ಶಿಕ್ಷಣದ ಮಾರುಕಟ್ಟೆಯೂ ಆನ್‌ಲೈನ್ ಹರಾಜುಕಟ್ಟೆಯೂ

Update: 2020-06-05 17:42 GMT

ಈಗಾಗಲೇ ದೇಶದ ಆರ್ಥಿಕತೆಯನ್ನು ಕಾರ್ಪೊರೇಟ್ ಉದ್ಯಮಿಗಳಿಗೆ ಒಪ್ಪಿಸಿರುವ ಭಾರತದ ಆಳುವ ವರ್ಗಗಳು ಬಹುಶಃ ಕೊರೋನ ನಾಶವಾಗುವ ಮುನ್ನವೇ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರವನ್ನೂ ವಿನಾಶದತ್ತ ಕೊಂಡೊಯ್ಯುವ ಸಾಧ್ಯತೆಗಳಿವೆ. ಆರ್ಥಿಕ ಬಿಕ್ಕಟ್ಟು, ಬಂಡವಾಳದ ಕೊರತೆ, ಬಿಗಡಾಯಿಸಿರುವ ಅರ್ಥವ್ಯವಸ್ಥೆಯನ್ನು ಸರಿದಾರಿಗೆ ತರುವ ಹೊರೆ, ಸರಕಾರದ ವೆಚ್ಚ ಮತ್ತು ಬಂಡವಾಳ ಹೂಡಿಕೆಯಲ್ಲಿ ಕಡಿತ ಈ ಎಲ್ಲ ಕಾರಣಗಳನ್ನು ಮುಂದೊಡ್ಡಿ ದೇಶದ ಶೈಕ್ಷಣಿಕ ವ್ಯವಸ್ಥೆಯನ್ನು ಸಂಪೂರ್ಣ ಖಾಸಗೀಕರಣಗೊಳಿಸುವ ನೀಲನಕ್ಷೆ ಸಿದ್ಧವಾಗಿದ್ದರೂ ಅಚ್ಚರಿಯೇನಿಲ್ಲ. ಬಿಎಸ್‌ಎನ್‌ಎಲ್ ಸಂಸ್ಥೆಯನ್ನು ಮುಳುಗಿಸುವ ಹುನ್ನಾರದೊಂದಿಗೇ ಆನ್‌ಲೈನ್ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಇದನ್ನೇ ಸೂಚಿಸುತ್ತದೆ.


ಕೋವಿಡ್-19 ಭಾರತದ ಸಾಮಾಜಿಕ ಚೌಕಟ್ಟಿನಲ್ಲಿರುವ ಎಲ್ಲ ರೀತಿಯ ತಾರತಮ್ಯ, ದೌರ್ಜನ್ಯ, ಕ್ರೌರ್ಯ ಮತ್ತು ಅನಿಷ್ಟಗಳನ್ನೂ ಹೊರ ಹಾಕಿರುವಂತೆಯೇ, ನಮ್ಮ ಆಡಳಿತ ವ್ಯವಸ್ಥೆಯಲ್ಲಿರುವ ದೌರ್ಬಲ್ಯ, ನಿಷ್ಕ್ರಿಯತೆ ಮತ್ತು ವ್ಯವಧಾನದ ಕೊರತೆಯನ್ನೂ ಹೊರಹಾಕಿಬಿಟ್ಟಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಭಾರತೀಯ ಸಮಾಜ ಎದುರಿಸಿರುವ ಕ್ಲಿಷ್ಟ ಸನ್ನಿವೇಶಗಳು ಜನಸಾಮಾನ್ಯರನ್ನು ಗೊಂದಲಕ್ಕೆ ಸಿಲುಕಿಸಿದ್ದರೆ ಅದಕ್ಕೆ ಮೂಲ ಕಾರಣ ಕೊರೋನ ಅಲ್ಲ. ಸಮಗ್ರ ಚಿಂತನೆ ಇಲ್ಲದೆ, ಪೂರ್ವಭಾವಿ ನೀಲನಕ್ಷೆಯಿಲ್ಲದೆ, ವ್ಯಾಪಕ ಅಧ್ಯಯನ ಮತ್ತು ಗ್ರಹಿಕೆ ಇಲ್ಲದೆ, ಆ ಕ್ಷಣದ ಅನಿವಾರ್ಯತೆಗಳನ್ನೇ ಆದ್ಯತೆಗಳೆಂದು ಪರಿಗಣಿಸುವ ಯಾವುದೇ ಆಡಳಿತ ವ್ಯವಸ್ಥೆ ಈ ರೀತಿಯ ಗೊಂದಲ ಸೃಷ್ಟಿಸುವುದು ಸಹಜ.

