ಶೀಘ್ರವೇ ಸರಕಾರಿ ಶಾಲೆಗಳ ದಾಖಲಾತಿ ಪ್ರಕ್ರಿಯೆ ಪ್ರಾರಂಭ: ಸಚಿವ ಸುರೇಶ್‍ ಕುಮಾರ್

Update: 2020-06-04 14:34 GMT

ಬೆಂಗಳೂರು, ಜೂ.4: ರಾಜ್ಯದಲ್ಲಿ ಶಾಲೆಗಳ ಪ್ರಾರಂಭದ ದಿನಾಂಕವನ್ನು ಪೋಷಕರ ಅಭಿಪ್ರಾಯ ಕ್ರೋಡೀಕರಿಸಿದ ನಂತರ ನಿರ್ಧಾರ ಕೈಗೊಳ್ಳಲಾಗುವುದು. ಆದರೆ, ಸರಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಕ್ರಿಯೆಯನ್ನು ಶೀಘ್ರವೇ ಪ್ರಾರಂಭಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್‍ ಕುಮಾರ್ ತಿಳಿಸಿದ್ದಾರೆ.

ಈ ಕುರಿತು ಫೇಸ್‍ಬುಕ್‍ನಲ್ಲಿ ಮಾಹಿತಿಯನ್ನು ಹಂಚಿಕೊಂಡಿರುವ ಅವರು, ರಾಜ್ಯದಲ್ಲಿ ಬಡವರೂ ನಾನಾ ಕಾರಣಗಳಿಗಾಗಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಿದ್ದಾರೆ. ಒಂದು ಅಂಕಿಅಂಶದ ಪ್ರಕಾರ ಬಡ ಕುಟುಂಬದವರು ತಮ್ಮ ಆದಾಯದ ಶೇ.40ರಷ್ಟು ಹಣವನ್ನು ಮಕ್ಕಳ ಶಿಕ್ಷಣಕ್ಕೆ ಖರ್ಚು ಮಾಡುತ್ತಿದ್ದಾರೆ.

ಸರಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ಕೊಡಲಾಗುತ್ತದೆ ಎಂಬ ಭರವಸೆಯನ್ನು ಸಾರ್ವಜನಿಕರಿಗೆ ನೀಡುವ ಮೂಲಕ ಸರಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣವನ್ನು ಹೆಚ್ಚಿಸಬೇಕಿದೆ. ಆ ಮೂಲಕ ಬಡಕುಟುಂಬ ಖಾಸಗಿ ಶಾಲೆಗಳಿಗೆ ವ್ಯಯಿಸುವ ಹಣವನ್ನು ಕುಟುಂಬದ ಒಳಿತಿಗೋಸ್ಕರ ಉಪಯೋಗಿಸಿಕೊಳ್ಳಲು ಸಹಾಯ ಮಾಡಿದಂತಾಗುತ್ತದೆ. ಕೋವಿಡ್-19 ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಗಾಗಿಯೇ ಪ್ರತ್ಯೇಕ ವಾಹಿನಿಯೊಂದನ್ನು ಆರಂಭಿಸಲು ಚಿಂತನೆ ನಡೆಯುತ್ತಿದೆ. ಇದರ ಮೂಲಕ ಯಾವ ರೀತಿಯ ಶಿಕ್ಷಣ ನೀಡಬೇಕು ಹಾಗೂ ವಿದ್ಯಾರ್ಥಿಗಳನ್ನು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಕುರಿತು ಚರ್ಚೆ ನಡೆಯುತ್ತಿದೆ ಎಂದು ಅವರು ಹೇಳಿದರು.

ಜೂ.10ರಿಂದ ಪುನರ್ ಮನನ ತರಗತಿ

ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಳೆದ ತಿಂಗಳು ಚಂದನ ವಾಹಿನಿಯಲ್ಲಿ ಪುನರ್ ಮನನ ತರಗತಿಗಳನ್ನು ಪ್ರಾರಂಭಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ವಿದ್ಯಾರ್ಥಿ ಹಾಗೂ ಪೋಷಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಜೂ.10ರಿಂದ ಹತ್ತು ದಿನಗಳವರೆಗೆ ಎರಡನೇ ಸುತ್ತಿನ ಪುನರ್ ಮನನ ತರಗತಿಗಳು ಪ್ರಾರಂಭಿಸಲಾಗುತ್ತಿದೆ.

-ಸುರೇಶ್‍ ಕುಮಾರ್, ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News