ಹರಾಜಿಗೆ ನಿಂತ ಲಜ್ಜೆಗೇಡಿ ಶಾಸಕರು

Update: 2020-06-09 05:28 GMT

ದೇಶ ಕೊರೋನ ಮತ್ತು ಲಾಕ್‌ಡೌನ್‌ನ ಸೂತಕದಲ್ಲಿರುವ ಹೊತ್ತಿನಲ್ಲಿ ಪ್ರಧಾನಿ ಮೋದಿಯವರ ತವರು ರಾಜ್ಯ ಗುಜರಾತ್ ‘ವಿಕಟ ನಾಟಕ’ವೊಂದಕ್ಕೆ ಸಾಕ್ಷಿಯಾಗುತ್ತಿದೆ. ರಾಜ್ಯಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಗುಜರಾತ್‌ನಲ್ಲಿ ಮತ್ತೆ ಆಪರೇಷನ್ ಕಮಲ ತಾರಕ ತಲುಪಿದೆ. ದೇಶ ಆರ್ಥಿಕ ಹಿಂಜರಿತದಿಂದ ತತ್ತರಿಸಿ ಕೂತಿರುವಾಗ, ಗುಜರಾತ್‌ನಲ್ಲಿ ಕುದುರೆ ವ್ಯಾಪಾರಕ್ಕಾಗಿ ಕೋಟಿಗಟ್ಟಲೆ ಹೂಡಿಕೆಯಾಗುತ್ತಿದೆ. ಈಗಾಗಲೇ ಗುಜರಾತ್‌ನ ಬಿಜೆಪಿಯ ಆಮಿಷಕ್ಕೆ ಒಳಗಾಗಿ ಮೂವರು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದಾರೆ. ತನ್ನ ಶಾಸಕರನ್ನು ಕಳೆದುಕೊಳ್ಳುವ ಭಯದಿಂದ ಕಾಂಗ್ರೆಸ್ ಪಕ್ಷ, ರೆಸಾರ್ಟ್‌ನಲ್ಲಿ ‘ಕ್ವಾರಂಟೈನ್’ ಅನುಭವಿಸುತ್ತಿದೆ. ಎಲ್ಲ ಉದ್ಯಮಗಳು ನೆಲ ಕಚ್ಚಿ ಜನರು ದಿವಾಳಿಯಾಗಿರುವ ಸಂದರ್ಭದಲ್ಲಿ, ಶಾಸಕರ ಖರೀದಿಗೆ ಸರಕಾರದ ಬಳಿ ಹಣದ ಕೊರತೆ ಕಾಣುತ್ತಿಲ್ಲ. ದೇಶ ಸಾವು-ಬದುಕಿನ ನಡುವೆ ಒದ್ದಾಡುತ್ತಿರುವ ಈ ದಿನಗಳಲ್ಲೂ ‘ಆಪರೇಷನ್ ಕಮಲ’ಗಳ ಮೂಲಕ ಶಾಸಕರನ್ನು ಖರೀದಿಸಲು ಹೊರಟಿರುವ ಸರಕಾರದ ನಡೆ, ಜನಸಾಮಾನ್ಯರ ಸಂಕಟಗಳ ಬಹಿರಂಗ ಅಣಕವಾಗಿದೆ. ದೇಶದ ಜನರ ಸಮಸ್ಯೆಗಳಿಗೂ ತಮಗೂ ಯಾವ ಸಂಬಂಧವೂ ಇಲ್ಲ ಎನ್ನುವುದನ್ನು ರಾಜಕೀಯ ನಾಯಕರು ಈ ಮೂಲಕ ಬಹಿರಂಗಪಡಿಸಿದ್ದಾರೆ.

