ಎಸೆಸೆಲ್ಸಿ ಪರೀಕ್ಷೆ ವೇಳೆ ಸಾರಿಗೆ ಇಲಾಖೆಯಿಂದ ಬಸ್ ಸೌಲಭ್ಯ: ಸುರೇಶ್ ಕುಮಾರ್

Update: 2020-06-04 17:09 GMT

ಬೆಂಗಳೂರು, ಜೂ.4: ಇದೇ ಮೊದಲ ಬಾರಿ ಕೊರೋನ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ತಡವಾಗಿ ನಡೆಯುತ್ತಿರುವ ಎಸೆಸೆಲ್ಸಿ ಪರೀಕ್ಷೆ ಸುಗಮ ಮತ್ತು ಸಮರ್ಪಕ ನಿರ್ವಹಣೆಗೆ ವಿಶೇಷವಾಗಿ ಸಾರಿಗೆ ಇಲಾಖೆಯ ಹೆಚ್ಚಿನ ಸಹಾಯ-ಸಹಕಾರಗಳೊಂದಿಗೆ ಶಿಕ್ಷಣ ಇಲಾಖೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಜೂ.25ರಿಂದ ನಡೆಯಲಿರುವ ಎಸೆಸೆಲ್ಸಿ ಪರೀಕ್ಷೆಗಳ ಸುಗಮ ನಿರ್ವಹಣೆ ಹಿನ್ನೆಲೆಯಲ್ಲಿ ಮಕ್ಕಳಿಗೆ ತಮ್ಮ ವಾಸಸ್ಥಳದಿಂದ ಪರೀಕ್ಷಾ ಕೇಂದ್ರಕ್ಕೆ ಸುಲಲಿತ ಪ್ರಯಾಣ ವ್ಯವಸ್ಥೆ ಕಲ್ಪಿಸುವ ಸಂಬಂಧ ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ನಾಡಿನ ಮಕ್ಕಳ ಹಿತದೃಷ್ಟಿಯಿಂದ ಎಸೆಸೆಲ್ಸಿ ಪರೀಕ್ಷೆ ನಡೆಯಬೇಕೆನ್ನುವುದನ್ನು ಹೈಕೋರ್ಟ್ ಪುರಸ್ಕರಿಸಿದ್ದು, ಯಾವುದೇ ದೃಷ್ಟಿಯಿಂದಲೂ ಯಾವೊಬ್ಬ ವಿದ್ಯಾರ್ಥಿಯೂ ಪರೀಕ್ಷೆಯಿಂದ ವಂಚಿತವಾಗಬಾರದೆಂದು ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಸಾರಿಗೆ ಸಂಪರ್ಕದ ತೊಂದರೆಯಿಂದ ಪರೀಕ್ಷೆಗೆ ಮಕ್ಕಳು ಗೈರು ಹಾಜರಾಗದಂತೆ ನೋಡಿಕೊಳ್ಳಬೇಕಾಗಿರುವುದು ಸರಕಾರದ ಜವಾಬ್ದಾರಿಯಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

ಮಕ್ಕಳಿಗೆ ಸಾರಿಗೆ ವ್ಯವಸ್ಥೆ ಮಾಡಲು ಶಿಕ್ಷಣ ಇಲಾಖೆ ಈಗಾಗಲೇ ಹೆಚ್ಚಿನ ಕ್ರಮಗಳನ್ನು ಕೈಗೊಂಡಿದ್ದು, ಇಲಾಖೆಯ ವಾಹನಗಳು, ಆಯಾ ವ್ಯಾಪ್ತಿಯ ಖಾಸಗಿ ವಿದ್ಯಾಸಂಸ್ಥೆಗಳ ವಾಹನಗಳನ್ನು ಇಲಾಖೆ ಪಡೆದುಕೊಂಡಿದೆ. ಪೋಷಕರ ವಾಹನಗಳಲ್ಲಿ ಬರುವ ಮಕ್ಕಳು ಹಾಗೂ ನಿಗದಿತ ಮಾರ್ಗದ ಬಸ್‍ಗಳ ಹೊರತಾಗಿ ಅಗತ್ಯವಿರುವ ಕಡೆಗಳಲ್ಲಿ ಸಾರಿಗೆ ಸಂಸ್ಥೆಯ ವಾಹನಗಳನ್ನು ನೀಡಲು ಸಾರಿಗೆ ಇಲಾಖೆ ಸಹಕರಿಸಬೇಕೆಂದು ಸುರೇಶ್ ಕುಮಾರ್ ಕೋರಿದರು.

