ಆಡಳಿತದ ಎಲ್ಲ ರಂಗದಲ್ಲೂ ವೈಫಲ್ಯ ಮೋದಿ ಸರಕಾರದ ಸಾಧನೆ: ವೆಲ್ಫೇರ್ ಪಾರ್ಟಿ ರಾಜ್ಯಾಧ್ಯಕ್ಷ ತಾಹೀರ್ ಹುಸೇನ್

Update: 2020-06-08 16:50 GMT

ಬೆಂಗಳೂರು, ಜೂ.8: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವು ಆಡಳಿತದ ಎಲ್ಲ ರಂಗಗಳಲ್ಲೂ ವಿಫಲವಾಗಿದೆ. ಇಡಿ ದೇಶವೆ ಕೋವಿಡ್-19 ಕಾರಣವಾಗಿ ಕಳವಳಕ್ಕೀಡಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ಸರಕಾರವು ತನ್ನ ಎರಡನೆ ಅವಧಿಯ ಮೊದಲ ವರ್ಷ ಪೂರ್ಣಗೊಂಡ ಸಂಭ್ರಮ ಆಚರಿಸಲು ಮುಂದಾಗುತ್ತಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ತಾಹೀರ್ ಹುಸೇನ್ ಟೀಕಿಸಿದರು.

ಸೋಮವಾರ ಶಿವಾಜಿನಗರದಲ್ಲಿರುವ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಕಚೇರಿ ವೆಲ್ಫೇರ್ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಆರ್ಥಿಕತೆಯು ದಿನೇದಿನೇ ಪಾತಾಳಕ್ಕಿಳಿಯುತ್ತಿದೆ. ನಿರುದ್ಯೋಗ, ಹಸಿವು, ರೈತರ ಆತ್ಮಹತ್ಯೆಗಳಲ್ಲಿ ಪ್ರತಿದಿನ ಹೆಚ್ಚಳ ಆಗುತ್ತಿದೆ. ಇಂತಹ ಸ್ಥಿತಿಯಲ್ಲಿ ಮೋದಿ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಜನರನ್ನು ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಕಳೆದ ಸಾಲಿನ ಜನವರಿಯಿಂದ ಡಿಸೆಂಬರ್‍ವರೆಗಿನ ಅವಧಿಯಲ್ಲಿ ದೇಶದ ಜಿಡಿಪಿಯು ಶೇ.4.1 ಮಾತ್ರವಿತ್ತು. ಪ್ರಸಕ್ತ ಸಾಲಿನ ಜನವರಿಯಿಂದ ಮಾರ್ಚ್ ವರೆಗಿನ ಅವಧಿಯಲ್ಲಿ ಅದು ಶೇ.3.1ಕ್ಕೆ ಇಳಿಯಿತು. 15ನೆ ಹಣಕಾಸು ಆಯೋಗದ ಅಧ್ಯಕ್ಷ ಎನ್.ಕೆ.ಸಿಂಗ್ ಪ್ರಕಾರ 2020-21ನೆ ಆರ್ಥಿಕ ವರ್ಷದ ಅಂತ್ಯಕ್ಕೆ ಜಿಡಿಪಿ ಶೇ.1ಕ್ಕೆ ಇಳಿಯುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.

ಲಾಕ್‍ಡೌನ್‍ನಿಂದಾಗಿ ನಿರುದ್ಯೋಗ ಪ್ರಮಾಣ ಇನ್ನೂ ಹೆಚ್ಚಾಗಿದೆ. ದೇಶದಲ್ಲಿ ಸುಮಾರು 12 ಜನರು ನಿರುದ್ಯೋಗಿಗಳಿದ್ದಾರೆ. ಪ್ರಸ್ತುತ ದಿನದಲ್ಲಿ ಶೇ.60ರಷ್ಟು ಪದವೀಧರರು ನಿರುದ್ಯೋಗಿಗಳಾಗಿದ್ದಾರೆ. ಕಳೆದ 45 ವರ್ಷಗಳಲ್ಲೆ ಅತಿ ಹೆಚ್ಚು ನಿರುದ್ಯೋಗ ಪ್ರಯಾಣ ಸೃಷ್ಟಿಯಾಗಿದೆ ಎಂದು ತಾಹೀರ್ ಹುಸೇನ್ ದೂರಿದರು.

