ಮೈಸೂರು ಸಂಸ್ಥಾನದ ಮಹಾಚೇತನ ನಾಲ್ವಡಿ ಕೃಷ್ಣರಾಜ ಒಡೆಯರ್

Update: 2020-06-03 17:54 GMT
Image Credits: Star Of Mysore

ಮಹಾಚೇತನಗಳ ಮರ್ಮ: ಅಂಬೇಡ್ಕರ್ ರವರ ಓದು-ಬರಹ ದೇಶದ ಗಡಿಯಾಚೆಗಿನ ಅವರ ಓದು ಪದವಿಗಳು ಭಾರತದ ಸಂವಿಧಾನ ರಚನೆಯ ಕರ್ತೃವನ್ನಾಗಿಸಿತು. ಅದೇ ರೀತಿ ನಾಲ್ವಡಿಯವರು ಅರಮನೆಯೊಳಗಿನ ರಾಜೋಚಿತ ವಿದ್ಯೆ, ಅದರಿಂದಾಚೆಗಿನ ಆಧುನಿಕ ವಿದ್ಯೆ, ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಮೊದಲ ಕುಲಪತಿಗಳಾಗಿ ಸೇವೆ, ಆ ಸಂಸ್ಥೆಯಿಂದಲೇ ಡಾಕ್ಟರೇಟ್ ಪದವಿ ಪುರಸ್ಕಾರ ನಾಲ್ವಡಿಯವರ ಹಿರಿಮೆ.

ಸಂಸ್ಥಾನದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನಿರಂತರ ಪ್ರವಾಸ, ಜಾತಿ ಬೇಧ ತಾರತಮ್ಯವಿಲ್ಲದೆ ಜನರ ಕಷ್ಟಸುಖಗಳನ್ನು ಕೇಳುವುದು, ಪರಿಹಾರ ಸೂಚಿಸುವುದು ಅವರನ್ನೊಬ್ಬ ಮಾನವೀಯ ಪ್ರತಿಪಾದಕರನ್ನಾಗಿಸಿತು. ಸ್ವಾತಂತ್ರ್ಯ ಪೂರ್ವದಲ್ಲಿ ನಾಲ್ವಡಿಯವರು ಮೈಸೂರಿನ ಜನತೆಗೆ ಆಶಾಕಿರಣವಾದರೆ, ಸ್ವಾತಂತ್ರ್ಯ ನಂತರದ ಭಾರತವನ್ನು ಅಂಬೇಡ್ಕರ್ ರವರು ಸಂವಿಧಾನದಲ್ಲಿ ಕಟ್ಟಿಹಾಕಿ ಏಕತೆ ಮೆರೆಯುತ್ತಾರೆ. ಸಾಮಾಜಿಕ ಕಾರ್ಯದ ದೃಷ್ಟಿಯಿಂದ ಇವರಿಬ್ಬರನ್ನು ಮೈಸೂರಿನ ಜನತೆ, ಅದರಲ್ಲೂ ಶೋಷಿತರು ನೆನಪಿಸಿಕೊಳ್ಳುವ ಮಹಾಚೇತನಗಳು.

ಮುಮ್ಮಡಿ ಕೃಷ್ಣರಾಜರಂತೆ ನಾಲ್ವಡಿಕೃಷ್ಣರಾಜ ಒಡೆಯರ್ ರವರು ಪಟ್ಟಾಭಿಷೇಕ್ತರಾದಾಗ ಕೇವಲ 10 ವರ್ಷದ ಬಾಲಕರಾಗಿದ್ದರು. ದಿನಾಂಕ; 01-02-1895ರಲ್ಲಿ ಪಟ್ಟಾಭಿಷೇಕರಾದಾಗ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಕೇವಲ 10 ವರ್ಷದ ಬಾಲಕ. ಜೂನ್, 04, 1884 ನಾಲ್ವಡಿ ಕೃಷ್ಣರಾಜರ ಜನನ. ಮುಮ್ಮಡಿಯವರ ರಾಜ್ಯಭಾರ ಹೊರಲು ಪೂರ್ಣಯ್ಯನವರು ಇದ್ದರು. ನಾಲ್ವಡಿ ಕೃಷ್ಣರಾಜ ರಾಯಭಾರ ಮುನ್ನಡೆಸಲು ತಾಯಿ ರಾಜಮಾತೆ ಕೆಂಪನಂಜಮ್ಮಣ್ಣಿ ಬೆನ್ನೆಲುಬಾಗುತ್ತಾರೆ. 

