ಕಾನೂನು ಉಲ್ಲಂಘಿಸಿ ಅಭಿಮಾನಿಗಳೊಂದಿಗೆ ಮೆರವಣಿಗೆ: ಬಿಬಿಎಂಪಿ ಸದಸ್ಯ ಇಮ್ರಾನ್ ಪಾಷಾ ಬಂಧನ

Update: 2020-06-07 15:29 GMT

ಬೆಂಗಳೂರು, ಜೂ.7: ಕೊರೋನ ಸೋಂಕು ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಪಾದರಾಯಪುರ ಕಾರ್ಪೋರೇಟರ್ ಇಮ್ರಾನ್ ಪಾಷಾ ರವಿವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿ ನಂತರ ಮೆರವಣಿಗೆಯಲ್ಲಿ ಪಾಲ್ಗೊಂಡ ಹಿನ್ನೆಲೆ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ರವಿವಾರ ಆಸ್ಪತ್ರೆಯಿಂದ ಇಮ್ರಾನ್ ಪಾಷಾ ಬಿಡುಗಡೆಯಾಗುತ್ತಿದ್ದಂತೆ ಅಭಿಮಾನಿಗಳು ಮೆರವಣಿಗೆ ಮಾಡಿದ್ದಾರೆ. ಮೆರವಣಿಗೆಯಲ್ಲಿ ಇಮ್ರಾನ್ ಪಾಷಾ ಕೂಡಾ ಇದ್ದುದರಿಂದ ಜೆ.ಜೆ ನಗರ ಪೊಲೀಸರು ಅವರನ್ನು ಬಂಧಿಸಿದ್ದಾರೆ.

ಕೊರೋನ ಸೋಂಕಿನಿಂದ ಗುಣಮುಖರಾಗಿದ್ದ ಇಮ್ರಾನ್ ಪಾಷಾಗೆ ವೈದ್ಯರು ಆಸ್ಪತ್ರೆಯಿಂದ ನೇರವಾಗಿ ಮನೆಗೆ ಹೋಗುವಂತೆ ಸೂಚನೆ ನೀಡಿದ್ದರು. ವೈದ್ಯರ ಸಲಹೆಯಂತೆ ಹೋಮ್ ಕ್ವಾರಂಟೈನ್‍ನಲ್ಲಿ ಇರಬೇಕಾದ ಪಾಷಾ ಬೆಂಬಲಿಗರ ಜತೆ ರೋಡ್ ಶೋ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. 

ಪಾದರಾಯನಪುರದಲ್ಲಿ 144 ಸೆಕ್ಷನ್ ಜಾರಿ

ಕಾರ್ಪೋರೇಟರ್ ಇಮ್ರಾನ್ ಪಾಷಾರನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಂತೆಯೇ ಪಾದರಾಯನಪುರವನ್ನು ಮತ್ತೆ ಸೀಲ್‍ಡೌನ್ ಮಾಡಲಾಯಿತು. ಬಳಿಕ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಬಂದು ಹೊರಗಡೆ ಸುತ್ತಾಡುತ್ತಿದ್ದವರನ್ನು ಚದುರಿಸಿದರು. ಅಲ್ಲದೇ, ಪಾದರಾಯನಪುರದಲ್ಲಿ ನಿಷೇಧಾಜ್ಞೆ(144 ಸೆಕ್ಷನ್) ಜಾರಿಗೊಳಿಸಲಾಯಿತು. ಸ್ಥಳದಲ್ಲಿ ಎರಡು ಕೆಎಸ್‍ಆರ್‍ಪಿ ಹಾಗೂ ಗರುಡ ಪಡೆ ಪೊಲೀಸರು ಮೊಕ್ಕಾಂ ಹೂಡಿದ್ದಾರೆ.

ಕಾನೂನು ಕ್ರಮಕ್ಕೆ ಝಮೀರ್ ಅಹ್ಮದ್ ಆಗ್ರಹ

ಪಾದರಾಯನಪುರ ಕಾರ್ಪೋರೇಟರ್ ಇಮ್ರಾನ್ ಪಾಷಾ ಕೊರೋನದಿಂದ ಗುಣಮುಖರಾಗಿ ಬಂದಿದ್ದು ನನಗೂ ಸಂತೋಷವಾಗಿದೆ. ಆದರೆ, ಈ ರೀತಿ ಯುದ್ಧ ಗೆದ್ದು ಬಂದವರಂತೆ ಮೆರವಣಿಗೆ ಮೂಲಕ ಬಂದಿದ್ದನ್ನು ನಾನು ಖಂಡಿಸುತ್ತೇನೆ. ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿ. ರಾಜ್ಯಕ್ಕೆ ರಾಜ್ಯವೇ ಕೊರೋನದಿಂದ ಕಂಗಾಲಾಗಿದೆ. ಇಂತಹ ಸಂದಿಗ್ಧ ಸಮಯದಲ್ಲಿ ಜನರನ್ನು ಗುಂಪುಗೂಡಿಸಿ ಮೆರವಣಿಗೆ ಮಾಡುವುದು ಬೇಜವಾಬ್ದಾರಿಯ ನಡವಳಿಕೆಯಾಗುತ್ತದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜನರಿಗೆ ತಿಳಿಹೇಳಬೇಕಾದವರೆ ಈ ರೀತಿ ವರ್ತಿಸಿದರೆ ಹೇಗೆ ?

-ಝಮೀರ್ ಅಹ್ಮದ್, ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News