ಕೊರೋನ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹೆಜ್ಜೆ ಹೆಜ್ಜೆಗೂ ಇದೇ ಪ್ರಮಾದ ಎಸಗುತ್ತಿರುವುದನ್ನು ಗಮನಿಸುತ್ತಲೇ ಬಂದಿದ್ದೇವೆ. ಲಾಕ್‌ಡೌನ್ ಜಾರಿಗೊಳಿಸುವುದರಿಂದ ಹಿಡಿದು ಸಡಿಲಗೊಳಿಸುವವರೆಗೂ ಸರಕಾರಗಳ ನಿರ್ಧಾರಗಳು ಅವೈಜ್ಞಾನಿಕತೆಯ ನೆಲೆಯಲ್ಲೇ ಕಂಡುಬರುತ್ತಿವೆ. ಇದರ ಒಂದು ಪರಿಣಾಮವನ್ನು ವಲಸೆ ಕಾರ್ಮಿಕರ ಬವಣೆಯಲ್ಲಿ ಕಾಣುತ್ತಿದ್ದೇವೆ. ಕೊರೋನಕ್ಕೂ ವಲಸೆ ಕಾರ್ಮಿಕರಿಗೂ ಸಂಬಂಧ ಇಲ್ಲ, ಆದರೆ ಲಾಕ್‌ಡೌನ್ ಘೋಷಣೆಗೂ ವಲಸೆ ಕಾರ್ಮಿಕರ ಸಮಸ್ಯೆಗೂ ಸಂಬಂಧವಿದೆ. ನಿತ್ಯ ಸಾವಿನ ಪಯಣ ನಡೆಸುತ್ತಿರುವ ಲಕ್ಷಾಂತರ ಶ್ರಮಜೀವಿಗಳಿಗೆ ಕೊರೋನ ಸಂಬಂಧಿತ ಲಾಕ್‌ಡೌನ್ ಮಾರಕವಾಗಿರುವುದಂತೂ ಸತ್ಯ.

ಭಾರತ ಎರಡು ತಿಂಗಳಿಗೂ ಹೆಚ್ಚು ಕಾಲ ಲಾಕ್‌ಡೌನ್ ಅನುಭವಿಸಿದೆ. ಇನ್ನೂ ಒಂದು ತಿಂಗಳು ಮುಂದುವರಿಯಲಿದೆ. ಅರ್ಥವ್ಯವಸ್ಥೆಯ ವ್ಯತ್ಯಯಗಳನ್ನು ಗಮನದಲ್ಲಿಟ್ಟುಕೊಂಡು ಲಾಕ್ ಡೌನ್ ನಿಯಮಗಳನ್ನು ಸಡಿಲಗೊಳಿಸುವುದು ತಪ್ಪೇನಲ್ಲ. ಆದರೆ ಅರ್ಥವ್ಯವಸ್ಥೆ ಎಂದರೆ ಕೇವಲ ಮಾರುಕಟ್ಟೆ ಮಾತ್ರವೇ ಅಲ್ಲ. ಸರಕಾರದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ತರುವ ಚಟುವಟಿಕೆಗಳಷ್ಟೇ ಆರ್ಥಿಕತೆ ಅಲ್ಲ. ಹಣಕಾಸು ಬಂಡವಾಳ, ಸರಕುಗಳ ಮಾರುಕಟ್ಟೆಯಲ್ಲಿ ಕಾಣುವ ವಿದ್ಯಮಾನ. ಔದ್ಯಮಿಕ ಬಂಡವಾಳ ಉತ್ಪಾದನೆಯ ಮಾರುಕಟ್ಟೆಯಲ್ಲಿ ಕಾಣುವ ವಿದ್ಯಮಾನ. ಇದನ್ನೂ ಮೀರಿದ ಒಂದು ವಿದ್ಯಮಾನ ಸಾಮಾಜಿಕ ಬಂಡವಾಳ. ಈ ಸಾಮಾಜಿಕ ಬಂಡವಾಳವೇ ಸಮಾಜದ ಅಭ್ಯುದಯಕ್ಕೆ ಸುಭದ್ರ ತಳಪಾಯ ಒದಗಿಸುತ್ತದೆ. ಇತಿಹಾಸದ ಎಲ್ಲ ಕಾಲಘಟ್ಟಗಳಲ್ಲೂ ಈ ಅಗೋಚರ ಬಂಡವಾಳವನ್ನು ಸಂರಕ್ಷಿಸುವ ಪ್ರಯತ್ನಗಳನ್ನು ಕಾಣುತ್ತಲೇ ಬಂದಿದ್ದೇವೆ.

ಸಾಮಾಜಿಕ ಬಂಡವಾಳದ ಮೂಲ ಆಕರ ಇರುವುದು ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಯಲ್ಲಿ. ಪ್ರಾಥಮಿಕ ಶಿಕ್ಷಣ ಮತ್ತು ಪ್ರಾಥಮಿಕ ಆರೋಗ್ಯ ಸುಸ್ಥಿತಿಯಲ್ಲಿರುವ ಯಾವುದೇ ದೇಶ ಶೀಘ್ರಗತಿಯಲ್ಲಿ ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯ ಎನ್ನುವುದಕ್ಕೆ ಇಂದಿಗೂ ಹಲವು ರಾಷ್ಟ್ರಗಳು ಸಾಕ್ಷಿಯಾಗಿವೆ. ಅನೇಕ ಬಂಡವಾಳಶಾಹಿ ರಾಷ್ಟ್ರಗಳಲ್ಲೂ ಸಹ ಈ ಎರಡೂ ವಲಯಗಳಲ್ಲಿ ಸಾರ್ವಜನಿಕ ಬಂಡವಾಳ ಹೂಡಿಕೆ ಹೆಚ್ಚಾಗಿರುತ್ತದೆ, ಸರಕಾರದ ಪಾಲ್ಗೊಳ್ಳುವಿಕೆ ಹೆಚ್ಚಾಗಿರುವುದನ್ನು ಇಂದಿಗೂ ಗಮನಿಸಬಹುದು. ಭಾರತದಂತಹ ಅಭಿವೃದ್ಧಿಶೀಲ ದೇಶಗಳಲ್ಲಿ ಇದು ಪ್ರಥಮ ಆದ್ಯತೆಯಾಗಬೇಕಿತ್ತು.

