ಆನೆ ಸಾವು ಪ್ರಕರಣಕ್ಕೆ ಸಂಬಂಧಿಸಿ ಮಲಪ್ಪುರಂ ಬಗ್ಗೆ ಸುಳ್ಳು ಹೇಳಿಕೆ: ಮೇನಕಾ ಗಾಂಧಿ ವಿರುದ್ಧ ಎಫ್‍ಐಆರ್ ದಾಖಲು

Update: 2020-06-06 08:43 GMT

ಮಲಪ್ಪುರಂ: ಪಾಲಕ್ಕಾಡ್ ಜಿಲ್ಲೆಯಲ್ಲಿ ಇತ್ತೀಚೆಗೆ ಗರ್ಭಿಣಿ ಆನೆಯೊಂದು ಸ್ಫೋಟಕ ತುಂಬಿದ್ದ ಅನಾನಸು ತಿಂದು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಮಲಪ್ಪುರಂ ಜಿಲ್ಲೆ ಹಾಗೂ ಅಲ್ಲಿನ ಜನರ ಕುರಿತು ಅವಹೇಳಕನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ಸಂಸದೆ ಹಾಗೂ ಮಾಜಿ ಕೇಂದ್ರ ಸಚಿವೆ ಮೇನಕಾ ಗಾಂಧಿ ವಿರುದ್ಧ ಮಲಪ್ಪುರಂ ಪೊಲೀಸ್ ಠಾಣೆಯಲ್ಲಿ ಐಪಿಸಿಯ ಸೆಕ್ಷನ್ 153 ಅನ್ವಯ ಎಫ್‍ಐಆರ್ ದಾಖಲಾಗಿದೆ.

ಮೇನಕಾ ಗಾಂಧಿಯ ಹೇಳಿಕೆ ಸಂಬಂಧ ಒಟ್ಟು ಏಳು ಪ್ರಕರಣಗಳು ದಾಖಲಾಗಿದ್ದರೂ ಎಲ್ಲವನ್ನೂ ಜತೆಯಾಗಿಸಿ ಒಂದೇ ಎಫ್‍ಐಆರ್ ದಾಖಲಿಸಲಾಗಿದೆ. ದೂರು ನೀಡಿದವರಲ್ಲಿ ಮುಸ್ಲಿಂ ಲೀಗ್, ಯುವ ಕಾಂಗ್ರೆಸ್, ಸಾಲಿಡಾರಿಟಿ ಯುತ್ ಮೂವ್ಮೆಂಟ್, ಡಿವೈಎಫ್‍ಐ ಸೇರಿವೆ. ಸುಪ್ರೀಂ ಕೋರ್ಟ್ ವಕೀಲ ಕೆ ಆರ್ ಸುಭಾಶ್ ಚಂದ್ರನ್ ಕೂಡ ದೂರು ನೀಡಿದ್ದಾರೆ.

ಆನೆ ಸಾವು ಪ್ರಕರಣ ಕುರಿತಂತೆ ಟ್ವೀಟ್ ಮಾಡಿದ್ದ ಮೇನಕಾ, “ಮಲಪ್ಪುರಂ ದೇಶದಲ್ಲಿಯೇ ಅತ್ಯಂತ ಹಿಂಸಾತ್ಮಕ ಜಿಲ್ಲೆ. ಅದು ಬಹಳಷ್ಟು ಕ್ರಿಮಿನಲ್ ಚಟುವಟಿಕೆಗಳಿಗೆ ಹೆಸರಾಗಿದೆ. ಅಲ್ಲಿ ವನ್ಯಜೀವಿಗಳನ್ನು ಕೊಂದ ಒಬ್ಬನೇ ಒಬ್ಬ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಲಾಗಿಲ್ಲ'' ಎಂದು ಹೇಳಿದ್ದರು.

ಪ್ರಕರಣ ಪಾಲಕ್ಕಾಡ್‍ ನಲ್ಲಿ ನಡೆದಿದ್ದರೂ ಮೇನಕಾ ಮಲಪ್ಪುರಂನಲ್ಲಿ ನಡೆದಿದೆ ಎಂದು ಹೇಳಿರುವುದು, ಜತೆಗೆ ಮಲಪ್ಪುರಂ ಜಿಲ್ಲೆ ಹಾಗೂ ಜನರನ್ನು ಅವಹೇಳನಗೈದಿರುವುದು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News