ಸಹೋದರನ ಹತ್ಯೆಗೆ ಸುಪಾರಿ ನೀಡಿದ ಆರೋಪ: ಮಹಿಳೆ ಸೇರಿ ಐವರ ಬಂಧನ

Update: 2020-06-03 15:51 GMT

ಬೆಂಗಳೂರು, ಜೂ.3: ಕಾರಾಗೃಹದಲ್ಲಿರುವ ಪತಿಯನ್ನು ಜಾಮೀನಿನ ಮೇಲೆ ಹೊರತರಲು ಹಣ ಕೊಟ್ಟಿಲ್ಲವೆಂದು, ಸಹೋದರನ ಹತ್ಯೆಗೆ ಸಂಚು ರೂಪಿಸಿ, ಸುಪಾರಿ ಕೊಟ್ಟಿದ್ದ ಆರೋಪದಡಿ ಮಹಿಳೆ ಸೇರಿ ಐವರನ್ನು ಇಲ್ಲಿನ ಯಲಹಂಕ ಠಾಣಾ ಪೊಲೀಸರು ಬಂಧಿಸಿದ್ದಾರೆ.

ನಗರದ ದೊಡ್ಡಗುಬ್ಬಿ ನಿವಾಸಿ ಸುಮಲತಾ ಎಂಬಾಕೆ ಪ್ರಮುಖ ಆರೋಪಿಯಾಗಿದ್ದು, ಈಕೆಯೊಂದಿಗೆ ಮಂಜುನಾಥ, ಗೌತಮ್, ವಿನಯ್ ನಾಯಕ್ ಹಾಗೂ ಮೌಲಾ ಅಲಿಖಾನ್ ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಸುಮಲತಾ ಸಹೋದರ ಸಂದೀಪ್ ರೆಡ್ಡಿ ಎಂಬವರ ಮೇಲೆ ದುಷ್ಕರ್ಮಿಗಳು ಮೇ 29ರಂದು ಗಂಭೀರ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ.

ಬಾಗೇಪಲ್ಲಿ ಮೂಲದ ಸಂದೀಪ್ ರೆಡ್ಡಿ ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಾಯಿ ಜೊತೆಗೆ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ. ಜೀವನ ಸಾಗಿಸಲು ಹೂವಿನ ವ್ಯಾಪಾರ ಮಾಡುತ್ತಿದ್ದ. ಈ ಮಧ್ಯೆ ಸುಮಲತಾ, ಪತಿಯ ಬಿಡುಗಡೆಗಾಗಿ ಆಸ್ತಿಯಲ್ಲಿ ಪಾಲು ಕೇಳಿ ಜಗಳ ಮಾಡಿದ್ದಾಳೆ. ಇದನ್ನು ನೀಡಲು ನಿರಾಕರಿಸಿದ ತಮ್ಮನ ಕೊಲೆಗೆ ಸುಪಾರಿ ನೀಡಿರುವುದಾಗಿ ತಿಳಿದುಬಂದಿದೆ.

ಕುಖ್ಯಾತ ರೌಡಿಶೀಟರ್ ಕ್ಯಾಟ್ ರಾಜ ಹಾಗೂ ಮಹಿಳಾ ಆರೋಪಿ ಸುಮಲತಾ ಇಬ್ಬರು ದಂಪತಿಯಾಗಿದ್ದು, ಪತಿಯನ್ನು ಜಾಮೀನಿನ ಮೇಲೆ ಹೊರತರಲು ಹಣದ ಅಭಾವ ಇದ್ದ ಕಾರಣ ಈ ಕೃತ್ಯವೆಸಗಿದ್ದಾಳೆ. ಬೆಂಗಳೂರು ನಗರವೊಂದರಲ್ಲೇ ಕ್ಯಾಟ್ ರಾಜನ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ 28 ಪ್ರಕರಣಗಳಿವೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News