ನ್ಯಾಯವಿಧೇಯಕ ಸಭೆ
ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ನಿಜವಾಗಿ ರಾಜ್ಯಭಾರ ವಹಿಸಿಕೊಂಡಿದ್ದು 1902ರಲ್ಲಿ. ತಂದೆ 10ನೇ ಚಾಮರಾಜ ಒಡೆಯರ್ ರವರು 1882ರಲ್ಲಿ ಸ್ಥಾಪಿಸಿದ ಪ್ರಜಾಪ್ರತಿನಿಧಿ ಸಭೆಯ ಮುಂದುವರಿದ ಭಾಗವಾಗಿ 22-01-1907ರಲ್ಲೇ ನ್ಯಾಯವಿಧೇಯಕ ಸಭೆಯನ್ನು ಸ್ಥಾಪಿಸಿ ನ್ಯಾಯದಾನಕ್ಕೆ ಮುಂದಾದರು. ಭಾರತದ ರಾಜಮಹಾರಾಜರುಗಳ ರಾಜ್ಯ ಮತ್ತು ಸಾಮ್ರಾಜ್ಯಭಾರ ವ್ಯವಸ್ಥೆಯಲ್ಲಿಯೇ ಮೈಸೂರಿನ ಪ್ರಜಾಪ್ರತಿನಿಧಿ ಸಭೆಯೇ ಮೊದಲು.  ಹಿಂದುಳಿದವರಿಗೂ, ದಲಿತರಿಗೂ ಹಾಗೂ ಸ್ತ್ರೀಯರಿಗೂ ಮತದಾನದ ಹಕ್ಕು ಲಭಿಸಿದ್ದು ಇವರ ಕಾಲದಲ್ಲೇ.

ವ್ಯವಸಾಯ, ಕೈಗಾರಿಕೆ, ಸಾರಿಗೆ, ಆಸ್ಪತ್ರೆಗಳು, ನೀರಾವರಿಗಳಿಗೆ ಆದ್ಯತೆ ನೀಡಿ ಕೃಷ್ಣರಾಜ ಸಾಗರ ಅಣೆಕಟ್ಟು ನಿರ್ಮಿಸಿ ಜೀವಜಲ ರಕ್ಷಣೆ ಮತ್ತು ವ್ಯವಸಾಯಕ್ಕೆ ಉತ್ತೇಜನ ವಾಣಿವಿಲಾಸ ನೀರಾವರಿ ಯೋಜನೆ, ಶಿವನಸಮುದ್ರ ಜಲ ವಿದ್ಯುತ್ ಸ್ಥಾವರ ಘಟಕ, ಭದ್ರಾವತಿ ಕಬ್ಬಿಣ ಕಾರ್ಖಾನೆ ಸ್ಥಾಪಿಸಿ ಕೈಗಾರಿಕೆಗೆ ಉತ್ತೇಜನ. ಮಾರಿಕಣಿವೆ ಯೋಜನೆ ವಿದ್ಯುತ್, ರೇಷ್ಮೆ, ಸಾಬೂನು ತಯಾರಿಕಾ ಘಟಕಗಳು ಮೈಸೂರು ಹಾಗೂ ಬೆಂಗಳೂರುಗಳಲ್ಲಿ ಸ್ಥಾಪಿತಗೊಂಡವು. 1916ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪನೆ ಮೂಲಕ ಸರ್ವಜನರಿಗೂ ವಿದ್ಯೆ ದಾನದ ವ್ಯವಸ್ಥೆ ಮಾಡಿದ ಹಿರಿಮೆ ನಾಲ್ವಡಿಯವರದು.

