ಖಾಸಗಿ ಶಾಲೆಗಳು ಮತ್ತು ಆನ್‌ಲೈನ್ ತರಗತಿ

Update: 2020-06-05 17:39 GMT

ಮಾನ್ಯರೇ,

ಜಗತ್ತಿನಾದ್ಯಂತ ಮಹಾಮಾರಿ ‘ಕೊರೋನ ವೈರಸ್’ನಿಂದ ಜನ ತತ್ತರಿಸಿರುವಾಗ ನಮ್ಮ ದೇಶದಲ್ಲಿ ಕೂಡ ಅದರ ಅಟ್ಟಹಾಸ ದಿನೇದಿನೇ ಹೆಚ್ಚುತ್ತಿದೆ. ಕರ್ನಾಟಕದಲ್ಲೂ ಸೋಂಕಿತರ ಸಂಖ್ಯೆ ತೀವ್ರವಾಗಿ ಬೆಳೆಯುತ್ತಿದೆ. ಕರಾವಳಿಯೂ ಇದಕ್ಕೆ ಹೊರತಲ್ಲ. ಹೀಗಿರುವಾಗ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ, ಶಾಲಾರಂಭದ ಬಗ್ಗೆ ಸರಕಾರವು ಮುಂದಿನ ತಿಂಗಳು ನಿರ್ಧಾರ ಕೈಗೊಳ್ಳುವ ಇಂಗಿತವನ್ನು ವ್ಯಕ್ತಪಡಿಸಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ನಮ್ಮ ಮಕ್ಕಳು ಎಷ್ಟರಮಟ್ಟಿಗೆ ಸುರಕ್ಷಿತ ಎಂಬುದು ಬಹುತೇಕ ವಿದ್ಯಾರ್ಥಿ ಪೋಷಕರ ಪ್ರಶ್ನೆಯಾಗಿದೆ. ನಮ್ಮ ಮಕ್ಕಳ ಸುರಕ್ಷೆ ನಮ್ಮ ಕೈಯಲ್ಲಿದೆ. ಸದ್ಯದ ಮಟ್ಟಿಗೆ ಶಾಲಾರಂಭ ವಿಳಂಬವಾದರೂ ಯಾವುದೇ ಅಡ್ಡಿಯಿಲ್ಲ ಎನ್ನುವುದು ಹೆಚ್ಚಿನ ಪೋಷಕರ ನಿಲುವಾಗಿದೆ. 5.0 ಲಾಕ್‌ಡೌನ್‌ನಲ್ಲಿ ಹಲವಾರು ನಿಯಮಗಳು ಸಡಿಲಿಕೆಯಾದರೂ ಕೊರೋನ ರೋಗಿಗಳ ಸಂಖ್ಯೆ ಇಳಿಮುಖವಾಗುತ್ತಿಲ್ಲ. ಈ ಸನ್ನಿವೇಶದಲ್ಲಿ ಶಾಲಾರಂಭಕ್ಕೆ ಸರಕಾರ ಹಸಿರು ನಿಶಾನೆ ತೋರಿಸಿದರೂ ಮಕ್ಕಳನ್ನು ಶಾಲೆಗೆ ಕಳುಹಿಸುವ ನಿರ್ಧಾರವನ್ನು ಪೋಷಕರೇ ಕೈಗೊಳ್ಳಬೇಕಿದೆ. ಇಲ್ಲಿ ಕೆಲವೊಂದು ಖಾಸಗಿ ಶಾಲೆಗಳು ಶುಲ್ಕವನ್ನು ಸಂಗ್ರಹಿಸುವ ಸಲುವಾಗಿ ‘ಆನ್‌ಲೈನ್ ತರಗತಿ’ ಎನ್ನುವ ನೂತನ ಆವಿಷ್ಕಾರವನ್ನು ಸಾಕಾರಗೊಳಿಸುವ ಪ್ರಯತ್ನ ನಡೆಸುತ್ತಿವೆ. ಆದರೆ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಿಗೆ ಈ ಶಿಕ್ಷಣ ಎಷ್ಟರಮಟ್ಟಿಗೆ ಉಪಯುಕ್ತ ಎಂದು ಹೇಳಲಾಗದು. ಈ ಆನ್‌ಲೈನ್ ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಏಕಾಗ್ರತೆ, ಗಮನ, ಶಿಸ್ತು ಬಗ್ಗೆಯೂ ಪೋಷಕರು ಆಲೋಚಿಸಬೇಕಿದೆ. ಅಷ್ಟೇ ಅಲ್ಲ ಹಲವು ಕಡೆ ಅಂತರ್ಜಾಲದ ಸಂಪರ್ಕವೂ ಸಮರ್ಪಕವಾಗಿಲ್ಲ. ಯಾವುದೇ ಶಾಲೆಯು ಈ ಆನ್‌ಲೈನ್ ಶಿಕ್ಷಣ ಆರಂಭಿಸುವುದಾದರೆ ಮೊದಲಿಗೆ ವಿದ್ಯಾರ್ಥಿ ಪೋಷಕರ ಸಭೆ ಕರೆದು ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದು ಉತ್ತಮ. ಪೋಷಕರೊಂದಿಗೆ ಚರ್ಚಿಸದೆ ಖಾಸಗಿ ಶಾಲಾಡಳಿತ ಮಂಡಳಿಯ ಇಂತಹ ನಿರ್ಧಾರ ಖಂಡನೀಯ. ಹಾಗಾಗಿ ಪೋಷಕರು ಎಚ್ಚೆತ್ತು ತಮ್ಮ ಮಕ್ಕಳು ಕಲಿಯುವ ಶಾಲೆಯ ಇಂತಹ ನಿರ್ಧಾರದ ಬಗ್ಗೆ ಪ್ರಶ್ನೆ ಮಾಡಬೇಕು ಹಾಗೂ ಮಕ್ಕಳಿಗೆ ಸಮರ್ಪಕವಾದ ಶಿಕ್ಷಣ ಲಭಿಸುವಂತೆ ನೋಡಿಕೊಳ್ಳಬೇಕಾಗಿದೆ.

Writer - ಎಂ.ರಫೀಕ್, ಉಳ್ಳಾಲ

contributor

Editor - ಎಂ.ರಫೀಕ್, ಉಳ್ಳಾಲ

contributor

Similar News