ಭಾರತದ ಸಂವಿಧಾನದಲ್ಲಿ ಪ್ರಾಥಮಿಕ ಆರೋಗ್ಯ ಮತ್ತು ಸಾರ್ವತ್ರಿಕ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿರುವ ಮೂಲ ಉದ್ದೇಶವೂ ಇದೇ ಆಗಿತ್ತು. ಆದರೆ ಕಳೆದ ನಾಲ್ಕು ದಶಕಗಳ ಅವಧಿಯಲ್ಲಿ ಈ ಎರಡೂ ವಲಯಗಳು ಅಕ್ಷರಶಃ ಹರಾಜು ಮಾರುಕಟ್ಟೆಗಳಾಗಿವೆ. ಆರೋಗ್ಯ ವ್ಯವಸ್ಥೆಯ ದುರವಸ್ಥೆ ಕೊರೋನ ಸಂದರ್ಭದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಈಗ ವಾಣಿಜ್ಯೀಕರಣಗೊಂಡ ಶಿಕ್ಷಣ ವ್ಯವಸ್ಥೆ ಮತ್ತೊಮ್ಮೆ ಬಲಿಪೀಠದಲ್ಲಿ ಕುಳಿತಿದೆ. ಶಿಕ್ಷಣ ಎಂದರೆ ಕೇವಲ ಬೋಧನೆ ಮತ್ತು ಕಲಿಕೆಯ ಪ್ರಕ್ರಿಯೆ ಅಲ್ಲ ಅಥವಾ ಮಕ್ಕಳಿಗೆ ಅರ್ಥವಾಗದ್ದನ್ನು ಅರ್ಥಮಾಡಿಸುವ ಪ್ರಕ್ರಿಯೆಯೂ ಅಲ್ಲ. ಜ್ಞಾನಾರ್ಜನೆಯ ಮಾರ್ಗವಾಗಿ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸುವ ಶಿಕ್ಷಣ ವ್ಯವಸ್ಥೆ ಒಂದೆಡೆ ಬದುಕು ಕಲಿಸಿದರೆ ಮತ್ತೊಂದೆಡೆ ಬದುಕಲು ಕಲಿಸುತ್ತದೆ.

ಬದುಕು ಕಲಿಸುವ ಮಾರ್ಗ ಸಾಮಾಜಿಕ ಬಂಡವಾಳ ವೃದ್ಧಿಗೆ ಬುನಾದಿ ಹಾಕುತ್ತದೆ. ಬದುಕಲು ಕಲಿಸುವ ಮಾರ್ಗ ಆರ್ಥಿಕ ಬಂಡವಾಳಕ್ಕೆ ಅಡಿಪಾಯ ಹಾಕುತ್ತದೆ. ಕಳೆದ ಮೂರು ನಾಲ್ಕು ದಶಕಗಳಿಂದಲೂ ಭಾರತದ ಶಿಕ್ಷಣ ವ್ಯವಸ್ಥೆ ಎರಡನೆಯ ಮಾರ್ಗವನ್ನೇ ಅಧಿಕೃತವಾಗಿ ಅನುಸರಿಸುತ್ತಿದೆ. ಭಾರತದ ಶಾಲಾ ಕಾಲೇಜುಗಳಿಂದ ಹೊರಹೊಮ್ಮುತ್ತಿರುವ ಜ್ಞಾನಾರ್ಜನೆಯ ಭೌತಿಕ ಸರಕುಗಳು ಆರ್ಥಿಕ ಮಾರುಕಟ್ಟೆಗೆ ಬೃಹತ್ ಪ್ರಮಾಣದ ಕಚ್ಚಾ ವಸ್ತುಗಳನ್ನು ಒದಗಿಸುತ್ತಿದೆ. ಹಣಕಾಸು ಬಂಡವಾಳ ವ್ಯವಸ್ಥೆಗೆ ಈ ಕಚ್ಚಾವಸ್ತುಗಳೇ ಸುಭದ್ರ ಬುನಾದಿಯಾಗಿದೆ. ಆದರೆ ಸಾಮಾಜಿಕ ವ್ಯವಸ್ಥೆಯಲ್ಲಿನ ಲೋಪಗಳತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ. ಕ್ಷಣಮಾತ್ರದಲ್ಲಿ ಜಗತ್ತಿನ ಮತ್ತೊಂದು ತುದಿಗೆ ಜಿಗಿದು ಎಲ್ಲವನ್ನೂ ಗ್ರಹಿಸುವ ಒಂದು ವರ್ಗ ತಮ್ಮ ಮೂಗಿನಡಿಯಲ್ಲೇ ಇರುವ ಕ್ರೌರ್ಯ ಮತ್ತು ದೌರ್ಜನ್ಯಗಳನ್ನು ಗುರುತಿಸಲು ಸಾಧ್ಯವಾಗದಿರುವುದನ್ನು ಈ ಹಿನ್ನೆಲೆಯಲ್ಲೇ ನೋಡಬೇಕಿದೆ.