ಹಾಗೆಯೇ ನಿಗದಿತ ಮಾರ್ಗಗಳ ಬಸ್‍ಗಳಲ್ಲಿ ಸಂಚರಿಸುವ, ವಾಹನಗಳಲ್ಲಿ ಸಂಚರಿಸುವ ಮಕ್ಕಳಿಗೆ ಅವರ ಶಾಲಾ ಗುರುತುಪತ್ರ ಇಲ್ಲವೆ ಪರೀಕ್ಷೆಯ ಹಾಲ್‍ಟಿಕೆಟ್ ಆಧಾರದಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಬೇಕು. ಅದೇ ರೀತಿ ಇದೇ 18ರಂದು ನಡೆಯುವ ಪಿಯುಸಿ ಇಂಗ್ಲಿಷ್ ಪರೀಕ್ಷೆಯ ದಿನವೂ ಅಗತ್ಯವಿರುವ ಸಾರಿಗೆ ಸೌಲಭ್ಯ ಒದಗಿಸಬೇಕು ಎಂದು ಅವರು ಮನವಿ ಮಾಡಿದರು.

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ಎಸೆಸೆಲ್ಸಿ ಪರೀಕ್ಷೆ ನಡೆಸುವುದು ಶಿಕ್ಷಣ ಇಲಾಖೆ ಜವಾಬ್ದಾರಿಯಾಗಿದ್ದರೂ ಈ ಬಾರಿಯ ಪರೀಕ್ಷೆ ಸುಸೂತ್ರವಾಗಿ ನಡೆಯುವ ನಿಟ್ಟಿನಲ್ಲಿ ಸಾರಿಗೆ ಇಲಾಖೆ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಿದೆ ಎಂದರು.

ಎಸೆಸೆಲ್ಸಿ ಪರೀಕ್ಷೆ ತಡವಾಗಿ ನಡೆಯುತ್ತಿರಬಹುದು. ಆದರೆ, ರಾಜ್ಯದ 8.5 ಲಕ್ಷಕ್ಕೂ ಹೆಚ್ಚಿನ ಮಕ್ಕಳು ಯಾವುದೇ ರೀತಿಯಲ್ಲಿ ಆತ್ಮವಿಶ್ವಾಸ ಕಳೆದುಕೊಳ್ಳದಂತೆ ಮಾಡುವ ನಿಟ್ಟಿನಲ್ಲಿ ಕಳೆದ ಮೂರು ತಿಂಗಳಿನಿಂದಲೂ ಶಾಲಾ ಶಿಕ್ಷಣ ಸಚಿವ ಸುರೇಶ್ ಕುಮಾರ್ ನೇತೃತ್ವದಲ್ಲಿ ಇಡೀ ಶಿಕ್ಷಣ ಇಲಾಖೆ ಕೈಗೊಂಡ ಕ್ರಮಗಳನ್ನು ಗಮನಿಸಿದ್ದೇನೆ ಎಂದು ಅವರು ಹೇಳಿದರು.

ಈ ಬಾರಿಯ ಪರೀಕ್ಷೆಗೆ ಮತ್ತು ಯಾವೊಬ್ಬ ವಿದ್ಯಾರ್ಥಿಗೂ ತೊಂದರೆಯಾಗದಂತೆ ಸಾರಿಗೆ ಇಲಾಖೆ ಗಮನ ಹರಿಸಲಿದೆ. ಹೈಕೋರ್ಟ್ ಮಕ್ಕಳ ಹಿತದೃಷ್ಟಿಯಿಂದ ಪರೀಕ್ಷೆ ನಡೆಸುವುದನ್ನು ಪುರಸ್ಕರಿಸಿರುವುದರೊಂದಿಗೆ, ಪರೀಕ್ಷೆಯನ್ನು ಮಕ್ಕಳ ಆರೋಗ್ಯ, ರಕ್ಷಣೆ, ಸಾರಿಗೆ, ಸಾಗಣೆ ಸೇರಿದಂತೆ ಯಾವುದೇ ರೀತಿಯಲ್ಲಿ ತೊಂದರೆಯಾದಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕೆಂದು ಆದೇಶ ಮಾಡಿದೆ ಎಂದು ಅವರು ತಿಳಿಸಿದರು.

