ಕೊರೋನ ಚಿಕಿತ್ಸೆಯಲ್ಲಿ ಹೈಡ್ರೋಕ್ಸಿಕ್ಲೊರೊಕ್ವಿನ್ 'ನಿಷ್ಪ್ರಯೋಜಕ' ಎಂದು ಹೇಳಿ ಪ್ರಯೋಗ ನಿಲ್ಲಿಸಿದ ಆಕ್ಸ್ ಫರ್ಡ್ ವಿವಿ

Update: 2020-06-06 10:05 GMT
ಸಾಂದರ್ಭಿಕ ಚಿತ್ರ

ಲಂಡನ್, ಜೂ.6: ಕೋವಿಡ್-19 ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿರುವ ಹೈಡ್ರೋಕ್ಸಿಕ್ಲೊರೊಕ್ವಿನ್ ಔಷಧಿಯು 'ನಿಷ್ಪ್ರಯೋಜಕ' ಎಂದು ಕಂಡುಕೊಂಡ ನಂತರ ಬ್ರಿಟಿಷ್ ವಿಜ್ಞಾನಿಗಳು ಈ ಕುರಿತಾದ ಪ್ರಮುಖ ಸಂಶೋಧನೆ (ಡ್ರಗ್ ಟ್ರಯಲ್) ಸ್ಥಗಿತಗೊಳಿಸಿದ್ದಾರೆ.

"ಇದು ಕೋವಿಡ್-19 ಚಿಕಿತ್ಸೆಗೆ ಉಪಯುಕ್ತವಲ್ಲ; ಇದು ಕೆಲಸ ಮಾಡದು'' ಎಂದು ರಿಕವರಿ ಟ್ರಯಲ್ ಸಹಮುಖ್ಯಸ್ಥರಾಗಿರುವ ಆಕ್ಸ್ ಫರ್ಡ್ ವಿವಿಯ ಮಾರ್ಟಿನ್ ಲಂಡ್ರೆ ಹೇಳಿದ್ದಾರೆ. ಈ ಔಷಧಿಯ ಉಪಯುಕ್ತತೆಯ ಬಗ್ಗೆ ಭಾರೀ ನಿರೀಕ್ಷೆಗಳಿದ್ದರೂ ಈ ಕುರಿತಂತೆ ಸಂಶೋಧನೆ ಮತ್ತು ಪ್ರಯೋಗದಿಂದ ಯಾವುದೇ ದೊಡ್ಡ ಆಧಾರ ದೊರಕಿಲ್ಲ ಎಂದು ಅವರು ಹೇಳಿದ್ದಾರೆ.

ಈ ಔಷಧಿ ಪ್ರಯೋಗವು ಕೋವಿಡ್-19 ರೋಗಿಯ ಮರಣ ಸಾಧ್ಯತೆ ಅಪಾಯವನ್ನು ಕಡಿಮೆಗೊಳಿಸುವುದಿಲ್ಲ ಎಂದು ಆರಂಭಿಕ ಸಂಶೋಧನೆಯಿಂದ ತಿಳಿದು ಬಂದಿದೆ ಎಂದೂ ಅವರು ತಿಳಿಸಿದ್ದಾರೆ.

ಈ ಪ್ರಯೋಗದ ಅಂಗವಾಗಿ 1,542 ಕೋವಿಡ್ ರೋಗಿಗಳಿಗೆ ಹೈಡ್ರೋಕ್ಸಿಕ್ಲೊರೊಖ್ವಿನ್ ನೀಡಿ ಈ ಔಷಧಿ ಪಡೆಯದ 3,132 ರೋಗಿಗಳ ಜತೆಗೆ ಹೋಲಿಸಿದಾಗ 28 ದಿನಗಳ ನಂತರ ಸಾವಿನ ಪ್ರಮಾಣ, ಆಸ್ಪತ್ರೆಯಲ್ಲಿದ್ದ ಅವಧಿಯಲ್ಲಿ ಯಾವುದೇ ಮಹತ್ವದ ವ್ಯತ್ಯಾಸ ಗಮನಕ್ಕೆ ಬಂದಿಲ್ಲ ಎಂದು ಅವರು ವಿವರಿಸಿದ್ದಾರೆ.

ಇತ್ತೀಚೆಗೆ ಮಿನ್ನೆಸೊಟ ವಿವಿ ಕೂಡ ಈ ಔಷಧಿ ಉಪಯಕ್ತವಾಗಿಲ್ಲ ಎಂದು ಪ್ರಯೋಗಗಳಿಂದ ತಿಳಿದು ಬಂದಿದೆ ಎಂದು ಹೇಳಿತ್ತು. ಆದರೆ ತನ್ನ 'ಸಾಲಿಡಾರಿಟಿ' ಪ್ರಯೋಗದಂಗವಾಗಿ ಹೈಡ್ರೊಕ್ಸಿಕ್ಲೊರೊಕ್ವಿನ್ ಕುರಿತಾದ ಪರೀಕ್ಷೆಗಳನ್ನು ಮರು ಆರಂಭಿಸುವ ತನ್ನ ಯೋಜನೆಯು ರಿಕವರಿ ಟ್ರಯಲ್ ಫಲಿತಾಂಶದಿಂದಾಗಿ ಬದಲಾಗುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆದರೆ ಲ್ಯಾನ್ಸೆಟ್ ಅಧ್ಯಯನ ವರದಿ ಹೊರಬಿದ್ದ ನಂತರ ವಿಶ್ವ ಆರೋಗ್ಯ ಸಂಸ್ಥೆ ಈ ಔಷಧಿ ಕುರಿತ ಅಧ್ಯಯನವನ್ನು ಸ್ವಲ್ಪ ಕಾಲ ಸ್ಥಗಿತಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News