ಯಾರ ಸಂಪರ್ಕವೂ ಇಲ್ಲದೆ ಪ್ರಯಾಣಕ್ಕೆ ಅವಕಾಶ: ಕೊರೋನ ತಡೆಗೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸುರಕ್ಷತಾ ಕ್ರಮ

Update: 2020-06-03 17:19 GMT

ಬೆಂಗಳೂರು, ಜೂ.3: ಬೆಂಗಳೂರಿನ ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೋವಿಡ್-19 ತಡೆಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಯಾರ ಸಂಪರ್ಕವೂ ಇಲ್ಲದೆ ವಿಮಾನ ಪ್ರಯಾಣಕ್ಕೆ ಅವಕಾಶ ಮಾಡಿಕೊಡುವ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ.

ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪರೀಕ್ಷೆಗೆ ಸ್ವಯಂಚಾಲಿತ ಕಿಯೋಸ್ಕ್ ಗಳನ್ನು ಅಳವಡಿಸಲಾಗಿದ್ದು, ಪ್ರಯಾಣಿಕರು ತಾವೇ ಸ್ವತಃ ಈ ಕಿಯೋಸ್ಕ್ ಗಳ ಮೂಲಕ ತಪಾಸಣೆಗೆ ಒಳಗಾಗಬಹುದಾಗಿದೆ. ಈ ತಪಾಸಣೆಗೆ ಒಳಗಾಗಿ ವಿಮಾನ ನಿಲ್ದಾಣವನ್ನು ಪ್ರವೇಶಿಸಬಹುದಾಗಿದೆ. ಹಾಗೆಯೇ ಪ್ರವೇಶ ದ್ವಾರಗಳಲ್ಲಿ ಥರ್ಮಲ್ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ತಾವೇ ಸ್ವಯಂ ಲಗೇಜ್‍ಗಳನ್ನು ಹಾಕಲು ಅವಕಾಶ ಕಲ್ಪಿಸಿಕೊಡಲಾಗಿದೆ. ಈ ಮೂಲಕ ಆದಷ್ಟು ಪ್ರಯಾಣಿಕರು ಬೇರೆ ವ್ಯಕ್ತಿಗಳ ಸಂಪರ್ಕಕ್ಕೆ ಬಾರದಂತೆ ಎಚ್ಚರ ವಹಿಸಲಾಗಿದೆ.

ಈ ಮೊದಲು ಪ್ರಯಾಣಿಕರನ್ನು ಭದ್ರತಾ ಸಿಬ್ಬಂದಿಗಳೇ ತಪಾಸಣೆ ಮಾಡುತ್ತಿದ್ದರು. ಇದರಿಂದ ಒಬ್ಬರಿಗೊಬ್ಬರು ಸಂಪರ್ಕಕ್ಕೆ ಬರುತ್ತಿದ್ದರು. ಇದನ್ನು ತಪ್ಪಿಸಲು ಸ್ವಯಂಚಾಲಿತ ತಪಾಸಣಾ ಕಿಯೋಸ್ಕ್ ಗಳನ್ನು ಅಳವಡಿಸಲಾಗಿದೆ. ಹಾಗೆಯೇ ಪ್ರತಿ ಪ್ರಯಾಣಿಕರಿಗೂ ಸ್ಯಾನಿಟೈಸರ್ ಗಳನ್ನು ಒದಗಿಸಲಾಗಿದೆ.

ವಿಮಾನ ನಿಲ್ದಾಣಕ್ಕೆ ಬರುವ ಟ್ಯಾಕ್ಸಿಗಳನ್ನು ಸ್ಯಾನಿಟೈಸ್ ಮಾಡಲಾಗುತ್ತಿದ್ದು, ಚಾಲಕರನ್ನು ಸಹ ಪ್ರತಿ ಟ್ರಿಪ್‍ನ ನಂತರ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಈ ಮೂಲಕ ಕೋವಿಡ್-19 ಸೋಂಕು ಹರಡದಂತೆ ಎಚ್ಚರ ವಹಿಸಲಾಗುತ್ತಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.

ಟ್ಯಾಕ್ಸಿ ಚಾಲಕರಿಗೂ ಪ್ರಯಾಣಿಕರಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳುವಂತೆ ಮಾಸ್ಕ್ ಧರಿಸುವಂತೆ ಹಾಗೂ ಹ್ಯಾಂಡ್ ಸ್ಯಾನಿಸಟೈಸರ್ ಬಳಸುವಂತೆಯೂ ಸೂಚನೆ ನೀಡಲಾಗಿದೆ. ಪ್ರಯಾಣಿಕರಿಗೂ ಸಹ ಲಗೇಜ್‍ಗಳನ್ನು ಚಾಲಕರ ನೆರವಿಲ್ಲದೆ ತಾವೇ ಸ್ವತಃ ಕಾರಿಗೆ ತುಂಬುವಂತೆ ಸಲಹೆ ಮಾಡಲಾಗಿದೆ.

ಹಿರಿಯ ನಾಗರಿಕರಿಗೆ ಮಾತ್ರ ಚಾಲಕರು ಸುರಕ್ಷಿತ ಕ್ರಮಗಳನ್ನು ಬಳಸಿಕೊಂಡು ಲಗೇಜ್ ಕಾರಿಗೆ ಹಾಕಲು ಅವರನ್ನು ಕಾರಿನಿಂದ ಇಳಿಯಲು, ಹತ್ತಲು ನೆರವು ನೀಡುತ್ತಿದ್ದಾರೆ. ವಿಮಾನ ನಿಲ್ದಾಣಕ್ಕೆ ಬರುವ ಪ್ರತಿಯೊಬ್ಬ ಪ್ರಯಾಣಿಕರಿಗೂ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಹಾಗೆಯೇ ಕಾರು ಚಾಲಕರೂ ಸಹ ಮಾಸ್ಕ್ ಧರಿಸುವುದು ಕಡ್ಡಾಯ ಮಾಡಲಾಗಿದೆ.

ವಿಮಾನ ನಿಲ್ದಾಣದ ಒಳಗೂ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಬೋರ್ಡಿಂಗ್ ಪಾಸ್ ವಿತರಣೆ ಸೇರಿದಂತೆ ಎಲ್ಲ ಕಡೆಯೂ ಸುರಕ್ಷಿತ ವಿಧಾನಗಳನ್ನು ಅಳವಡಿಸಲಾಗಿದೆ ಎಂದು ಬೆಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News