ಇದರಲ್ಲಿ ಸಾರಿಗೆ ಇಲಾಖೆಯ ಜವಾಬ್ದಾರಿಯೂ ಹಿರಿದಾಗಿದ್ದು, ಮಕ್ಕಳು ಪರೀಕ್ಷೆಗೆ ಹಾಜರಾಗುವಂತೆ ಸಾರಿಗೆ ಇಲಾಖೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ. ಹಾಗೆಯೇ ಈ ಕುರಿತು ಇಲಾಖೆಯಿಂದ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಆದೇಶ ಹೊರಡಿಸಬೇಕು ಮತ್ತು ಪರೀಕ್ಷೆ ಕುರಿತು ಹೆಚ್ಚಿನ ಆಸ್ಥೆ ಮತ್ತು ಜವಾಬ್ದಾರಿಯಿಂದ ಕೆಲಸ ಮಾಡಬೇಕೆಂದು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಉಪ ಮುಖ್ಯಮಂತ್ರಿ ಸೂಚನೆ ನೀಡಿದರು.

ಗಡಿ ರಾಜ್ಯದಿಂದ ಬರುವ ಮಕ್ಕಳು ಪರೀಕ್ಷೆಗೆ ಬಂದು ಹೋಗಲು ಅನುವಾಗುವಂತೆ ಗಡಿ ಭಾಗದಿಂದ ಪರೀಕ್ಷಾ ಕೇಂದ್ರದವರೆಗೆ ಬಸ್ ಸೌಲಭ್ಯದ ಅಗತ್ಯವಿದ್ದರೆ ಅದನ್ನೂ ಪೂರೈಸಲಾಗುವುದು. ಹಾಗೆಯೇ ಈ ನಿಟ್ಟಿನಲ್ಲಿ ಸಾರಿಗೆ ಇಲಾಖೆ, ಶಿಕ್ಷಣ ಇಲಾಖೆಯೊಂದಿಗೆ ಕೈಜೋಡಿಸಲಿದೆ ಎಂದು ಅವರು ಅಭಯ ನೀಡಿದರು.

ಸಾರಿಗೆ ಇಲಾಖೆಯೂ ಕೋವಿಡ್ ನಂತರದ ಸಾಮಾಜಿಕ ಸನ್ನಿವೇಶದಲ್ಲಿ ತೀವ್ರ ಸಂಕಷ್ಟಕ್ಕೀಡಾಗಿದ್ದು, ಇಂತಹ ಸಂದರ್ಭದಲ್ಲಿ ಸಕ್ರಿಯವಾಗಿ ಕೈಜೋಡಿಸುವಲ್ಲಿ ಶಿಕ್ಷಣ ಇಲಾಖೆಯ ಸಹಕಾರವನ್ನು ಉಪ ಮುಖ್ಯಮಂತ್ರಿ ಕೋರಿದರು.

ಸಭೆಯಲ್ಲಿ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಅಂಜುಮ್ ಪರ್ವೇಝ್, ಸಾರಿಗೆ ಆಯುಕ್ತ ಎನ್.ಶಿವಕುಮಾರ್, ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿದೇರ್ಶಕ ಶಿವಯೋಗಿ ಕಳಸದ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಶಿಖಾ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಕೆ.ಜಿ.ಜಗದೀಶ್, ಪಿಯು ಇಲಾಖೆ ನಿರ್ದೇಶಕಿ ಎಂ.ಕನಗವಲ್ಲಿ, ಸಾರಿಗೆ ಮತ್ತು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News