ತಳವರ್ಗಗಳ ವಿದ್ಯೆಗೆ ಅಂಕುರ:
ನಾಲ್ವಡಿಯವರು ರಾಜ್ಯದ ಅಭ್ಯೂದಯದ ಜೊತೆಗೆ ಅದಕ್ಕೆ ಸಮಾನಾಂತರವಾಗಿ ಸಾಮಾಜಿಕ ತಪ್ಪುಗಳನ್ನು ಸರಿಪಡಿಸಲು ವಹಿಸಿದ ಶ್ರಮ ಮೈಸೂರಿನ ಇತಿಹಾಸ ಪುಟಗಳಲ್ಲಿ ದಾಖಲೆಯಾಗಿದೆ. ಪಟ್ಟಭದ್ರ ಹಿತಾಸಕ್ತಿಗಳಿಂದ ವ್ಯಕ್ತವಾದ ವಿರೋಧ ಮತ್ತು ಸಂಘರ್ಷದ ನಡುವೆ ಅವರು ಮಾಡಿದ ಸಾಧನೆಗಳು ಅಪಾರ. ಶತ ಶತಮಾನಗಳಿಂದ ವಿದ್ಯೆ ಕಲಿಕೆಯಿಂದ ವಂಚಿತರಾದ ತಳ ವರ್ಗದ ದಲಿತರಿಗೆ ವಿದ್ಯಾದಾನ ನೀಡಲು ಅವರು ಮುಂದೆ ಬಂದರು. 1862ರಲ್ಲಿ ಬ್ರಿಟೀಷ್ ಸರ್ಕಾರ ಎಲ್ಲಾ ವರ್ಗದ ಜನರಿಗೂ ಕಡ್ಡಾಯ ಶಿಕ್ಷಣ ಜಾರಿಗೆ ತಂದಿರು. ಆದರೆ ಕಾಯಿದೆ ಬಂದರೂ ಸಹ ದಲಿತರು ಶಿಕ್ಷಣ ವಂಚಿತರಾಗಿಯೇ ಇದ್ದರು. ಇದನ್ನು ಗ್ರಹಿಸಿದ ನಾಲ್ವಡಿಯವರು ಮೊದಲಿಗೆ ಹಾನೂರು, ನರಸಾಪುರಗಳಲ್ಲಿ ದಲಿತರಿಗಾಗಿ ಪ್ರತ್ಯೇಕ ಎರಡು ಸರ್ಕಾರಿ ಶಾಲೆಗಳನ್ನು ತೆರೆದರು.  1918-19ರ ಹೊತ್ತಿಗೆ ಮಾಮೂಲಿ ವಿದ್ಯಾಭ್ಯಾಸದ ಜೊತೆಗೆ ವೃತ್ತಿ ಶಿಕ್ಷಣವನ್ನು ಪ್ರಾರಂಭಿಸಿದರು. ಜಾತಿ ಆಧಾರದ ಮೇಲೆ ಸಾರ್ವಜನಿಕ ಶಾಲೆಗೆ ಸೇರಿಸಿಕೊಳ್ಳುತ್ತಿದ್ದ ಪದ್ಧತಿಯನ್ನು ರಾಜ್ಯದಾದ್ಯಂತ ತೊಡೆದು ಹಾಕಿ ಎಲ್ಲರಿಗೂ ಮುಕ್ತಗೊಳಿಸಿದರು.

ಲೆಸ್ಲಿ ಮಿಲ್ಲರ್ ಆಯೋಗ
ಮುಮ್ಮಡಿ ಕೃಷ್ಣರಾಜ ಒಡೆಯರ್ ಅಸಮರ್ಥ ಆಡಳಿತದ ಕ್ರಮದಿಂದಾಗಿ ರಾಜ್ಯದಲ್ಲಿ ಅರಾಜಕತೆ ಉಂಟಾಗಿ ಅವರ ಕಾಲದಲ್ಲಿ ಆಳಿದ ದಿವಾನರುಗಳೆಲ್ಲಾ ಭ್ರಷ್ಟಾಚಾರದಲ್ಲಿ ಮುಳುಗಿ ಜನರಿಗೆ ಅದರಲ್ಲೂ ರೈತರ ಶೋಷಣೆ ಹೆಚ್ಚಾಗಿ ಚಳುವಳಿಗಳು ಭುಗಿಲೆದ್ದವು, ಜೊತೆಗೆ ಸರ್ಕಾರಿ ಉದ್ಯೋಗದಲ್ಲಿ ಮೈಸೂರು ಬ್ರಾಹ್ಮಣರನ್ನು ಕಡೆಗಣಿಸಿ ಮದ್ರಾಸ್ ಬ್ರಾಹ್ಮಣರಿಗೆ ಮಣೆಹಾಕಿದ್ದು ಸಂಘರ್ಷಕ್ಕೆ ನಾಂದಿಯಾಯಿತು. ಈ ಸಂಘರ್ಷ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಕಾಲದವರೆಗೂ ಬಗೆಹರಿಯದ ಸಮಸ್ಯೆಯಾಗಿ ಮುಂದುವರಿಯಿತು.

