ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಕೂಲಿ ಕಾರ್ಮಿಕರಿಗೆ ನೆರವು ನೀಡಿದ ಹೈಕೋರ್ಟ್ ವಕೀಲ
ಬೆಂಗಳೂರು, ಜೂ.8: ಕೊರೋನ ಸೋಂಕಿನಿಂದ ಸಂಕಷ್ಟಕ್ಕೆ ಸಿಲುಕಿದ ಕೂಲಿ ಕಾರ್ಮಿಕರಿಗೆ ಹೈಕೋರ್ಟ್ ವಕೀಲ, ಲೀಗಲ್ ಸಮಿತಿಯ ಸದಸ್ಯ ಎಚ್.ವೆಂಕಟೇಶ್ ದೊಡ್ಡೇರಿ ನೆರವು ನೀಡಿದ್ದಾರೆ.
ಲಾಕ್‍ಡೌನ್ ಜಾರಿಯಾದ ಬಳಿಕ ಕೂಲಿ ಕಾರ್ಮಿಕರು ಹಾಗೂ ಬಡ ಕುಟುಂಬಗಳಿಗೆ ನಿರಂತರವಾಗಿ ಎಚ್.ವೆಂಕಟೇಶ್ ದೊಡ್ಡೇರಿ ಆಹಾರ ಸಾಮಗ್ರಿ ಒದಗಿಸಿದ್ದಾರೆ. ಬೀದಿ ನಾಯಿಗಳಿಗೂ ಪ್ರತಿ ದಿನ ಆಹಾರ ನೀಡಿದ್ದಾರೆ. ಆಸ್ಪತ್ರೆಯಿಂದ ತಜ್ಞ ವೈದ್ಯರನ್ನು ಕರೆಯಿಸಿ, ಕೊರೋನ ಸೋಂಕು ಹರಡುವುದನ್ನು ತಡೆಯಲು ತೆಗೆದುಕೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ.
ನೆಲಮಂಗಲ ತಾಲೂಕಿನ ದೊಡ್ಡೇರಿ ಗ್ರಾಮದ ವೆಂಕಟೇಶ್, ರೋಟರಿ ಕ್ಲಬ್ ಯಶವಂತಪುರ ಘಟಕದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಅಗತ್ಯವಿರುವವರಿಗೆ ಉಚಿತವಾಗಿ ಕಾನೂನು ಸಲಹೆ ನೀಡುತ್ತಾರೆ. ನೂರಾರು ಬಡ ಮಕ್ಕಳಿಗೆ ಮಾರ್ಗದರ್ಶನ ನೀಡುವುದರ ಜೊತೆಗೆ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವನ್ನೂ ನೀಡುತ್ತಿದ್ದಾರೆ.
ಪ್ರತಿಭಾವಂತ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಹಣದ ಕೊರತೆ ಬರಬಾರದು ಎಂಬುದೇ ನನ್ನ ಉದ್ದೇಶ. ಇದು ಸಂವಿಧಾನದ ಆಶಯ ಕೂಡ ಎನ್ನುತ್ತಾರೆ ವೆಂಕಟೇಶ ದೊಡ್ಡೇರಿ.