ಭಾರತದಲ್ಲಿ ಕೊರೋನ ಕಾಲಿಡುವುದಕ್ಕೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ಹಮ್ಮಿಕೊಂಡ ‘ನಮಸ್ತೆ ಟ್ರಂಪ್’ ಕಾರ್ಯಕ್ರಮ ಕಾರಣವಾಯಿತು ಎನ್ನುವ ಆರೋಪಗಳನ್ನು ಹಲವರು ಮಾಡಿದ್ದಾರೆ. ‘ನಮಸ್ತೆ ಟ್ರಂಪ್’ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಮೇಲಿನ ನಿರ್ಬಂಧಗಳನ್ನು ಮುಂದೂಡಲಾಯಿತು. ಫೆಬ್ರವರಿ ತಿಂಗಳಲ್ಲೇ ವಿಮಾನ ನಿಲ್ದಾಣಗಳಿಗೆ ದಿಗ್ಬಂಧನ ಹೇರಿ, ಭಾರತಕ್ಕೆ ಆಗಮಿಸುತ್ತಿರುವವರನ್ನು ತಡೆದು ‘ಕ್ವಾರಂಟೈನ್’ ಏರ್ಪಡಿಸಿದ್ದಿದ್ದರೆ, ಇಡೀ ಭಾರತಕ್ಕೆ ಲಾಕ್‌ಡೌನ್ ವಿಧಿಸುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ ಎನ್ನುವುದನ್ನು ಹಲವು ತಜ್ಞರು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ. ವಿಶ್ವಸಂಸ್ಥೆ ಮೇಲಿಂದ ಮೇಲೆ ಎಚ್ಚರಿಕೆ ನೀಡುತ್ತಿದ್ದರೂ ಕೊರೋನದ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಲು ಪ್ರಧಾನಿ ಮೋದಿ ವಿಫಲರಾದರು. ದೇಶದ ಸುರಕ್ಷೆಗಿಂತ ‘ನಮಸ್ತೆ ಟ್ರಂಪ್’ ಅವರಿಗೆ ಮುಖ್ಯವಾಯಿತು. ಕೋಟೆ ಸೂರೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ, ಕೊರೋನ ದೇಶಾದ್ಯಂತ ವಿಸ್ತರಿಸಿದ ಬಳಿಕ ಮೋದಿಯವರು ಲಾಕ್‌ಡೌನ್ ಘೋಷಿಸಿದರು. ಈ ಲಾಕ್‌ಡೌನ್ ಕೊರೋನದ ಮೇಲೆ ಯಾವುದೇ ಪರಿಣಾಮವನ್ನು ಬೀರಲಿಲ್ಲ. ಬದಲಿಗೆ ಕುಸಿದು ಕೂತಿದ್ದ ಆರ್ಥಿಕತೆಯನ್ನು ಸರ್ವನಾಶ ಮಾಡಿತು. ‘ಅಹಮದಾಬಾದ್’ ಕೊರೋನದ ಹೆಬ್ಬಾಗಿಲಾಯಿತು ಎಂದು ಶಿವಸೇನೆಯ ಮುಖ್ಯಸ್ಥರೇ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಅದಕ್ಕೆ ಪೂರಕವಾಗಿ, ವ್ಯಾಪಕ ಕೊರೋನ ಸಾವುಗಳಿಗಾಗಿ ಗುಜರಾತ್‌ನ ಅಹಮದಾಬಾದ್ ಗುರುತಿಸಿಕೊಂಡಿತು. ಇಂದು ದೇಶದಲ್ಲಿ ಕೊರೋನ ಸೋಂಕಿಗಾಗಿ ಕುಖ್ಯಾತಿ ಪಡೆದ ರಾಜ್ಯಗಳಲ್ಲಿ ಗುಜರಾತ್ ಸೇರಿದೆ. ಹಾಗೆಯೇ ವಲಸೆ ಕಾರ್ಮಿಕರನ್ನು ನಿಭಾಯಿಸುವಲ್ಲಿಯೂ ಗುಜರಾತ್ ಸಂಪೂರ್ಣ ವಿಫಲಗೊಂಡಿದೆ.