ಸರ್ಕಾರಿ ಹುದ್ದೆಗಳು ಬ್ರಾಹ್ಮಣರಲ್ಲೇ ಕೇಂದ್ರೀಕೃತವಾಗಿ ಸತತ ಅನ್ಯಾಯವಾಗುತ್ತಿರುವುದನ್ನು ಮನಗೊಂಡ ಬ್ರಾಹ್ಮಣೇತರ ವರ್ಗಗಳು, ಮದ್ರಾಸಿನ ಜಸ್ಟೀಸ್ ಪಾರ್ಟಿಯ ಪ್ರೇರಣೆಯಿಂದ ಮೈಸೂರು ಸಂಸ್ಥಾನದ ಬ್ರಾಹ್ಮಣೇತರ ವರ್ಗಗಳಾದ ಲಿಂಗಾಯಿತ, ಒಕ್ಕಲಿಗ, ಹಿಂದುಳಿದ ವರ್ಗ, ದಲಿತ, ಕ್ರಿಶ್ಚಿಯನ್, ಮುಸ್ಲಿಮ್ ವರ್ಗಗಳು ಮೈಸೂರು ರಾಜ್ಯ ವ್ಯವಸ್ಥೆಯ ಉದ್ಯೋಗಗಳಲ್ಲಿ ತಮಗೂ ಪಾಲು ನೀಡುವಂತೆ ಒತ್ತಾಯಿಸಿದವು.
 
ಇವರ ಬೇಡಿಕೆಯಲ್ಲಿ ನ್ಯಾಯಯೋಚಿತ ಅಂಶಗಳಿವೆ ಎಂದು ಮನಗೊಂಡ ನಾಲ್ವಡಿಯವರು ಹಿಂದುಳಿದ ವರ್ಗಗಳ ಸ್ಥಿತಿಗತಿಗಳನ್ನು ಅಭ್ಯಸಿಸಿ ವರದಿ ಮಾಡಲು ಮೈಸೂರಿನ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಸರ್.ಲೆಸ್ಲಿ ಮಿಲ್ಲರ್ ರವರ ನೇತೃತ್ವದಲ್ಲಿ ಆರು ಮಂದಿಯನ್ನು ಒಳಗೊಂಡ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಿದರು. ಆಯೋಗವು 1911ರ ಜನಗಣತಿಯನ್ನು ಆಧರಿಸಿ ಬ್ರಾಹ್ಮಣರನ್ನು ಹೊರತುಪಡಿಸಿ ಮಿಕ್ಕೆಲ್ಲಾ ವರ್ಗಗಳು ಹಿಂದುಳಿದಿವೆ ಎಂದು ವರದಿ ನೀಡಿತು. ಉದ್ಯೋಗದಲ್ಲಿ ಮೀಸಲಾತಿ ನೀಡಲು ನಾಲ್ವಡಿ ನೇತೃತ್ವದ ಮೈಸೂರು ಸಂಸ್ಥಾನ ಮುಂದೆ ಬಂದು ಚಾರಿತ್ರಾರ್ಹ ದಾಖಲೆ ನಿರ್ಮಿಸಿತು. ಮದ್ರಾಸ್ ಬ್ರಾಹ್ಮಣ ವಿಶ್ವೇಶ್ವರಯ್ಯನವರು ಉದ್ಯೋಗದಲ್ಲಿ ಮೀಸಲಾತಿ ನೀಡುವುದರಿಂದ ಪ್ರತಿಭೆಗೆ ಧಕ್ಕೆಯಾಗುತ್ತದೆ ಎಂದು ಪ್ರತಿಭಟಿಸಿದರು. ನಾಲ್ವಡಿಯವರು ಅವರಿಂದ ರಾಜೀನಾಮೆ ಪಡೆದು ಸರ್.ಎಂ.ಮಿರ್ಜಾ ಇಸ್ಮಾಯಿಲ್‍ ರವರನ್ನು ದಿವಾನರಾಗಿ ನೇಮಿಸಿದರು.

ದೇವದಾಸಿ ಪದ್ಧತಿ ನಿರ್ಮೂಲನೆ
ಹಿಂದೂ ದೇವಾಲಯಗಳಲ್ಲಿ ಹೆಣ್ಣುಮಕ್ಕಳನ್ನು ದೇವರ ಸೇವೆಗಾಗಿ ನೇಮಿಸುತ್ತಿದ್ದರು. ದೇವದಾಸಿಯರಾಗಿ ದೇವರ ಪೂಜೆಗೆ ಭಕ್ತರನ್ನು ಆಕರ್ಷಿಸಲು ನೃತ್ಯಮಾಡುವುದು, ವಾದ್ಯ ನುಡಿಸುವುದು, ಇತ್ಯಾದಿಯಾಗಿ ತೊಡಗಿಸಿಕೊಳ್ಳುತ್ತಿದ್ದರು. ನಂಜನಗೂಡಿನ ಭೋಗನಂದೀಶ್ವರ ದೇವಾಲಯದಲ್ಲಿ ಪಾರಂಪರಿಕವಾಗಿ ನಡೆದುಕೊಂಡು ಬರುತ್ತಿದ್ದ ದೇವದಾಸಿ, ಗೆಜ್ಜೆ ಪೂಜೆಯನ್ನು 1892ರಲ್ಲಿ ನಿಷಿದ್ಧಗೊಳಿಸಲಾಗಿತ್ತು. ಅದನ್ನು ಮುಂದುವರಿಸಿದ ನಾಲ್ವಡಿಯವರು ದೇವರ ಹೆಸರಿನಲ್ಲಿ ನಡೆಯುವ ಈ ಕ್ರಿಯೆ ಮಾನವನ ಘನತೆಗೆ ತಕ್ಕದಲ್ಲವೆಂದು ಸಾರಿ, ತಾವು ಅಧಿಕಾರಕ್ಕೆ ಬಂದ ಎರಡೇ ವರ್ಷದಲ್ಲಿ 1909 ಮತ್ತು 1910ರಲ್ಲಿ ಆಜ್ಞೆ ಹೊರಡಿಸಿ ದೇವದಾಸಿ ಪದ್ಧತಿಯನ್ನು ನಿರ್ಮೂಲನೆಗೊಳಿಸಲು ಮುಂದಾದರು. ಎಲ್ಲಾ ಮುಜರಾಯಿ ದೇವಸ್ಥಾನಗಳಲ್ಲಿ  ದೇವದಾಸಿಯಂತಹ ಅನಿಷ್ಟ ಪದ್ಧತಿಯನ್ನು ಮುಂದುವರಿಸಬಾರದೆಂದು ಆಜ್ಞೆ ಹೊರಡಿಸುತ್ತಾರೆ. ಒಂದು ವೇಳೆ ಮುಂದುವರಿದಿರುವುದು ಕಂಡು ಬಂದರೆ, ಆ ದೇವಾಲಯಕ್ಕೆ ಭೂಮಿ ಮಂಜೂರು ಮಾಡಬಾರದೆಂದು ಸೂಚಿಸುತ್ತಾರೆ.

