×
Ad

ಕುಟುಂಬಸ್ಥರು, ಚಿತ್ರತಾರೆಯರ ಸಮ್ಮುಖದಲ್ಲಿ ನಟ ಚಿರಂಜೀವಿ ಸರ್ಜಾ ಅಂತ್ಯಕ್ರಿಯೆ

Update: 2020-06-08 20:18 IST

ಬೆಂಗಳೂರು, ಜೂ.8: ಹೃದಯಾಘಾತದಿಂದ ನಿಧನರಾದ ನಟ ಚಿರಂಜೀವಿ ಸರ್ಜಾ ಅಂತ್ಯಕ್ರಿಯೆಯನ್ನು ಕನಕಪುರ ಬಳಿಯ ನೆಲಗುಳಿ ಹಳ್ಳಿಯಲ್ಲಿರುವ ಫಾರ್ಮ್ ಹೌಸ್‍ನಲ್ಲಿ ಕುಟುಂಬಸ್ಥರು ಹಾಗೂ ಚಿತ್ರತಾರೆಯರ ಸಮ್ಮುಖದಲ್ಲಿ ಅಂತಿಮ ವಿಧಿ ವಿಧಾನಗಳೊಂದಿಗೆ ನೆರವೇರಿಸಲಾಯಿತು.

ರವಿವಾರ ಸಂಜೆ ನಗರದ ಅಪೋಲೋ ಆಸ್ಪತ್ರೆಯಲ್ಲಿ ಚಿರಂಜೀವಿ ಸರ್ಜಾ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಸ್ಯಾಂಡಲ್‍ವುಡ್ ತಾರೆಯರು, ನಿರ್ದೇಶಕರು, ನಿರ್ಮಾಪಕರು ಆಸ್ಪತ್ರೆಗೆ ಧಾವಿಸಿ ಅಂತಿಮ ದರ್ಶನ ಪಡೆದರು. ನಂತರ ಪಾರ್ಥಿವ ಶರೀರವನ್ನು ಬಸವನಗುಡಿಯಲ್ಲಿರುವ ಅವರ ನಿವಾಸಕ್ಕೆ ಕೊಂಡೊಯ್ಯಲಾಯಿತು.

ಸೋಮವಾರ ಮಧ್ಯಾಹ್ನ 1ರವರೆಗೆ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಶಾಸಕ ರಾಮಲಿಂಗಾರೆಡ್ಡಿ, ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೇರಿ ನಟ-ನಟಿಯರು, ಅಭಿಮಾನಿಗಳು ಅಂತಿಮ ದರ್ಶನ ಪಡೆದರು. ನಂತರ ನಿವಾಸದ ಬಳಿ ಕೆಲ ಸಂಪ್ರದಾಯಗಳನ್ನು ನೆರವೇರಿಸಿ, ಕನಕಪುರದ ಬಳಿಯ ಫಾರ್ಮ್‍ಹೌಸ್‍ಗೆ ವಿಶೇಷ ವಾಹನದಲ್ಲಿ ಸಾಗಿಸಲಾಯಿತು. ಈ ವೇಳೆ ದಾರಿ ಉದ್ದಕ್ಕೂ ಅವರ ಅಭಿಮಾನಿಗಳು ಪಾರ್ಥಿವ ಶರೀರದ ಮೇಲೆ ಹೂಗುಚ್ಚ ಹಾಕಿ ಜೈಕಾರ ಹಾಕಿದರು.

ಒಕ್ಕಲಿಗರ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳೊಂದಿಗೆ ಚಿರಂಜೀವಿ ಸರ್ಜಾರವರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ವೇಳೆ ಪತ್ನಿ ಮೇಘನಾ ರಾಜ್, ಸಹೋದರ ದ್ರುವ ಸರ್ಜಾ, ಸೋದರ ಮಾವ ಅರ್ಜುನ್ ಸರ್ಜಾ, ಮಾವ ಸುಂದರ್ ರಾಜ್, ನಟಿ ತಾರಾ, ಪ್ರಜ್ವಲ್ ದೇವರಾಜ್, ದುನಿಯಾ ವಿಜಯ್ ಸೇರಿದಂತೆ ಕುಟುಂಬಸ್ಥರು, ನಟರು, ಅಭಿಮಾನಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News