ಜ್ಞಾನಾರ್ಜನೆಯ ಮಾರ್ಗ ಗಳು ಭಾರತೀಯ ಸಮಾಜಕ್ಕೆ ಬದುಕು ಕಲಿಸುತ್ತಿವೆಯೇ ಎನ್ನುವ ಪ್ರಶ್ನೆ ಎದುರಾದಾಗ ನಿರುತ್ತರರಾಗುತ್ತೇವೆ. ನಿಜ, ಸಮಾಜದ ಒಂದು ವರ್ಗಕ್ಕೆ ಬದುಕಲು ಕಲಿಸುತ್ತಿರುವ ಭಾರತದ ಶಿಕ್ಷಣ ವ್ಯವಸ್ಥೆ ಜಾಗತಿಕ ಮಟ್ಟದ ಜ್ಞಾನ ಭಂಡಾರಗಳನ್ನು ಸೃಷ್ಟಿಸಿದೆ. ಪ್ರತಿವರ್ಷ ಲಕ್ಷಾಂತರ ಕಾಲೇಜುಗಳಿಂದ ಮಾರುಕಟ್ಟೆಯ ಜಗಲಿಯಲ್ಲಿ ಬಂದು ಬೀಳುವ ಬೌದ್ಧಿಕ ಸರಕುಗಳು ಈ ದೇಶದ ಜಿಡಿಪಿ ವೃದ್ಧಿಸಲು, ಮಾರುಕಟ್ಟೆ ವಿಸ್ತರಿಸಲು ಮತ್ತು ಮಾರುಕಟ್ಟೆ ಸೂಚ್ಯಂಕವನ್ನು ಹೆಚ್ಚಿಸಲು ನೆರವಾಗುತ್ತಿವೆ. ಆದರೆ ಒಂದು ಪ್ರಬುದ್ಧ ಸಮಾಜದ ನಿರ್ಮಾಣಕ್ಕೆ ಅಗತ್ಯವಾದ ಸಂಯಮ, ಸೌಜನ್ಯ, ಸೌಹಾರ್ದ ಮತ್ತು ಬೌದ್ಧಿಕ ಕ್ಷಮತೆಯನ್ನು ಕಲಿಸುತ್ತಿಲ್ಲ. ಸಮಾಜ ನಿರ್ಮಾಣಕ್ಕೆ ಅತ್ಯಗತ್ಯವಾದ ಕಚ್ಚಾವಸ್ತುಗಳು ಇವು. ಮಾರುಕಟ್ಟೆಯ ಬೇಡಿಕೆಗಳನ್ನು ಪೂರೈಸುವ ಸಲುವಾಗಿಯೇ ಸಿದ್ಧಪಡಿಸಲಾಗುವ ಪಠ್ಯಕ್ರಮಗಳು ಕೀಲಿಮಣೆಯ ಕೂಲಿಗಳನ್ನು ಸೃಷ್ಟಿಸುತ್ತಿವೆ, ಸಂವೇದನಾಶೀಲ ಸಮಾಜವನ್ನು ರೂಪಿಸುತ್ತಿಲ್ಲ ಎನ್ನುವುದು ವಾಸ್ತವ.

ಮೂರು ವರ್ಷದ ಮಗು ಶಾಲೆಯ ಮೊದಲ ಮೆಟ್ಟಿಲು ಏರಿದ ಕ್ಷಣದಿಂದ 25ನೇ ವರ್ಷದಲ್ಲಿ ಯಾವುದೋ ಒಂದು ವೃತ್ತಿಪರ ಶಿಕ್ಷಣದ ಪ್ರಮಾಣಪತ್ರ ಗಳಿಸಿ ಹೊರಬರುವವರೆಗೂ ನಾವು ಕಾಣುತ್ತಿರುವುದು ಒಂದು ವಿಸ್ತಾರವಾದ, ವಿಶಾಲವಾಗಿರುವ, ಬೃಹತ್ ಶಾಪಿಂಗ್ ಮಾಲ್ ಮಾತ್ರ. ಸರಕಾರಿ ಶಾಲೆಗಳು ಇನ್ನೂ ಉಸಿರಾಡುತ್ತಿವೆಯಾದರೂ, ಖಾಸಗಿ ಶಾಲೆಗಳ ದಂಧೆ ಗ್ರಾಮೀಣ ಮಕ್ಕಳನ್ನೂ ಆವರಿಸಿದೆ. ಜನ ಏಕೆ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಬೇಕು ಎನ್ನುವ ಪ್ರಶ್ನೆ ಸಹಜವಾದದ್ದೇ. ಆದರೆ ಪಠ್ಯಕ್ರಮವನ್ನಾಧರಿಸಿದ ಶಿಕ್ಷಣ ಮತ್ತು ಈ ಶೈಕ್ಷಣಿಕ ವ್ಯವಸ್ಥೆಯ ಅಂಕಪಟ್ಟಿ ಮತ್ತು ಪ್ರಮಾಣ ಪತ್ರಗಳೇ ಮಕ್ಕಳ ಬದುಕನ್ನು ರೂಪಿಸುವ ಏಕೈಕ ಮಾರ್ಗ ಎನ್ನುವ ಒಂದು ಪರಿಸ್ಥಿತಿಯನ್ನು ಮಾರುಕಟ್ಟೆ ವ್ಯವಸ್ಥೆ ಸೃಷ್ಟಿಸಿದೆ. ಈ ವ್ಯವಸ್ಥೆಯಲ್ಲಿ ಬದುಕಬೇಕಾದವರು ಸಿದ್ಧಸೂತ್ರವನ್ನೇ ಅನುಸರಿಸುವುದು ಸಹಜ.