ದಲಿತರಿಗೆ ಅರಮನೆ ಪ್ರವೇಶ:
ದಲಿತರಿಗೆ ದೇವಾಲಯ ಪ್ರವೇಶ ನಿಷಿದ್ಧಗೊಳಿಸಿ ಅವಮಾನಿಸುವ ಪರಂಪರೆಗೆ ಮನನೊಂದ ನಾಲ್ವಡಿಯವರು ಅರಮನೆ ಪ್ರವೇಶಕ್ಕೆ ಮುಂದಾಗುತ್ತಾರೆ.  1936ರ ಅಕ್ಟೋಬರ್ ನಲ್ಲಿ ದಲಿತರಿಗೆ ಅರಮನೆ ಪ್ರವೇಶವನ್ನು ಕಲ್ಪಿಸುತ್ತಾರೆ. ಮೈಸೂರು ಸಂಸ್ಥಾನದಲ್ಲಿ ಇದೊಂದು ಚಾರಿತ್ರಿಕ ಅವಿಸ್ಮರಣೇಯ ದಿನ.  ಮಹಾರಾಜರ ಈ ರೀತಿಯ ಮನಸ್ಥಿತಿ ಪುರೋಹಿತ ವರ್ಗವನ್ನು ದಂಗುಬಡಿಸಿತು. ನಾಲ್ವಡಿಕೃಷ್ಣರಾಜರ ಒಂದು ದರ್ಶನ ಬರೆದ ಡಾ.ಎಂ.ಬಿ ರಾಜಮಣಿಯವರು ಮಹಾರಾಜರನ್ನು ಬ್ರಿಟನ್ನಿನ ವಿಶ್ವಕೋಶವು ತಮ್ಮ ಹೊಗಳಿಕೆಯ ಪದಪುಂಜಗಳಿಂದ ಪ್ರಶಂಸಿಸಿದೆ ಎನ್ನುತ್ತಾರೆ. ಯಾವ ಜನವರ್ಗ ದಲಿತರು ದೇವಾಲಯ ಪ್ರವೇಶಿಸಬಾರದೆಂದು ನಿಷೇಧ ಹೇರಿತ್ತೋ ಆ ಜನವರ್ಗದ ಗರ್ಭಗುಡಿಗಳಲ್ಲಿ ದಲಿತರು ಬೆಳೆದ ವೀಳ್ಯೆದೆಲೆ ರಾರಾಜಿಸುವಂತೆ ಮಾಡಿದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಸಲ್ಲುತ್ತದೆ.

ಮೈಸೂರಿನ ಸರ್ವತೋನ್ಮುಖ ಅಭಿವೃದ್ಧಿಗೆ ಶ್ರಮಿಸಿದ ಯದುವಂಶ ರಾಜಕುಟುಂಬದಲ್ಲೇ ವಿಶಿಷ್ಟ ಛಾಪನ್ನು ಮೂಡಿಸಿದವರು. ನಾಲ್ವಡಿ ಕೃಷ್ಣರಾಜರ ಆಡಳಿತ ವೈಖರಿ ತಮ್ಮನ್ನೆ ತಾವು ಅಧ್ಯಯನಕ್ಕೆ ತೆರೆದುಕೊಂಡ ಮಹಾ ಪ್ರತಿಭೆ. ಮೈಸೂರು ರಾಜ ಪರಂಪರೆಯನ್ನು ಪದೇ ಪದೇ ಅಧ್ಯಯನಕ್ಕೆ ಒಳಪಡಿಸಲು ಪ್ರೇರಣೆ ನೀಡಿದೆ. ಮೈಸೂರಿನ ಇತಿಹಾಸವನ್ನು ಬಗೆದಷ್ಟು ಸಾಮಾಜಿಕ ಅವಿಷ್ಕಾರದ ಗಣಿಯ ಸ್ಪೋಟಗೊಳ್ಳುತ್ತದೆ. 1940ರಲ್ಲಿ ಹೃದಯಾಘಾತದಿಂದ ನಿಧನರಾಗಿ ಮೈಸೂರಿನ ಜನತೆಯಲ್ಲಿ ಅಜರಾಮರವಾಗಿದ್ದಾರೆ.

Writer - ಸಿದ್ದಸ್ವಾಮಿ, ಮೈಸೂರು

contributor

Editor - ಸಿದ್ದಸ್ವಾಮಿ, ಮೈಸೂರು

contributor

Similar News