ಲಾಕ್‌ಡೌನ್ ಸಡಿಲಿಕೆಯಾಗಿರುವ ಈ ಸಂದರ್ಭದಲ್ಲಿ ಕೊರೋನ ಅಪಾಯಕಾರಿಯಾಗಿ ವ್ಯಾಪಿಸುವ ಸಾಧ್ಯತೆಗಳಿವೆ. ಇದಕ್ಕಾಗಿ ಅಲ್ಲಿನ ಸರಕಾರ ಯೋಜನೆಗಳನ್ನು ರೂಪಿಸಿ ಜನರ ರಕ್ಷಣೆಗೆ ಮುಂದಾಗಬೇಕು. ಜೊತೆಗೆ ಆರ್ಥಿಕವಾಗಿ ಜರ್ಜರಿತಗೊಂಡಿರುವ ಜನರ ಸಹಾಯಕ್ಕೆ ಧಾವಿಸಬೇಕು. ಆದರೆ ಈ ಎಲ್ಲ ಸಮಸ್ಯೆಗಳನ್ನು ಕಡೆಗಣಿಸಿ, ಅನೈತಿಕ ದಾರಿಯಲ್ಲಿ ರಾಜ್ಯಸಭಾ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವುದರತ್ತ ಗುಜರಾತ್ ಸರಕಾರ ಮಗ್ನವಾಗಿದೆ. ಅಭಿವೃದ್ಧಿಗೆ ಹಣವಿಲ್ಲ ಎಂದು ಕೈಚೆಲ್ಲಿ ಕೂತಿರುವವರು, ಇದೀಗ ‘ಆಪರೇಷನ್ ಕಮಲ’ದ ಹೆಸರಲ್ಲಿ ಕೋಟಿ ಕೋಟಿ ಹಣವನ್ನು ಚೆಲ್ಲ ತೊಡಗಿದ್ದಾರೆ. ಅಲ್ಲಿನ ಕಾಂಗ್ರೆಸ್ ಪಕ್ಷ ಕೊರೋನ ವಿರುದ್ಧ ಹೋರಾಟದಲ್ಲಿ ಸರಕಾರದೊಂದಿಗೆ ಭಾಗಿಯಾಗುವುದು ಬಿಟ್ಟು, ‘ಆಪರೇಷನ್ ಕಮಲ’ದ ಸೋಂಕಿಗೆ ಹೆದರಿ ರೆಸಾರ್ಟ್ ಕ್ವಾರಂಟೈನ್ ಮಾಡುತ್ತಿದೆ. ಗುಜರಾತ್‌ನಲ್ಲಿ ಆಪರೇಷನ್ ಕಮಲದ ಭೀತಿ ಕಾಂಗ್ರೆಸ್‌ಗೆ ಹೊಸದೇನೂ ಅಲ್ಲ. ಸಂದರ್ಭ ಬಂದಾಗೆಲ್ಲ ಒಬ್ಬೊಬ್ಬ ಶಾಸಕರನ್ನೇ ಕೊಂಡು ಬಿಜೆಪಿ ತನ್ನ ಬುಟ್ಟಿಗೆ ಹಾಕಿಕೊಳ್ಳುತ್ತಾ ಬಂದಿದೆ. 2017ರಲ್ಲಿ ನಡೆದ ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ ಗುಜರಾತ್‌ನಲ್ಲಿ ನಡೆದ ಪ್ರಹಸನವಂತೂ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಆ ಪ್ರಹಸನದಲ್ಲಿ ಕರ್ನಾಟಕವೂ ಭಾಗಿಯಾಗಿರುವುದು ವಿಶೇಷವಾಗಿತ್ತು. ತಮ್ಮ ಶಾಸಕರು ಬಿಜೆಪಿಗೆ ಮಾರಾಟವಾಗದಂತೆ ನೋಡಿಕೊಳ್ಳಲು ಗುಜರಾತ್‌ನ ಕಾಂಗ್ರೆಸ್ ನಾಯಕರು ಬೆಂಗಳೂರು ರೆಸಾರ್ಟ್‌ನ್ನು ಆಶ್ರಯಿಸಿದರು.

