ಜೂ.10: ಎಪಿಎಂಸಿ ಕಾಯ್ದೆಗೆ ತಿದ್ದುಪಡಿಯ ಸುಗ್ರೀವಾಜ್ಞೆ ರದ್ದುಪಡಿಸಲು ಆಗ್ರಹಿಸಿ ಧರಣಿ

Update: 2020-06-08 17:27 GMT

ಬೆಂಗಳೂರು, ಜೂ.8: ಎಪಿಎಂಸಿ ಕಾಯ್ದೆ ತಿದ್ದುಪಡಿ ಮಸೂದೆ ಸುಗ್ರೀವಾಜ್ಞೆ ಮತ್ತು ಇತರ ತಿದ್ದುಪಡಿಗಳನ್ನು ಕೂಡಲೇ ರದ್ದುಪಡಿಸಬೇಕೆಂದು ಆಗ್ರಹಿಸಿ ಜೂ. 10ರಂದು ಸುಗ್ರೀವಾಜ್ಞೆ ಮತ್ತು ತಿದ್ದುಪಡಿ ಕಾಯ್ದೆಗಳ ಪ್ರತಿಗಳನ್ನು ಸಾರ್ವಜನಿಕವಾಗಿ ಸುಟ್ಟು ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಜಿ.ಸಿ. ಬಯ್ಯಾರೆಡ್ಡಿ ತಿಳಿಸಿದ್ದಾರೆ.

ಕೇಂದ್ರ ಸರಕಾರ ಇತ್ತೀಚಿಗೆ ಮಾಡಿರುವ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲು ಮಾಡಿರುವ ಸುಗ್ರೀವಾಜ್ಞೆ ಮತ್ತು ಇತರ ತಿದ್ದುಪಡಿಗಳನ್ನು ಕೂಡಲೇ ರದ್ದುಪಡಿಸಬೇಕು ಎಂದು ಒತ್ತಾಯಿಸಿ ದೇಶದಾದ್ಯಂತ ಅಖಿಲ ಭಾರತ ಕಿಸಾನ್ ಸಭಾದ ನೇತೃತ್ವದಲ್ಲಿ ಪ್ರತಿಭಟನೆಗಳು ನಡೆಯಲಿವೆ ಎಂದು ತಿಳಿಸಿದರು.

ಎಪಿಎಂಸಿ ತಿದ್ದುಪಡಿ ಕಾಯ್ದೆಯು ರೈತರು ಹಾಗೂ ಕೃಷಿಯನ್ನು ಕಾರ್ಪೋರೇಟ್ ಕಂಪನಿಗಳ ಮರ್ಜಿಗೆ ದೂಡುತ್ತವೆ. ಸರಕಾರದ ಈ ಕ್ರಮಗಳು ರೈತರ ಮೇಲೆ ಕಾರ್ಪೋರೇಟ್ ಕಂಪನಿಗಳು ದಾಳಿ ಮಾಡಲು ನಡೆಸಿದ ಹುನ್ನಾರವಾಗಿದೆ. 

ಕೊರೋನ ಲಾಕ್‍ಡೌನ್‍ನಿಂದ ರೈತರು ಸಾಕಷ್ಟ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರಿಗೆ ಆರ್ಥಿಕ ಬೆಂಬಲವನ್ನು ನೀಡದೆ ಅವರನ್ನು ಮತ್ತಷ್ಟು ತೊಂದರೆಗೊಳಪಡಿಸುವ ಚಿಂತನೆ ನಡೆದಿದೆ. ತಿದ್ದುಪಡಿ ಮಸೂದೆಯು ಖಾಸಗಿ ವಹಿವಾಟುದಾರರ ಹಾಗೂ ಕೃಷಿ ವ್ಯವಹಾರ ಸಂಸ್ಥೆಗಳ ಮೇಲಿನ ಎಲ್ಲಾ ನಿಬರ್ಂಧಗಳು ಹಾಗೂ ನಿಯಂತ್ರಣಗಳನ್ನು ತೆಗೆದು ಹಾಕಲಿದೆ. ಇದರಿಂದ ದೇಶದ ಸಮಗ್ರತೆಗೆ ಧಕ್ಕೆಯಾಗುತ್ತದೆ. ರಾಜ್ಯ ಸರಕಾರ ಕೂಡಲೇ ಈ ಕ್ರಮಗಳನ್ನು ವಿರೋಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ತಿದ್ದುಪಡಿ ಮಸೂದೆಯಿಂದ ಕೃಷಿ ಚಟುವಟಿಕೆಗಳ ಮೇಲೆ ರಾಜ್ಯಗಳಿಗೆ ನಿಯಂತ್ರಣವಿರುವುದಿಲ್ಲ. ಸರಕಾರವು ರೈತರೊಡನೆ ಚರ್ಚಿಸದೆ ಸುಗ್ರಿವಾಜ್ಞೆಗಳ ಮೂಲಕ ರೈತ ವಿರೋಧಿ ಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News