ಹೆಚ್ಚಿನ ಅಂಕ ಗಳಿಸುವುದು, ನೂರಕ್ಕೆ ನೂರು ಅಂಕ ಗಳಿಸುವುದು, ಸಕಲ ವಿದ್ಯಾಪಾರಂಗತರಾಗಿ ಹೊರಹೊಮ್ಮುವುದು, ಸ್ಪರ್ಧಾತ್ಮಕ ಮಾರುಕಟ್ಟೆಗೆ ಸಿದ್ಧರಾಗುವುದು ಈ ಎಲ್ಲ ಲಕ್ಷಣಗಳು ಮಕ್ಕಳನ್ನು ವಸ್ತುಶಃ ಯಂತ್ರಗಳನ್ನಾಗಿ ಮಾಡಿಬಿಟ್ಟಿವೆ. ಈ ಯಂತ್ರಗಳನ್ನು ಸಂಸ್ಕರಿಸಿ, ಪರಿಷ್ಕೃತಗೊಳಿಸಿ, ತಿದ್ದಿ ತೀಡಿ ಶಿಲ್ಪಕಲೆಯಂತೆ ಸಿದ್ಧಪಡಿಸಲು ಖಾಸಗಿ ವಿದ್ಯಾ ಸಂಸ್ಥೆಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ. ಅತ್ಯಂತ ಶ್ರೇಷ್ಠ ಬೋಧನೆ, ಅತ್ಯಂತ ಪರಿಣತ ಬೋಧಕರು, ಅತ್ಯಾಧುನಿಕ ಸುಸಜ್ಜಿತ ಮೂಲ ಸೌಕರ್ಯಗಳು ಮತ್ತು ವಿಶ್ವ ಶ್ರೇಷ್ಠ ಶೈಕ್ಷಣಿಕ ಪರಿಸರ ಇರುವ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವ ಮಕ್ಕಳೂ ಸಹ ಮತ್ತೊಂದು ಕೋಚಿಂಗ್ ಕೇಂದ್ರದ ಮೊರೆ ಹೋಗದಿದ್ದರೆ ಅಂಕಪಟ್ಟಿ ಮೂಲೆಗುಂಪಾಗಿಬಿಡುತ್ತದೆ. ಈ ಪರಿಸ್ಥಿತಿಗೆ ಕಾರಣ ಬಂಡವಾಳ ಮಾರುಕಟ್ಟೆಯ ಲಾಭಕೋರತನ ಮತ್ತು ಈ ದೇಶದ ಆಡಳಿತ ವ್ಯವಸ್ಥೆ.

ಶಿಕ್ಷಣ ಮತ್ತು ಕಲಿಕೆಯ ಮೂಲ ಉದ್ದೇಶ ಜ್ಞಾನಾರ್ಜನೆಯೇ ಆದರೂ ಅದು ಬದುಕಲು ಅವಕಾಶ ಒದಗಿಸುವ ಜೊತೆಗೆ ಬದುಕು ಕಲಿಸುವ ಧ್ಯೇಯ ಹೊಂದಿರಬೇಕು. ಕಳೆದ ನಾಲ್ಕು ದಶಕಗಳಲ್ಲಿ ಭಾರತದ ಶೈಕ್ಷಣಿಕ ವ್ಯವಸ್ಥೆ ತಯಾರಿಸುತ್ತಿರುವ ಜ್ಞಾನಯಂತ್ರಗಳಲ್ಲಿ ಸಾಧನೆಯ ಹಪಹಪಿ, ಪ್ರಗತಿಯ ಉತ್ಸುಕತೆ ಮತ್ತು ಅಭಿವೃದ್ಧಿಯ ಮುನ್ನೋಟ ಹೇರಳವಾಗಿ ಕಂಡುಬಂದರೂ, ಸುತ್ತಲಿನ ಸಮಾಜದತ್ತ ಕಣ್ಣೆತ್ತಿ ನೋಡುವ ವ್ಯವಧಾನವನ್ನು ಕಾಣಲಾಗುವುದಿಲ್ಲ. ಇದಕ್ಕೆ ಕಾರಣ ಖಾಸಗಿ ವಿದ್ಯಾಸಂಸ್ಥೆಗಳ ಸ್ಪರ್ಧಾತ್ಮಕ ಧೋರಣೆ ಮತ್ತು ಮಾರುಕಟ್ಟೆ ಕೇಂದ್ರಿತ ಬೋಧನೆ. ಆಧುನಿಕ ಮಾರುಕಟ್ಟೆ ವ್ಯವಸ್ಥೆಯಲ್ಲಿ ಬಂಡವಾಳ ಹೂಡಿಕೆ ಮತ್ತು ಲಾಭಗಳಿಕೆಯೇ ಔದ್ಯಮಿಕ ಮಂತ್ರವಾಗಿರುವುದರಿಂದ ಶಿಕ್ಷಣವೂ ಸಹ ಲಾಭಗಳಿಕೆಯ ಕ್ಷೇತ್ರಗಳಾಗಿದೆ.

ಕೊರೋನ ಸಂದರ್ಭದಲ್ಲಿ ಈ ಕಡುಲೋಭಿಗಳ ಮೂಲ ಲಕ್ಷಣಗಳು ಸ್ಪಷ್ಟವಾಗಿ ಹೊರಹೊಮ್ಮುತ್ತಿವೆ. ಸಿಕ್ಕ ಅವಕಾಶವನ್ನು ಬಾಚಿಕೊಂಡು ಸಾಧ್ಯವಾದಷ್ಟೂ ಲಾಭಗಳಿಸುವ ಮಾರುಕಟ್ಟೆ ತಂತ್ರಕ್ಕೆ ಶಿಕ್ಷಣ ಕ್ಷೇತ್ರವೂ ಬಲಿಯಾಗುತ್ತಿದೆ. ಈ ದೇಶದ ಹಿತವಲಯದ ವರ್ಗಗಳೂ ಸಹ ಈ ಪೈಪೋಟಿಯಲ್ಲಿ ತಮಗೆ ಬೇಕಾದ್ದನ್ನು ಬಾಚಿಕೊಳ್ಳುವ ಮೂಲಕ ಭವಿಷ್ಯದ ಬುನಾದಿಯನ್ನು ಭದ್ರಪಡಿಸಿಕೊಳ್ಳುತ್ತಿವೆ. ಇಲ್ಲಿ ಅವಕಾಶವಂಚಿತ ಸಮುದಾಯಗಳು ಅಬ್ಬೇಪಾರಿಗಳಂತೆ ಅಂಚಿಗೆ ತಳ್ಳಲ್ಪಡುತ್ತಿದ್ದಾರೆ. ಇವರೇ ಬಹುಸಂಖ್ಯಾತರು ಎನ್ನುವುದು ವಾಸ್ತವ. ಈ ಅವಕಾಶವಂಚಿತರಿಗೆ ಆಸರೆಯಾಗಿ ನಿಲ್ಲಬೇಕಾದ ಪ್ರಭುತ್ವ ಮತ್ತು ಸರಕಾರಗಳು ತಮ್ಮ ನೈತಿಕ-ಸಾಂವಿಧಾನಿಕ ಹೊಣೆಗಾರಿಕೆಯನ್ನೇ ಮರೆತು, ಮಾರುಕಟ್ಟೆಯ ತಾಳಕ್ಕೆ ಹೆಜ್ಜೆ ಹಾಕುತ್ತಿರುವುದು ದುರಂತ.

