ವೇಳೆ ಶಾಸಕ ಝಮೀರ್ ಅಹ್ಮದ್ ಆರೋಪಿಗಳಿಗೆ ಸ್ವಾಗತ ಕೋರಿದ್ದಾರೆ. ಆರೋಪಿಗಳು ಹಜ್ ಭವನದಿಂದ ಬರುವುದನ್ನು ತಿಳಿದು ಸ್ಥಳಕ್ಕೆ ಆಗಮಿಸಿದ ಅವರು ಆರೋಪಿಗಳಿಗೆ ಸ್ಯಾನಿಟೈಸರ್, ಹಣ ಮತ್ತು ಬಸ್ಸುಗಳ ವ್ಯವಸ್ಥೆ ಮಾಡಿ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಝಮೀರ್ ಅಹ್ಮದ್ ಅವರ ಜೊತೆಗೆ ಅನೇಕ ಮಂದಿ ಆರೋಪಿಗಳ ಸ್ವಾಗತಕ್ಕೆ ಜಮಾಯಿಸಿದ್ದರು. ಆದರೆ ಆರೋಪಿಗಳಿಗೆ ಶಾಸಕ ಝಮೀರ್ ಸ್ವಾಗತ ಕೋರಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆಗೆ ಗುರಿಯಾಗಿದೆ. 

ಪ್ರಕರಣದ ಹಿನ್ನೆಲೆ: ಪಾದರಾಯನಪುರ ಬಳಿ ಬಿಬಿಎಂಪಿ ಸಿಬ್ಬಂದಿ ಹಾಗೂ ಆರೋಗ್ಯಾಧಿಕಾರಿಗಳು ಕೊರೋನ ಸೋಂಕಿತನ ಸಂಪರ್ಕದಲ್ಲಿದ್ದ 58 ಜನರನ್ನ ಕ್ವಾರಂಟೈನ್ ಮಾಡಲು ಕರೆದುಕೊಂಡು ಬರುತ್ತಿದ್ದರು. ಈ ವೇಳೆ ಉದ್ರಿಕ್ತರ ಗುಂಪು ಗಲಾಟೆ ನಡೆಸಿ ಸೀಲ್‍ಡೌನ್‍ಗೆ ಅಳವಡಿಸಿದ್ದ ಬ್ಯಾರಿಕೇಡ್ ಕಿತ್ತು ಬಿಸಾಡಿದ್ದರು. ಈ ಘಟನೆ ನಡೆದ ಬಳಿಕ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸಿದ ಪೊಲೀಸರು ಅವರನ್ನು ಜೈಲಿಗೆ ಕಳುಹಿಸಿದ್ದರು. ಸದ್ಯ ಜಾಮೀನು ಮಂಜೂರು ಹಿನ್ನೆಲೆ ಆರೋಪಿಗಳು ಬಿಡುಗಡೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News