ವಲಸೆ ಕಾರ್ಮಿಕರ ಗುಡಿಸಲುಗಳಿಗೆ ಬೆಂಕಿ ಹಚ್ಚಿದ ಪ್ರಕರಣ: ಸ್ವಯಂಪ್ರೇರಿತವಾಗಿ ಅರ್ಜಿ ದಾಖಲಿಸಿಕೊಂಡ ಹೈಕೋರ್ಟ್

Update: 2020-06-04 14:39 GMT

ಬೆಂಗಳೂರು, ಜೂ.4: ಕಾಚರಕನಹಳ್ಳಿಯಲ್ಲಿ ವಲಸೆ ಕಾರ್ಮಿಕರ ಗುಡಿಸಲುಗಳಿಗೆ ಬೆಂಕಿ ಹಾಕಿದ್ದ ಪ್ರಕರಣ ಸಂಬಂಧ ಹೈಕೋರ್ಟ್ ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಂಡಿದೆ.

ಹೈಕೋರ್ಟ್ ವಕೀಲರಾದ ವೈಶಾಲಿ ಹೆಗ್ಡೆ ಪತ್ರವನ್ನು ಆಧಾರವಾಗಿಟ್ಟುಕೊಂಡು ಪಿಐಎಲ್ ದಾಖಲಿಸಿ ನ್ಯಾಯಾಲಯದ ಮುಂದೆ ಮಂಡಿಸಲು ರಿಜಿಸ್ಟ್ರಾರ್ ಗೆ ಸೂಚನೆ ನೀಡಿದೆ.

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಅವರಿಗೆ ವೈಶಾಲಿ ಹೆಗ್ಡೆ ಪತ್ರ ಬರೆದಿದ್ದರು. ಅದರಂತೆ ಪ್ರಕರಣದಲ್ಲಿ ಸರಕಾರ ಮತ್ತು ಬಿಬಿಎಂಪಿಯನ್ನ ಪ್ರತಿವಾದಿಗಳಾಗಿ ಮಾಡಲಾಗಿದೆ. ಈ ಸಂಬಂಧ ಸರಕಾರಕ್ಕೆ ನೋಟಿಸ್ ನೀಡಿದ್ದು, ಜೂ.11ಕ್ಕೆ ಉತ್ತರಿಸಲು ಸೂಚಿಸಲಾಗಿದೆ.

ಪ್ರಕರಣವೇನು ?: ಕಾಚರಕನಹಳ್ಳಿ ಕೊಳಗೇರಿಯಲ್ಲಿ ಉತ್ತರ ಕರ್ನಾಟಕದ ಕಲಬುರಗಿ, ಬೀದರ್ ಕಡೆಯ ಕೆಲ ವಲಸೆ ಕಾರ್ಮಿಕರು ವಾಸ ಮಾಡುತ್ತಿದ್ದರು. ಆದರೆ ಲಾಕ್‍ಡೌನ್ ಎಂದು ಕಾರ್ಮಿಕರು ಊರಿಗೆ ಹೋದ ವೇಳೆ ಕೆಲ ಭೂ ಮಾಲಕರ ಕಡೆಯವರು ಗುಡಿಸಲುಗಳಿಗ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

ಈ ಬಗ್ಗೆ ಅಲ್ಲೇ ಉಳಿದಿದ್ದ ಕೆಲವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ಈ ಕುರಿತು ವರದಿ ನೋಡಿದ ವಕೀಲರಾದ ವೈಶಾಲಿಯವರು, ಕಳೆದ ತಿಂಗಳು ಮೇ.29ರಂದು, 'ಆ ಜಾಗವನ್ನು ಕಬಳಿಸುವ ಹುನ್ನಾರದ ಶಂಕೆಯಿದೆ. ಕ್ರಮ ಜರುಗಿಸಬೇಕಾದ ಅಧಿಕಾರಿಗಳು ಇದರಲ್ಲಿ ಕೈ ಕಟ್ಟಿ ಕುಳಿತಿದ್ದಾರೆ. ವಲಸೆ ಕಾರ್ಮಿಕರಿಗೆ ಜೀವಿಸುವ ಹಕ್ಕಿದೆ. ಹೀಗಾಗಿ, ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಸೂಕ್ತ ಕ್ರಮಕ್ಕೆ ಮುಂದಾಗಬೇಕು' ಎಂದು ಪತ್ರದಲ್ಲಿ ಮನವಿ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News