ಕೊರೋನ ಸಂದರ್ಭದಲ್ಲಿ ಕಾಣುತ್ತಿರುವ ಆನ್‌ಲೈನ್ ಶಿಕ್ಷಣದ ದಂಧೆ ಮಾರುಕಟ್ಟೆ ವ್ಯವಸ್ಥೆಯ ಕರಾಳ ಮುಖವನ್ನು ಶೈಕ್ಷಣಿಕ ವಲಯದಲ್ಲಿ ಅನಾವರಣಗೊಳಿಸಿದೆ. ಒಂದನೇ ತರಗತಿಯ ಮಕ್ಕಳಿಗೂ ಆನ್‌ಲೈನ್ ಶಿಕ್ಷಣ ಒದಗಿಸುವ ಮಟ್ಟಿಗೆ ಶಿಕ್ಷಣ ಸಂಸ್ಥೆಗಳು ಧನದಾಹಿಗಳಾಗಿವೆ. ರಾಜ್ಯ ಸರಕಾರ ಪ್ರಸ್ತುತ ಶೈಕ್ಷಣಿಕ ವರ್ಷವನ್ನು ಜುಲೈ ಅಥವಾ ಆಗಸ್ಟ್ ತಿಂಗಳಿಂದ ಆರಂಭಿಸಿದರೂ ರಜಾ ದಿನಗಳನ್ನು ಕಡಿಮೆ ಮಾಡುವ ಮೂಲಕ ಪಠ್ಯಕ್ರಮ ಬೋಧನೆಯನ್ನು ಪೂರೈಸಬಹುದು. ಆದರೆ ಖಾಸಗಿ ಶಾಲೆಗಳಿಗೆ ಶುಲ್ಕದ ಚಿಂತೆ. ಆನ್‌ಲೈನ್ ಶಿಕ್ಷಣದ ಮೂಲಕ ವರ್ಷದ ಶುಲ್ಕವನ್ನು ವಸೂಲಿ ಮಾಡಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಖಾತರಿಪಡಿಸಿಕೊಳ್ಳುವ ದುರುದ್ದೇಶದ ಹೊರತಾಗಿ ಈ ಪ್ರಯತ್ನದಲ್ಲಿ ಮತ್ತಾವ ಪುರುಷಾರ್ಥವನ್ನೂ ಕಾಣಲಾಗುವುದಿಲ್ಲ.

ಈ ಸಂದರ್ಭದಲ್ಲಿ ಸರಕಾರ ಪ್ರಬುದ್ಧತೆ ತೋರಬಹುದಿತ್ತು. ಶಿಕ್ಷಣ ವ್ಯವಸ್ಥೆಯನ್ನು ರಾಷ್ಟ್ರೀಕರಣ ಮಾಡುವ ಆತ್ಮಸ್ಥೈರ್ಯವನ್ನು ಕಳೆದುಕೊಂಡಿರುವ ಆಳುವ ವರ್ಗಗಳು ಕನಿಷ್ಠ ಖಾಸಗಿ ವಿದ್ಯಾಸಂಸ್ಥೆಗಳ ಮೇಲೆ ನಿಯಂತ್ರಣ ಸಾಧಿಸಲಾದರೂ ಮುಂದಾಗಬಹುದು. ಹತ್ತನೇ ತರಗತಿಯ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ನೀಡುವ ಮೂಲಕ ಸಮಾಜದಲ್ಲಿ ಈಗಾಗಲೇ ಬೇರೂರಿರುವ ತಾರತಮ್ಯಗಳನ್ನು ಮತ್ತಷ್ಟು ಒರೆಹಚ್ಚಿ ನೋಡಿರುವ ರಾಜ್ಯಸರಕಾರ ಎಲ್ಲ ಮಕ್ಕಳಿಗೂ ಉಚಿತ ಲ್ಯಾಪ್‌ಟಾಪ್ ಅಥವಾ ಟ್ಯಾಬ್ ಒದಗಿಸುವ ಮೂಲಕ ಎಲ್ಲ ವರ್ಗಗಳಿಗೂ ನೆರವಾಗಬಹುದು. ಅಂತರ್ಜಾಲ ಸಿಗ್ನಲ್ ಸಮಸ್ಯೆಯನ್ನು ಬಗೆಹರಿಸುವುದು ಕಷ್ಟವೇನಲ್ಲ. ಆದರೆ ನಮ್ಮ ಸರಕಾರಗಳಿಗೆ ಒಂದೆಡೆ ಇಚ್ಛಾಶಕ್ತಿಯ ಕೊರತೆ ಇದ್ದರೆ ಮತ್ತೊಂದೆಡೆ ಖಾಸಗಿ ವಿದ್ಯಾಸಂಸ್ಥೆಗಳ ವಿರೋಧ ಕಟ್ಟಿಕೊಳ್ಳುವ ಧೈರ್ಯವೂ ಇಲ್ಲ. ಬಹುಪಾಲು ಶೈಕ್ಷಣಿಕ ಸಂಸ್ಥೆಗಳು ರಾಜಕೀಯ ನಾಯಕರ ಒಡೆತನದಲ್ಲಿ ರುವುದು ಅಥವಾ ಈ ಪಕ್ಷಗಳನ್ನು ಪೋಷಿಸುವ ಮಠಗಳ ಮಾಲಕತ್ವದಲ್ಲಿರುವುದು ಇದಕ್ಕೆ ಕಾರಣ.

