ಚಾಂಪಿಯನ್ಸ್ ಲೀಗ್ ‌ಫೈನಲ್ ಆತಿಥ್ಯಕ್ಕೆ ಜರ್ಮನಿ, ಪೋರ್ಚುಗಲ್ ಪೈಪೋಟಿ

Update: 2020-06-05 04:44 GMT

ಮ್ಯೂನಿಚ್, ಜೂ.4: ಚಾಂಪಿಯನ್ಸ್ ಲೀಗ್ ಫುಟ್ಬಾಲ್‌ ಫೈನಲ್ ಇಸ್ತಾಂಬುಲ್‌ನಿಂದ ಸ್ಥಳಾಂತರವಾಗುತ್ತಿರುವ ಕಾರಣ ಫೈನಲ್ ಪಂದ್ಯದ ಆತಿಥ್ಯಕ್ಕೆ ಜರ್ಮನಿ ಹಾಗೂ ಪೋರ್ಚುಗಲ್‌ನ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ ಎಂದು ‘ಅಸೋಸಿಯೇಟೆಡ್ ಪ್ರೆಸ್’ ವರದಿ ಮಾಡಿದೆ.

ಆಗಸ್ಟ್‌ನಲ್ಲಿ ನಡೆಯಲಿರುವ ಫುಟ್ಬಾಲ್ ಫೈನಲ್‌ಗೆ ಜೂನ್ 17ರಂದು ನಿಗದಿಯಾಗಿರುವ ಯುಇಎಫ್‌ಎ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಹೊಸ ತಾಣದ ನಿರ್ಧಾರವಾಗಲಿದೆ. ಫೈನಲ್ ಪಂದ್ಯದ ಆತಿಥ್ಯವಹಿಸುವ ದೇಶವೇ ಕ್ವಾರ್ಟರ್ ಫೈನಲ್ ಹಾಗೂ ಸೆಮಿ ಫೈನಲ್ ಪಂದ್ಯ ಆಯೋಜಿಸಲು ಸಜ್ಜಾಗಿದೆ ಎಂದು ಪರಿಸ್ಥಿತಿಯ ಬಗ್ಗೆ ತಿಳಿದಿರುವ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕೊರೋನ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಮಾರ್ಚ್‌ನಲ್ಲಿ ಸ್ಥಗಿತಗೊಂಡಿದ್ದ ಸ್ಪರ್ಧೆಯ ಯೋಜನೆಯ ವಿವರಗಳನ್ನು ಚರ್ಚಿಸುವ ಕುರಿತು ಅಧಿಕಾರಿ ಮಾಹಿತಿ ನೀಡಿದರು.

ಕೋವಿಡ್-19 ನಿರ್ಬಂಧಗಳಿಂದಾಗಿ ಫುಟ್ಬಾಲ್ ಅಭಿಮಾನಿಗಳನ್ನು ಅನುಮತಿಸುವ ಸಾಧ್ಯತೆ ಇಲ್ಲದ ಕಾರಣ ಉಳಿದ ಚಾಂಪಿಯನ್ಸ್ ಲೀಗ್ ಪಂದ್ಯಗಳಿಗೆ ಆಟಗಾರರು ಹಾಗೂ ಅಧಿಕಾರಿಗಳಿಗೆ ಪ್ರವೇಶಿಸಬಹುದಾದ ಸ್ಥಳವನ್ನು ಆಯ್ಕೆ ಮಾಡುವುದು ಆದ್ಯತೆಯಾಗಿದೆ. ಆಗಸ್ಟ್‌ನಲ್ಲಿ ಐಬೇರಿಯನ್ ದೇಶದಲ್ಲಿ ಫುಟ್ಬಾಲ್‌ಗೆ ಸಂಭಾವ್ಯ ಒಳ್ಳೆಯ ಸುದ್ದಿಯನ್ನು ಕಳೆದ ವಾರ ಪೋರ್ಚುಗಲ್ ಅಧ್ಯಕ್ಷ ಮಾರ್ಸೆಲೊ ರೆಬೆಲೊ ಡಿ ಸೌಸಾ ಉಲ್ಲೇಖಿಸಿದ್ದರು.

ಲಿಸ್ಬನ್‌ನಲ್ಲಿ ಎರಡು ಸ್ಟೇಡಿಯಂಗಳು ಸಜ್ಜಾಗಿದ್ದು, ಬೆನ್‌ಫಿಕಾ ಫೈನಲ್ ಪಂದ್ಯದ ಆತಿಥ್ಯವಹಿಸಲಿದೆ ಹಾಗೂ ಸ್ಪೋರ್ಟಿಂಗ್ ಲಿಸ್ಬನ್ ತಾಣವನ್ನು ಕೂಡ ಬಳಸಲಾಗುತ್ತದೆ. ಚಾಂಪಿಯನ್ಸ್ ಲೀಗ್ ಫೈನಲ್‌ಗೆ ಜರ್ಮನಿಯನ್ನು ಆಯ್ಕೆ ಮಾಡಿದರೆ, ಫ್ರಾಂಕ್‌ಫರ್ಟ್ ಫೈನಲ್‌ಗೆ ಸಂಭಾವ್ಯ ಸ್ಥಳವಾಗಿದೆ ಎಂದು ಜರ್ಮನಿ ಪತ್ರಿಕೆ ‘ಬಿಲ್ಡ್’ ಬುಧವಾರ ರಾತ್ರಿ ವರದಿ ಮಾಡಿದೆ.

ಕಳೆದ ಶನಿವಾರ ಇಸ್ತಾಂಬುಲ್‌ನ ಅಟತುರ್ಕ್ ಒಲಿಂಪಿಕ್ಸ್ ಕ್ರೀಡಾಂಗಣದಲ್ಲಿ ಚಾಂಪಿಯನ್ಸ್ ಲೀಗ್ ಫೈನಲ್ ನಡೆಯಬೇಕಾಗಿತ್ತು. ಫೈನಲ್ ಪಂದ್ಯವನ್ನು ಇಸ್ತಾಂಬುಲ್‌ನಿಂದ ಸ್ಥಳಾಂತರಗೊಳಿಸಲು ಸಿದ್ಧತೆ ನಡೆಸಲಾಗಿದೆ ಎಂದು ಎಪಿ ಸುದ್ಧಿಸಂಸ್ಥೆ ಗುರುವಾರ ವರದಿ ಮಾಡಿದೆ.

ಸಾಮಾನ್ಯವಾಗಿ ಅಂತಿಮ ಪಂದ್ಯವನ್ನು ತಟಸ್ಥ ಸ್ಥಳದಲ್ಲಿ ನಡೆಸಲಾಗುತ್ತದೆ. ಆದರೆ, ಸಾಂಕ್ರಾಮಿಕ ರೋಗದ ಸಮಯದಲ್ಲಿ ಸ್ಪರ್ಧೆಯನ್ನು ಪೂರ್ಣಗೊಳಿಸಲು ಯುಇಎಫ್‌ಎ ಅಂತಿಮ ಎಂಟರಲ್ಲಿ ಒಂದೇ ದೇಶವನ್ನು ಬೆಂಬಲಿಸುವ ಯೋಜನೆಯನ್ನು ಬದಲಾಯಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News