ಗುಜರಾತ್ ಶಾಸಕರ ರಕ್ಷಣೆಯ ಸಂಪೂರ್ಣ ಹೊಣೆಯನ್ನು ಡಿ.ಕೆ. ಶಿವಕುಮಾರ್ ಅಂದು ವಹಿಸಿಕೊಂಡಿದ್ದರು ಮತ್ತು ಅದರಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದರು. ಈ ಪ್ರಕರಣದಿಂದ ಕಾಂಗ್ರೆಸ್‌ನೊಳಗೆ ಡಿಕೆಶಿ ಅವರ ಪ್ರತಿಷ್ಠೆ ಹೆಚ್ಚಿತ್ತು. ಇದೇ ಸಂದರ್ಭದಲ್ಲಿ ಕೇಂದ್ರದ ಬಿಜೆಪಿ ವರಿಷ್ಠರ ಕೆಂಗಣ್ಣಿಗೂ ಡಿಕೆಶಿ ಬಿದ್ದರು. ಇದರ ಪರಿಣಾಮವಾಗಿಯೇ ಅವರ ಮೇಲೆ ಐಟಿ ದಾಳಿಗಳು ನಡೆದವು ಎಂದು ಆರೋಪಿಸಲಾಗುತ್ತದೆ. ಆ ದಾಳಿಯ ಬಳಿಕ ಡಿಕೆಶಿ ಜೈಲಿಗೂ ಹೋಗಿ ಬರಬೇಕಾಯಿತು. ಇದೀಗ ಗುಜರಾತ್‌ನಲ್ಲಿ ಇತಿಹಾಸ ಪುನರಾವರ್ತನೆಯಾಗಿದೆ. ಈಗಾಗಲೇ ಮೂವರು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದು, ಇನ್ನಷ್ಟು ಶಾಸಕರಿಗೆ ಬಿಜೆಪಿ ಕಣ್ಣು ಹಾಕಿದೆ. ಆದುದರಿಂದ ಕಾಂಗ್ರೆಸ್ ನಾಯಕರು ತಮ್ಮ ಶಾಸಕರನ್ನು ಉಳಿಸಿಕೊಳ್ಳಲು ರೆಸಾರ್ಟ್‌ನಲ್ಲಿ ಅವಿತುಕೂತಿದ್ದಾರೆ. ಒಂದನ್ನು ಗಮನಿಸಬೇಕಾಗಿದೆ. ದೇಶವನ್ನು ಅಭಿವೃದ್ಧಿಗೊಳಿಸುವುದಕ್ಕೆ ಸರಕಾರದ ಬಳಿ ಹಣವಿಲ್ಲ ಎನ್ನುವುದನ್ನು ಸ್ವತಃ ವಿತ್ತ ಸಚಿವರು ಒಪ್ಪಿಕೊಂಡಿದ್ದಾರೆ. ಎಲ್ಲ ಯೋಜನೆಗಳನ್ನು ಒಂದು ವರ್ಷದ ಮಟ್ಟಿಗೆ ಮುಂದಕ್ಕೆ ಹಾಕಬೇಕು ಎಂದು ಸರಕಾರಕ್ಕೆ ಈಗಾಗಲೇ ಸಲಹೆ ನೀಡಲಾಗಿದೆ. ಆದರೆ ಈ ದೇಶದಲ್ಲಿ ಕೊರೋನ ವಿರುದ್ಧ ಲಾಕ್‌ಡೌನ್ ಘೋಷಣೆಯಾದ ಹೊತ್ತಿನಲ್ಲಿ, ಮಧ್ಯ ಪ್ರದೇಶದಲ್ಲಿ ಆಪರೇಷನ್ ಕಮಲ ನಡೆಯಿತು. ದೇಶದ ಅಭಿವೃದ್ಧಿಗೆ ಸರಕಾರದ ಬಳಿ ಹಣವಿಲ್ಲದೇ ಇದ್ದರೂ ಶಾಸಕರನ್ನು ಕೊಂಡುಕೊಳ್ಳುವುದಕ್ಕೆ ನಮ್ಮ ನಾಯಕರ ಬಳಿ ಇನ್ನೂ ಯಥೇಚ್ಛ ಹಣವಿದೆ ಎನ್ನುವುದನ್ನು ಇದು ಹೇಳಿತು.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರಕಾರ ಉರುಳಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರುವಷ್ಟರಲ್ಲಿ ಹಲವು ಕೋಟಿ ಹಣ ಶಾಸಕರಿಗೆ ವರ್ಗಾವಣೆಗೊಂಡಿದೆ. ಇದೀಗ ಮಹಾರಾಷ್ಟ್ರದ ಸರಕಾರವನ್ನು ಇದೇ ರೀತಿಯಲ್ಲಿ ಉರುಳಿಸುವ ಸಂಚು ನಡೆಯುತ್ತಿದೆ. ಇವುಗಳ ನಡುವೆಯೇ, ಗುಜರಾತ್‌ನಲ್ಲಿ ಕಾಂಗ್ರೆಸ್‌ನ ಮೂವರು ಶಾಸಕರು ರಾಜೀನಾಮೆ ನೀಡಿದ್ದಾರೆ. ಇನ್ನಷ್ಟು ಶಾಸಕರು ರಾಜೀನಾಮೆ ನೀಡುವ ಸಾಧ್ಯತೆಗಳು ಎದ್ದು ಕಾಣುತ್ತಿವೆ. ಇತ್ತ ಕರ್ನಾಟಕದಲ್ಲೂ, ‘ಆಪರೇಷನ್ ಕಮಲ’ದ ಬೆದರಿಕೆಗಳನ್ನು ಬಿಜೆಪಿಯೊಳಗಿರುವ ನಾಯಕರು ಒಡ್ಡುತ್ತಿದ್ದಾರೆ. ದೇಶದ ಅಭಿವೃದ್ಧಿಗೆ ಹಣವಿಲ್ಲದ ಈ ಹೊತ್ತಿನಲ್ಲಿ, ಶಾಸಕರನ್ನು ಕೊಂಡುಕೊಳ್ಳಲು ಬಿಜೆಪಿಯ ಬಳಿ ಹಣ ಎಲ್ಲಿಂದ ಬಂತು? ದೇಶದ ಆರ್ಥಿಕತೆ ಕುಸಿದು ಕೂತಿರುವಾಗ, ಬಿಜೆಪಿಯ ಆರ್ಥಿಕತೆ ಮಾತ್ರ ಹೇಗೇ ಅಭಿವೃದ್ಧಿಗೊಂಡಿತು? ವಿಶ್ವದಲ್ಲೇ ಬಿಜೆಪಿ ಅತ್ಯಂತ ಶ್ರೀಮಂತ ಪಕ್ಷ ಎಂದು ಗುರುತಿಸಿಕೊಂಡದ್ದು ಹೇಗೆ? ಈ ಪ್ರಶ್ನೆಗಳಿಗೂ, ನೋಟು ನಿಷೇಧದ ಬಳಿಕ ‘ಕಪ್ಪು ಹಣ ಎಲ್ಲಿ ಹೋಯಿತು?’ ಎಂಬ ಪ್ರಶ್ನೆಗೂ ನೇರ ಸಂಬಂಧವಿದೆ.

ಲಾಕ್‌ಡೌನ್ ಬಳಿಕ ಅಂಗಡಿಗಳು ತೆರೆದಿದ್ದರೂ ವ್ಯಾಪಾರಿಗಳಿಗೆ ಯಾವುದೇ ವ್ಯಾಪಾರಗಳಿಲ್ಲ. ಆದರೂ ಕುದುರೆ ವ್ಯಾಪಾರ ಮಾತ್ರ ಅತ್ಯಂತ ಲಾಭದಾಯಕವಾಗಿ ನಡೆಯುತ್ತಿದೆ. ನಮ್ಮ ರಾಜಕೀಯ ನಾಯಕರು ಲಜ್ಜೆಗಳನ್ನು ಕಳೆದುಕೊಂಡು ತಮ್ಮನ್ನು ತಾವು ಮಾರಾಟ ಮಾಡುತ್ತಿರುವ ಈ ಗಳಿಗೆ, ದೇಶದ ಅತಿ ದೊಡ್ಡ ದುರಂತ ಗಳಿಗೆಯಾಗಿದೆ. ಎಲ್ಲಿಯವರೆಗೆ ಮಾರಾಟವಾಗುವವರು ಇದ್ದಾರೆಯೋ ಅಲ್ಲಿಯವರೆಗೆ ಕೊಳ್ಳುವವರೂ ಇರುತ್ತಾರೆ. ಆದುದರಿಂದ ತಮ್ಮನ್ನು ತಾವು ಮಾರಾಟ ಮಾಡಿಕೊಳ್ಳುವ ಯಾವುದೇ ಸಿದ್ಧಾಂತ, ಸ್ವಂತಿಕೆ, ವ್ಯಕ್ತಿತ್ವವಿಲ್ಲದ ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಪಕ್ಷವೂ ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತದೆ. ಹೀಗೆ ಸಮಯ ಬಂದಾಗ ಮಾರಾಟವಾಗುವ ಬದಲು, ಆಯ್ಕೆಯಾದ ಶಾಸಕರನ್ನು ಬಹಿರಂಗವಾಗಿ ಹರಾಜು ಹಾಕಿ, ಅತಿ ಹೆಚ್ಚು ಶಾಸಕರನ್ನು ಕೊಂಡುಕೊಂಡ ಪಕ್ಷ ಸರಕಾರ ನಡೆಸುವುದೇ ಒಳ್ಳೆಯದಲ್ಲವೇ? ಈ ಮೂಲಕ ಜನರ ಮೇಲೆ ಪದೇ ಪದೇ ಚುನಾವಣೆಯನ್ನು ಹೇರುವುದನ್ನಾದರೂ ತಪ್ಪಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News