ಕೋವಿಡ್-19 ಸಮಸ್ಯೆಯನ್ನು ಪರಿಹರಿಸುವಲ್ಲಿಯೂ ಸರಕಾರವು ವಿಫಲವಾಗಿದೆ. ಪ್ರತಿದಿನ ಕೊರೋನ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ರೋಗ ನಿಯಂತ್ರಣಕ್ಕೆ ಯೋಜನೆ ರೂಪಿಸುವ ಬದಲು ಚಪ್ಪಾಳೆ, ತಟ್ಟೆ ಬಾರಿಸುವ ಮತ್ತು ದೀಪ ಹಚ್ಚುವಂತಹ ನಿರರ್ಥಕ ಸಲಹೆಗಳನ್ನು ಮೋದಿ ಸರಕಾರ ಜನರಿಗೆ ನೀಡುತ್ತಿದೆ. ದೇಶದಲ್ಲಿ ವೈದ್ಯಕೀಯ ಸಲಕರಣೆಗಳ ಕೊರತೆಯ ಕಾರಣ ವೈದ್ಯರು ಚಿಂತೆಗೀಡಾಗಿದ್ದಾರೆ. ಅನೇಕ ವೈದ್ಯರು ತಮ್ಮ ಜೀವನವನ್ನು ಕಳೆದುಕೊಂಡರು ಎಂದು ಅವರು ಹೇಳಿದರು.

ಪೂರ್ವ ತಯಾರಿಯಿಲ್ಲದೆ ಘೋಷಿಸಿದ ಲಾಕ್‍ಡೌನ್‍ನಿಂದಾಗಿ ಅತಿ ಹೆಚ್ಚು ಸಮಸ್ಯೆಗೆ ಸಿಲುಕಿದ್ದು ಕಾರ್ಮಿಕರು. ಅ ವ್ಯವಸ್ಥಿತ ಲಾಕ್‍ಡೌನ್ ಪರಿಣಾಮವಾಗಿ 800ಕ್ಕೂ ಅಧಿಕ ಮಂದಿ ಹಸಿವು, ದಾಹ, ಅಪಘಾತಗಳಿಂದಾಗಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುವಂತಾಯಿತು ಎಂದು ತಾಹೀರ್ ಹುಸೇನ್ ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಪೋರೇಟ್ ವಲಯಕ್ಕೆ ಅನುಕೂಲ ಮಾಡಿಕೊಡಲು ಕೇಂದ್ರ ಸರಕಾರವು ವಿದ್ಯುತ್‍ಚ್ಛಕ್ತಿ ತಿದ್ದುಪಡಿ ಮಸೂದೆ-2020 ಜಾರಿಗೆ ತರಲು ಮುಂದಾಗಿದೆ. ಇದರಿಂದ ಜನಸಾಮಾನ್ಯರಿಗೆ ಯಾವುದೆ ಪ್ರಯೋಜನವಿಲ್ಲ. ರೈತರು ಪಡೆಯುವ ಉಚಿತ ವಿದ್ಯುತ್ ಸೌಲಭ್ಯವು ಮರಿಚಿಕೆಯಾಗಲಿದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹಬೀಬುಲ್ಲಾ ಖಾನ್, ರಾಜ್ಯ ಕಾರ್ಯದರ್ಶಿ ಮುಈನದ್ದೀನ್ ಕಮರ್, ಮಹಿಳಾ ವಿಂಗ್‍ನ ಕಾರ್ಯದರ್ಶಿ ತಲ್‍ಅತ್ ಯಾಸ್ಮೀನ್, ರಾಜ್ಯ ಮಾಧ್ಯಮ ಕಾರ್ಯದರ್ಶಿ ಅಝೀಝ್ ಜಾಗೀರ್‍ದಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News