ಅಂತರ್ಜಲ ವೃದ್ಧಿಗೆ 'ಅಟಲ್ ಭೂಜಲ್' ಯೋಜನೆ ಅನುಷ್ಠಾನ: ಸಚಿವ ಮಾಧುಸ್ವಾಮಿ

Update: 2020-06-03 16:43 GMT

ಬೆಂಗಳೂರು, ಜೂ. 3: ತೀವ್ರ ಸ್ವರೂಪದ ಅಂತರ್ಜಲ ಕುಸಿತ ಕಂಡಿರುವ ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಸೇರಿದಂತೆ ರಾಜ್ಯದ 14 ಜಿಲ್ಲೆಗಳ 41 ತಾಲೂಕುಗಳಲ್ಲಿ ಅಂತರ್ಜಲ ವೃದ್ಧಿಸಲು 'ಅಟಲ್ ಭೂಜಲ್ ಯೋಜನೆ' ಅನುಷ್ಠಾನಕ್ಕೆ ಕ್ರಮ ವಹಿಸಲಾಗುತ್ತಿದೆ ಎಂದು ಸಣ್ಣ ನೀರಾವರಿ ಹಾಗೂ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರದ ನೆರವಿನೊಂದಿಗೆ ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ಇನ್ನಿತರ ಯೋಜನೆಗಳ ಅನುದಾನ ಬಳಕೆ ಮಾಡಿಕೊಂಡು, ಹಳ್ಳ, ಕೊಳ್ಳ, ಕೆರೆ, ಕಟ್ಟೆಗಳನ್ನು ತುಂಬಿಸುವ ಮೂಲಕ ಅಂತರ್ಜಲ ಮರುಪೂರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು.

ರಾಜ್ಯದ 14 ಜಿಲ್ಲೆಗಳ 41 ತಾಲೂಕುಗಳ 1,199 ನೀರಿನ ಶೋಷಿತ ಗ್ರಾಮ ಪಂಚಾಯತ್ ಗಳನ್ನು ಗುರುತಿಸಲಾಗಿದ್ದು, ಈ ಪ್ರದೇಶಗಳಲ್ಲಿ ಅಂತರ್ಜಲ ವೃದ್ಧಿಗೆ 1,203 ಕೋಟಿ ರೂ.ಗಳನ್ನು ಕೇಂದ್ರ ಸರಕಾರ ಒದಗಿಸಿದ್ದು, ನಾಲ್ಕು ವರ್ಷಗಳಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ತರಲಾಗುವುದು ಎಂದು ಅವರು ತಿಳಿಸಿದರು.

ಉದ್ದೇಶಿತ ಯೋಜನೆಯಡಿ ಮಳೆ ನೀರು ಇಂಗಿಸಲು ಇಂಗು ಗುಂಡಿಗಳ ನಿರ್ಮಾಣ, ಚೆಕ್ ಡ್ಯಾಮ್, ಕೃಷಿ ಹೊಂಡ, ಕೆರೆಗಳನ್ನು ತುಂಬಿಸುವುದರ ಜೊತೆಗೆ ನೀರಿನ ಮಿತ ಬಳಕೆ, ಮರುಪೂರಣ ಹಾಗೂ ನೀರಿನ ಸದ್ಬಳಕೆ ಸಂಬಂಧ ಜಾಗೃತಿ ಮೂಡಿಸಲಾಗುವುದು ಎಂದ ಅವರು, ಗ್ರಾಮೀಣ ಪ್ರದೇಶಗಳ ಭೂಗರ್ಭದಲ್ಲಿ ನೀರಿನ ಪ್ರಮಾಣವನ್ನು ಹೆಚ್ಚಿಸಲಾಗುವುದು ಎಂದರು.

ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ, ಬಳ್ಳಾರಿ, ಗದಗ, ಬಾಗಲಕೋಟೆ, ಹಾಸನ ಹಾಗೂ ಬೆಳಗಾವಿ ಜಿಲ್ಲೆಯ 41 ತಾಲೂಕುಗಳನ್ನು ಗುರುತಿಸಲಾಗಿದೆ. ಅಂತರ್ಜಲ ವೃದ್ಧಿಸುವ ನಿಟ್ಟಿನಲ್ಲಿ ಅರಣ್ಯೀಕರಣ, ನೀರಾವರಿ ಪ್ರದೇಶದ ಹೆಚ್ಚಳ ಸೇರಿದಂತೆ ನೀರಿನ ಸಂರಕ್ಷಣೆ ಎಲ್ಲರೂ ಆಸ್ಥೆ ವಹಿಸಬೇಕಿದೆ ಎಂದರು.

ರಾಜ್ಯದಲ್ಲಿ ಹೂಳು ತುಂಬಿರುವ ಕೆರೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಹೂಳು ತೆಗೆಯಲು ಕ್ರಮ ವಹಿಸಲಾಗಿದೆ. ಆದರೆ, ಹೂಳು ತೆಗೆದು ಅದನ್ನು ಎಲ್ಲಿಗೆ ಸಾಗಿಸಬೇಕೆಂಬುದು ದೊಡ್ಡ ಸಮಸ್ಯೆಯಾಗಿದೆ ಎಂದ ಅವರು, ಬೆಂಗಳೂರಿನ ಬೆಳ್ಳಂದೂರು ಕೆರೆ ಹೂಳು ತಕ್ಷಣವೇ ತೆಗೆಯಬೇಕೆಂದು ರಾಷ್ಟ್ರೀಯ ಹಸಿರು ಪೀಠ ಆದೇಶ ನೀಡಿದ್ದು, ಕೆರೆ ಹೂಳನ್ನು ಹೊರಗೆ ಸಾಗಿಸುವುದು ದುಸ್ತರವಾಗಿದೆ ಎಂದು ಹೇಳಿದರು.

ತ್ಯಾಜ್ಯ ನೀರು ಸಂಸ್ಕರಣೆ: ಬೆಂಗಳೂರು ನಗರದಲ್ಲಿ 18 ಟಿಎಂಸಿಯಷ್ಟು ತ್ಯಾಜ್ಯ ನೀರು ವ್ಯರ್ಥ ವಾಗುತ್ತಿದ್ದು, ಆ ಪೈಕಿ ಕೇವಲ 4ಟಿಎಂಸಿಯಷ್ಟು ನೀರನ್ನು ಸಂಸ್ಕರಣೆ ಮಾಡಿ ಬಳಕೆ ಮಾಡಲಾಗುತ್ತಿದೆ. ಇನ್ನೂ 10ಟಿಎಂಸಿಯಷ್ಟು ನೀರನ್ನು ಸಂಸ್ಕರಣೆ ಮಾಡಿ ಕೆರೆ ತುಂಬಿಸಲು ಒದಗಿಸುವುದರಿಂದ ಅಂತರ್ಜಲ ವೃದ್ಧಿಗೆ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.

ಬಿಜೆಪಿಯಲ್ಲಿ ಯಾವುದೇ ಭಿನ್ನಮತವಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಆನೆ ಇದ್ದಂತೆ. ಯಾರೋ ಒಂದಿಬ್ಬರು ಸಭೆ ಮಾಡಿದ ಕೂಡಲೇ ಅದು ಬಂಡಾಯ ಎಂದು ಹೇಳಲಾಗುವುದಿಲ್ಲ. ಬಿಎಸ್ ವೈ ನಮ್ಮ ಪ್ರಶ್ನಾತೀತ ನಾಯಕ. ಹೀಗಾಗಿ ನಾಯಕತ್ವ ಬದಲಾವಣೆಯ ಪ್ರಶ್ನೆ ಉದ್ಬವಿಸದು. ನಾವು ಯಡಿಯೂರಪ್ಪನವರ ಪರ ಹೊಸದಿಲ್ಲಿಗೆ ಹೋಗ್ತೀವಿ

-ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News