ಎಇಸಿ ಕಂಪೆನಿಯಿಂದ ಕಾರ್ಮಿಕರಿಗೆ ವಂಚನೆ ಆರೋಪ: ಪ್ರೊ.ಎಂಡಿಎನ್ ಯುವಸೇನೆಯಿಂದ ಪ್ರತಿಭಟನೆ

Update: 2020-06-03 16:34 GMT

ಬೆಂಗಳೂರು, ಜೂ.3: ಮಕ್ಕಳ ಆಟಿಕೆ ವಸ್ತುಗಳನ್ನು ತಯಾರಿಸುವ ಎಇಸಿ ಸ್ಟೇಷನರಿ(ಇಟ್ಸಿಬಿಟ್ಸಿ) ಕಂಪೆನಿಯ ಮಾಲಕ, ತನ್ನ ಕಂಪೆನಿಯ ಕಾರ್ಮಿಕರಿಗೆ ಸಂಬಳ ಹಾಗೂ ಪಿಎಫ್ ಹಣ ಕೊಡದೆ ಕಂಪೆನಿಯನ್ನು ಬಂದ್ ಮಾಡಿದ್ದಾನೆಂದು ಆರೋಪಿಸಿ ಪ್ರೊ.ಎಂಡಿಎನ್ ಯುವ ಸೇನೆ ಕಾರ್ಯಕರ್ತರು ಕಂಪೆನಿಯ ಮುಂಭಾಗ ಪ್ರತಿಭಟನೆ ನಡೆಸಿದರು.

ನಗರದ ಕೋಣನಕುಂಟೆಯಲ್ಲಿರುವ ಎಇಸಿ ಸ್ಟೇಷನರಿ ಕಂಪೆನಿಯ ಮಾಲಕ ಹರೀಶ್, ತನ್ನ ಕಾರ್ಮಿಕರಿಗೆ ಕಳೆದ ಮೂರು ತಿಂಗಳಿನಿಂದ ಸಂಬಳ ಕೊಡದೆ, ಪಿಎಫ್ ಹಣಕ್ಕೂ ವ್ಯವಸ್ಥೆ ಮಾಡದೆ ಸುಮಾರು 430 ಕಾರ್ಮಿಕರನ್ನು ಬೀದಿಗೆ ತಳ್ಳಿದ್ದಾನೆ. ಈತನ ವಿರುದ್ಧ ಕಾರ್ಮಿಕರ ಇಲಾಖೆ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಕಾರ್ಮಿಕರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಎಂಡಿಎನ್ ಯುವ ಸೇನೆಯ ಅಧ್ಯಕ್ಷ ಲಿಂಗದಹಳ್ಳಿ ಚೇತನ್‍ ಕುಮಾರ್ ಒತ್ತಾಯಿಸಿದ್ದಾರೆ.

ಎಇಸಿ ಕಂಪೆನಿಯ ಹಿನ್ನೆಲೆ: ಈ ಕಂಪೆನಿಯ ಮಾಲಕ ಹರೀಶ್ ಎಂಬುವವರು ಎಇಸಿ ಸ್ಟೇಷನರಿ ಕಂಪೆನಿಯನ್ನು ಟ್ರಸ್ಟ್ ಹೆಸರಿನಲ್ಲಿ ನೋಂದಾಯಿಸಿಕೊಂಡು, ಬಡವರಿಗೆ, ನಿರ್ಗತಿಕರಿಗೆ ಕೆಲಸ ಕೊಡುತ್ತಿದ್ದೇನೆಂದು ನಂಬಿಸಿ ಅಮೆರಿಕಾ ಮೂಲದ ಕಂಪೆನಿಯಿಂದ ಕೋಟ್ಯಂತರ ರೂ. ಹಣ ಪಡೆಯುತ್ತಾ ಬಂದಿದ್ದಾನೆ. ಆದರೆ, ಈತ ತನ್ನ ಕಂಪೆನಿಯಿಂದ ತಯಾರಿಸಿದ ಮಕ್ಕಳ ಆಟಿಕೆಗಳನ್ನು ರಾಜ್ಯದ ವಿವಿಧೆಡೆ 20ಕ್ಕೂ ಹೆಚ್ಚು ಬೃಹತ್ ಸ್ಟೇಷನರಿ ಅಂಗಡಿಗಳನ್ನು ಇಟ್ಟು ವರ್ಷಕ್ಕೆ ಕೋಟ್ಯಂತರ ರೂ.ಲಾಭ ಗಳಿಸುತ್ತಿದ್ದಾನೆಂದು ಅವರು ಆರೋಪಿಸಿದ್ದಾರೆ.

ಎಇಸಿ ಸ್ಟೇಷನರಿ ಕಂಪೆನಿಯ ಕಾರ್ಮಿಕರಿಗೆ ತಿಂಗಳಿಗೆ ಕೇವಲ 7,335 ರೂ.ಮಾತ್ರ ಸಂಬಳ ಕೊಡಲಾಗುತ್ತಿದೆ. ಓಟಿ(ಹೆಚ್ಚಿನ ಸಮಯ)ಗೆ ಒಂದು ಗಂಟೆಗೆ ಕೇವಲ 30 ರೂ. ಮಾತ್ರ ಇದೆ. ಹೀಗೆ ಟ್ರಸ್ಟ್ ಹೆಸರಿನಲ್ಲಿ ಕಾರ್ಮಿಕರನ್ನು ಹಾಗೂ ಅಮೆರಿಕಾ ಮೂಲದ ಕಂಪೆನಿಯನ್ನು ವಂಚನೆ ಮಾಡಿ ಐಶಾರಾಮಿ ಜೀವನ ನಡೆಸುತ್ತಿರುವ ಎಇಸಿ ಕಂಪೆನಿಯ ಮಾಲಕ ಹರೀಶ್‍ನ್ನು ಕೂಡಲೇ ಬಂಧಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಎಇಸಿ ಸ್ಟೇಷನರಿ ಕಂಪೆನಿಯನ್ನು ಟ್ರಸ್ಟ್ ಹೆಸರಿನಲ್ಲಿ ಸ್ಥಾಪಿಸಿರುವ ಹರೀಶ್, ಬಡ ಕಾರ್ಮಿಕರಿಂದ ಕಡಿಮೆ ಸಂಬಳಕ್ಕೆ ದುಡಿಸಿಕೊಂಡಿದ್ದಾನೆ. ಈ ಕಂಪೆನಿಯಲ್ಲಿ ಕೆಲಸ ಮಾಡುವಾಗಲೇ ಹಲವು ಕಾರ್ಮಿಕರಿಗೆ ಕೈ ಬೆರಳುಗಳು ಕತ್ತರಿಸಲ್ಪಟ್ಟಿವೆ. ಇದಕ್ಕೆ ಯಾವುದೇ ಪರಿಹಾರ ಕೊಡದೆ ವಂಚನೆ ಮಾಡುತ್ತಾ ಬಂದಿದ್ದಾನೆ. ಈಗ ಏಕಾಏಕಿ ಕಂಪೆನಿಯನ್ನೆ ಮುಚ್ಚಿ ಕಳೆದ ಹತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಸಂಬಳ ಹಾಗೂ ಪಿಎಫ್ ಹಣ ನೀಡದೆ ವಂಚನೆ ಮಾಡಲಾಗಿದೆ.

-ಚೇತನ್‍ ಕುಮಾರ್, ಅಧ್ಯಕ್ಷ, ಪ್ರೊ.ಎಂಡಿಎನ್ ಯುವ ಸೇನೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News