ದುರಂತದ ನಡುವೆಯೇ ಖಾಸಗಿ ಶಾಲೆಗಳು ಆನ್‌ಲೈನ್ ಶಿಕ್ಷಣದ ನೆಪ ಹೂಡಿ ಪೋಷಕರಿಂದ ಹಣ ವಸೂಲಿ ಮಾಡುವ ದಂಧೆಗೆ ಇಳಿದಿವೆ. 8-9ನೇ ತರಗತಿ ಮಕ್ಕಳಿಗೆ ಸ್ಮಾರ್ಟ್‌ಫೋನ್ ನೀಡಿದರೆ ಏನಾಗುತ್ತದೆಯೋ ಎನ್ನುವ ಆತಂಕ ಪ್ರತಿಯೊಬ್ಬ ಪೋಷಕರಲ್ಲೂ ಇರುವುದನ್ನು ಸರಕಾರ ಅರ್ಥಮಾಡಿಕೊಳ್ಳಬೇಕಿದೆ. ಈ ಆತಂಕಕ್ಕೆ ಕಾರಣಗಳೂ ಇಲ್ಲದಿಲ್ಲ. ಖಾಸಗಿ ಶಾಲೆಯಲ್ಲಿ ಮಕ್ಕಳನ್ನು ಸೇರಿಸುವವರೆಲ್ಲರೂ ಸ್ಮಾರ್ಟ್‌ಫೋನ್ ಹೊಂದಿರುತ್ತಾರೆ ಎನ್ನುವ ಭ್ರಮೆಯಿಂದಲೂ ಖಾಸಗಿ ಶಿಕ್ಷಣೋದ್ಯಮಿಗಳು ಹೊರಬರಬೇಕಿದೆ. ನಗರವಾಸಿ ಹಿತವಲಯಗಳಿಗೆ, ಶ್ರೀಮಂತರಿಗೆ ಶಿಕ್ಷಣ ಎನ್ನುವುದು ಮುನ್ನಡೆಯ ಮೆಟ್ಟಿಲಾಗಿ ಮಾತ್ರವೇ ಕಾಣುತ್ತದೆ. ಹಾಗಾಗಿಯೇ ಅಂಕಪಟ್ಟಿಯ ವ್ಯಸನ, ಪೈಪೋಟಿಯ ಧಾವಂತ ಮತ್ತು ಮಾರುಕಟ್ಟೆಯ ತವಕ. ಆದರೆ ಭಾರತದ ಬಹುಪಾಲು ಜನತೆಗೆ ಶಿಕ್ಷಣ ಬದುಕು ಕಟ್ಟಿಕೊಡಬೇಕಾದ ಒಂದು ಮಾರ್ಗ. ಭವಿಷ್ಯದ ಸಮಾಜವನ್ನು ನಿರ್ಮಿಸುವ ಒಂದು ಸಾಧನ. ಈ ಸಮಾಜವೇ ಈ ಬಹುಜನರ ಭವಿಷ್ಯದ ಭೂಮಿಕೆಯಾಗುತ್ತದೆ. ಹಣ ಮತ್ತು ಬಂಡವಾಳ ಜೀವನದ ಅನಿವಾರ್ಯತೆಗಳೇ ಆಗಿದ್ದರೂ ಆದ್ಯತೆ ಆಗಕೂಡದು. ಇದು ಶಿಕ್ಷಣ ವ್ಯವಸ್ಥೆ ಜನತೆಗೆ ಕಲಿಸಬೇಕಾದ ಪಾಠ.

