ಶಾಲೆಗಳ ಪುನರಾರಂಭಕ್ಕಾಗಿ ಸರಕಾರ ಖಾಸಗಿ ಲಾಬಿಗೆ ಮಣಿದಿಲ್ಲ: ಸಚಿವ ಸುರೇಶ್‍ ಕುಮಾರ್

Update: 2020-06-03 17:21 GMT

ಬೆಂಗಳೂರು, ಜೂ.3: ರಾಜ್ಯದಲ್ಲಿ ಶಾಲೆಗಳ ಪುನರಾರಂಭ ಕುರಿತು ಆರೋಗ್ಯಕರ ಚರ್ಚೆ ನಡೆಯುತ್ತಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಆದರೆ, ಸರಕಾರ ಖಾಸಗಿ ಲಾಬಿ ಹಾಗೂ ಪ್ರಭಾವಕ್ಕೆ ಮಣಿದಿದೆ ಎಂಬಂತೆ ಬಿಂಬಿತವಾಗಿರುವುದು ದುರ್ದೈವದ ಸಂಗತಿಯೆಂದು ಶಿಕ್ಷಣ ಸಚಿವ ಸುರೇಶ್‍ ಕುಮಾರ್ ತಿಳಿಸಿದ್ದಾರೆ.

ಕೇಂದ್ರ ಸರಕಾರದ ನಿರ್ದೇಶನದಂತೆ ಜೂ.10, 11 ಹಾಗೂ 12ರಂದು ರಾಜ್ಯದ ಎಲ್ಲ ಶಾಲೆಗಳಲ್ಲಿ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ಪೋಷಕರ ಸಭೆ ಕರೆದು ಶಾಲಾ ಪ್ರಾರಂಭದ ದಿನಾಂಕ, ವಿದ್ಯಾರ್ಥಿಗಳ ನಡುವೆ ಸುರಕ್ಷಿತ ಅಂತರ ಸೇರಿದಂತೆ ಶಾಲೆಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲು ತಯಾರಿ ನಡೆಸಿಕೊಳ್ಳಲಾಗಿದೆ.

ಮಕ್ಕಳ ಕುರಿತ ಪೋಷಕರ ಕಾಳಜಿಯನ್ನು ನಾನು ಸಂಪೂರ್ಣವಾಗಿ ಅರಿತಿದ್ದೇನೆ. ಮತ್ತು ಆ ಕಾಳಜಿಗೆ ಅಗತ್ಯ ಮನ್ನಣೆ ನೀಡುತ್ತೇನೆ. ಮಕ್ಕಳಿಗೆ ಹಾಗೂ ಪೋಷಕರಿಗೆ ಯಾವುದೇ ತೊಂದರೆಯಾಗುವಂತಹ ಯಾವುದೇ ನಿರ್ಧಾರವನ್ನು ಕೈಗೊಳ್ಳುವುದಿಲ್ಲ. ಹೀಗಾಗಿ ಶಾಲೆಗಳನ್ನು ತರಾತುರಿಯಲ್ಲಿ ಪ್ರಾರಂಭ ಮಾಡುವ ಯಾವುದೇ ನಿರ್ಧಾರವನ್ನು ರಾಜ್ಯ ಸರಕಾರ ಕೈಗೊಳ್ಳುವುದಿಲ್ಲವೆಂದು ಅವರು ಪ್ರಕಟನೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News