ದುರಂತ ಎಂದರೆ ಶಿಕ್ಷಣದ ವಾಣಿಜ್ಯೀಕರಣ ಶಾಲೆಗಳನ್ನು ಹರಾಜು ಮಾರುಕಟ್ಟೆಗಳನ್ನಾಗಿ ಪರಿವರ್ತಿಸಿದೆ. ಒಂದೆಡೆ ವಿದ್ಯಾಸಂಸ್ಥೆಗಳ ದಂಧೆ ಮತ್ತೊಂದೆಡೆ ಕೋಚಿಂಗ್ ದಂಧೆಯ ನಡುವೆ ಮಧ್ಯಮ ವರ್ಗಗಳೂ ಸಹ ಬಸವಳಿದು ಹೋಗಿರುವುದನ್ನು ಗಮನಿಸಬಹುದು. ಸದೃಢ ಭಾರತ, ವಿಶ್ವಗುರು ಭಾರತ, ಬಲಿಷ್ಠ ಭಾರತ ನಿರ್ಮಿಸುವ ಕನಸು ಕಾಣುತ್ತಿರುವ ಆಳುವ ವರ್ಗಗಳಿಗೆ ಈ ಸೂಕ್ಷ್ಮ ಅರಿವಾಗಿದ್ದರೆ ಕೊರೋನ ಸಂದರ್ಭದಲ್ಲಾದರೂ ಶಿಕ್ಷಣದ ವಾಣಿಜ್ಯೀಕರಣದ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದವು. ಕೋವಿಡ್-19 ಸಮಸ್ಯೆಯ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ಒದಗಿಸಿ, ಮಕ್ಕಳ ಆರೋಗ್ಯ ಕಾಪಾಡುವುದೇ ಸರಕಾರದ ಆದ್ಯತೆಯಾಗಿದ್ದಲ್ಲಿ, ಸಾರ್ವತ್ರಿಕ ಶಿಕ್ಷಣದ ರಾಷ್ಟ್ರೀಕರಣಕ್ಕೆ ಮುಂದಾಗುತ್ತಿತ್ತು. ತಾರತಮ್ಯ ಇಲ್ಲದೆ ಎಲ್ಲ ವರ್ಗದ ಮಕ್ಕಳಿಗೂ ಸಮಾನ ಶಿಕ್ಷಣ ಒದಗಿಸಲು ಮುಂದಾಗುತ್ತಿತ್ತು.

ಆದರೆ ಈಗಾಗಲೇ ದೇಶದ ಆರ್ಥಿಕತೆಯನ್ನು ಕಾರ್ಪೊರೇಟ್ ಉದ್ಯಮಿಗಳಿಗೆ ಒಪ್ಪಿಸಿರುವ ಭಾರತದ ಆಳುವ ವರ್ಗಗಳು ಬಹುಶಃ ಕೊರೋನ ನಾಶವಾಗುವ ಮುನ್ನವೇ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರವನ್ನೂ ವಿನಾಶದತ್ತ ಕೊಂಡೊಯ್ಯುವ ಸಾಧ್ಯತೆಗಳಿವೆ. ಆರ್ಥಿಕ ಬಿಕ್ಕಟ್ಟು, ಬಂಡವಾಳದ ಕೊರತೆ, ಬಿಗಡಾಯಿಸಿರುವ ಅರ್ಥವ್ಯವಸ್ಥೆಯನ್ನು ಸರಿದಾರಿಗೆ ತರುವ ಹೊರೆ, ಸರಕಾರದ ವೆಚ್ಚ ಮತ್ತು ಬಂಡವಾಳ ಹೂಡಿಕೆಯಲ್ಲಿ ಕಡಿತ ಈ ಎಲ್ಲ ಕಾರಣಗಳನ್ನು ಮುಂದೊಡ್ಡಿ ದೇಶದ ಶೈಕ್ಷಣಿಕ ವ್ಯವಸ್ಥೆಯನ್ನು ಸಂಪೂರ್ಣ ಖಾಸಗೀಕರಣಗೊಳಿಸುವ ನೀಲನಕ್ಷೆ ಸಿದ್ಧವಾಗಿದ್ದರೂ ಅಚ್ಚರಿಯೇನಿಲ್ಲ. ಬಿಎಸ್‌ಎನ್‌ಎಲ್ ಸಂಸ್ಥೆಯನ್ನು ಮುಳುಗಿಸುವ ಹುನ್ನಾರದೊಂದಿಗೇ ಆನ್‌ಲೈನ್ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಇದನ್ನೇ ಸೂಚಿಸುತ್ತದೆ.

ಔದ್ಯಮಿಕ ವಲಯದಲ್ಲಿ ಶೈಕ್ಷಣಿಕ ಪರಿಸರ ಇದ್ದರೆ ಸಮಾಜದ ಮುನ್ನಡೆಗೆ ನೆರವಾಗುತ್ತದೆ. ಶೈಕ್ಷಣಿಕ ವಲಯದಲ್ಲಿ ಔದ್ಯಮಿಕ ಪರಿಸರ ಇದ್ದರೆ ಸಮಾಜ ವಿನಾಶದತ್ತ ಸಾಗುತ್ತದೆ. ಕೊರೋನ ಭಾರತೀಯ ಸಮಾಜದಲ್ಲಿ ಆತ್ಮನಿರ್ಭರತೆಯನ್ನು ಸೃಷ್ಟಿಸಿದೆಯೋ ಇಲ್ಲವೋ ಹೇಳಲಾಗದು, ಆದರೆ ಆಳುವ ವರ್ಗಗಳಲ್ಲಿ ಆತ್ಮಸಾಕ್ಷಿ ಇಲ್ಲ ಎನ್ನುವುದನ್ನು ಸ್ಪಷ್ಟವಾಗಿ ನಿರೂಪಿಸಿದೆ. ಹಾಗಾಗಿಯೇ ಶಿಕ್ಷಣದಿಂದ ವಂಚಿತರಾದ ಮಕ್ಕಳೂ ನಮಗೆ ಕಾಣುವುದಿಲ್ಲ, ಹಸಿವಿನಿಂದ ಸಾಯುವ ಮಕ್ಕಳೂ ಕಾಣುವುದಿಲ್ಲ. ಸರಕಾರಕ್ಕೆ ಕಣ್ಣಿಲ್ಲ, ಸಮಾಜಕ್ಕೆ ಇರಬೇಕಲ್ಲವೇ? ಆದ್ಯತೆಯ ಮಸೂರಗಳನ್ನು ತೆರೆದಿಟ್ಟು ಒಮ್ಮೆ ನೋಡೋಣವೇ?

Writer - ನಾ. ದಿವಾಕರ

contributor

Editor - ನಾ. ದಿವಾಕರ

contributor

Similar News